
ಮುಳಬಾಗಿಲು: ತಾಲ್ಲೂಕಿನ ಮೂವತ್ತು ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿರುವ ಶೇಕಡಾ 25ರಷ್ಟು ಹಣವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಶನಿವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಶೇಕಡಾ 25 ರಷ್ಟು ಹಣವನ್ನು ಎಸ್‌ಸಿ, ಎಸ್‌ಟಿ ಖಾತೆಗಳಿಗೆ ಹಾಕಿ ಖರ್ಚು ಮಾಡದೆ ಹಣವನ್ನು ದುರುಪಯೋಗಪಡಿಸಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಗಳು ತಾಲ್ಲೂಕು ಪಂಚಾಯಿತಿ ಮುಂಭಾಗ 13 ದಿನಗಳಿಂದ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತಿದ್ದರು. 13ನೇ ದಿನ ಶನಿವಾರ ರಾತ್ರಿ ನಗರದ ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಪಂಚಾಯಿತಿವರೆಗೆ ಪಂಜಿನ ಮೆರವಣಿಗೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣವನ್ನು ಮೀಸಲಿಡುವ ಖಾತೆಗೆ ಮಾತ್ರ ಹಾಕಿ ನಂತರ ಎಸ್‌ಸಿ, ಎಸ್‌ಟಿ ಮಾತ್ರ ಖರ್ಚು ಮಾಡಬೇಕು. ಆದರೆ, ಅಧಿಕಾರಿಗಳು ತಮ್ಮ ಮನಸೋ ಇಚ್ಛೆ ಪಂಚಾಯಿತಿ ಸಾಮಾನ್ಯ ಖಾತೆಯಲ್ಲಿ ಹಣ ಉಳಿಸಿಕೊಂಡು ಬೇಕಾಬಿಟ್ಟಿ ಖರ್ಚು ಮಾಡುವ ಮೂಲಕ ಪರಿಶಿಷ್ಟರಿಗೆ ಅನ್ಯಾಯ ಎಸಗಿದ್ದಾರೆಂದು ದಲಿತ ಸಂಘಟನೆಗಳ ಮುಖಂಡ ಮೆಕಾನಿಕ್ ಶ್ರೀನಿವಾಸ್ ಹಾಗೂ ಸಂಗಸಂದ್ರ ವಿಜಯ್ ಕುಮಾರ್ ಆರೋಪಿಸಿದರು.
ಹಾಗಾಗಿ ತಪ್ಪು ಮಾಡಿರುವ ಅಧಿಕಾರಿಗಳಿಗೆ ಕ್ರಮ ಜರುಗಿಸಬೇಕು. ಪರಿಶಿಷ್ಟರ ಹಣವನ್ನು ಎಸ್‌ಸಿ, ಎಸ್‌ಟಿ ಖಾತೆಗಳಿಗೆ ಮರಳಿಸಬೇಕು ಎಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವೀಣ್ ಪಿ.ಬಾಗೇವಾಡಿ ಅವರನ್ನು ಒತ್ತಾಯಿಸಿದರು. ಅವರು, ದುರುಪಯೋಗ ಹಣದ ಕುರಿತು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಆದರೆ, ಪ್ರತಿಭಟನಾಕಾರರು ಸ್ಥಳದಲ್ಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು. ಹಾಗಾಗಿ ಪ್ರತಿಭಟನೆ 14ನೇ ದಿನಕ್ಕೆ ಕಾಲಿಟ್ಟಿದೆ.
ನಾಗರಾಜ್, ಕೀಲುಹೊಳಲಿ ಸತೀಶ್, ಕಿಟ್ಟ, ಶ್ರೀರಾಮ್, ಜಗನ್, ಹರೀಶ್, ರಾಜಪ್ಪ ಮತ್ತಿತರರು ಇದ್ದರು.