
ಕೋಲಾರ: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ಗಾಗಿ ಭೂಮಿ ಕಳೆದುಕೊಂಡವರಿಗೆ ಕಾನೂನಿನ ಪ್ರಕಾರ ಹೆಚ್ಚುವರಿ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು. ಪಿ ನಂಬರ್ ದುರಸ್ತಿ ಸಮಸ್ಯೆ ಬಗೆಹರಿಸುವ ಕೆಲಸ ಕೂಡ ಮಾಡಲಾಗುವುದು. ಈ ಸಂಬಂಧ ರೈತರು ಹಾಗೂ ತಹಶೀಲ್ದಾರ್ ಜೊತೆ ಸಭೆ ನಡೆಸುತ್ತೇನೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಭರವಸೆ ನೀಡಿದರು.
ನಗರದ ಹಳೆ ಬಸ್ ನಿಲ್ದಾಣದಲ್ಲಿ ಸೋಮವಾರ ರೈತ ಸಂಘ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
60 ವರ್ಷಗಳ ಹಿಂದೆ ಸರ್ಕಾರ ಜಮೀನು ಮಂಜೂರು ಮಾಡಿದೆ. ಆದರೆ, ಜಮೀನು ಪಡೆದವರು ಖಾತೆ ಮಾಡಿಸಿಕೊಂಡಿಲ್ಲ. ಸರ್ವೆ ಆಗದೆ ಸಮಸ್ಯೆ ಉಳಿದುಕೊಂಡಿದೆ. ದುರಸ್ತಿ ಆದರೆ ಮಾತ್ರ ಸರ್ವೆ ನಡೆಸಲಾಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಈಗಾಗಲೇ 6,250 ರೈತರ ಸಮಸ್ಯೆ ಬಗೆಹರಿಸಲಾಗಿದೆ. ಪಿ ನಂಬರ್ ದುರಸ್ತಿ ಮಾಡಲಾಗುತ್ತಿದೆ. ಪಿ ನಂಬರ್ ದುರಸ್ತಿ ಆಗಬೇಕಿರುವ ರೈತರ ಪಟ್ಟಿ ನೀಡಿದರೆ ವಿಶೇಷ ಅಭಿಯಾನ ನಡೆಸಿ ಕ್ರಮ ವಹಿಸಲಾಗುವುದು ಎಂದರು.
ಕಾರಿಡಾರ್ ನಿರ್ಮಾಣ ಕೈಗೊಂಡಿದ್ದು ಕೇಂದ್ರ ಸರ್ಕಾರ. ಅವರ ಯೋಜನೆಯಲ್ಲಿ ಸರ್ವಿಸ್ ರಸ್ತೆ ಇರಲಿಲ್ಲ. ರೈತರಿಗೆ ಜಮೀನಿಗೆ ಹೋಗಲು ರಸ್ತೆ ಇಲ್ಲವಾಗಿದೆ. ಸರ್ವಿಸ್ ರಸ್ತೆ ನಿರ್ಮಾಣ ಸಂಬಂಧ ಭೂಮಿ ನೀಡುವಂತೆ ಕೇಂದ್ರ ಸರ್ಕಾರದವರು ಕೇಳಿದ್ದಾರೆ. ಹೀಗಾಗಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ತೀರ್ಮಾನ ನಡೆಯಬೇಕಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಮಾತನಾಡಿ, ‘ಸಂಸದ ಎಂ.ಮಲ್ಲೇಶ್ ಬಾಬು ಜಿಲ್ಲೆಯ ರೈತರ ಸಮಸ್ಯೆ ನಿವಾರಣೆಗೆ ಹಾಗೂ ಶಾಶ್ವತ ನೀರಾವರಿ ಯೋಜನೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಜಿಲ್ಲೆಯ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ತಮ್ಮ ಜೀವ ಹಾಗೂ ಕುಟುಂಬದ ಬದುಕು ಉಳಿಸಿ. ಯುವಕರು ಮಾದಕ ವಸ್ತುಗಳಿಂದ ದೂರವಿರಬೇಕು’ ಎಂದು ಸಲಹೆ ನೀಡಿದರು.
ಟೊಮೆಟೊ ಮಂಡಿ ಮಾಲೀಕ ಸಿಎಂಆರ್ ಶ್ರೀನಾಥ ಮಾತನಾಡಿ, ‘ಕೆ.ಸಿ.ವ್ಯಾಲಿ ನೀರು ಜಿಲ್ಲೆಗೆ ಹರಿದ ನಂತರ ವಾಣಿಜ್ಯ ಬೆಳೆಗಳಿಗೆ ರೋಗಗಳು ಹೆಚ್ಚಾಗಿವೆ. ಲಕ್ಷಾಂತರ ರೂಪಾಯಿ ಬಂಡವಾಳ ನಷ್ಟವಾಗುತ್ತಿದೆ. ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಟೊಮೆಟೊ ಮಾರುಕಟ್ಟೆಗೆ ಜಾಗ ನೀಡಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ‘ಕೃಷಿ ಭೂಮಿ ಉಳಿವಿಗಾಗಿ ರೈತರು ಹೋರಾಟಕ್ಕೆ ಮುಂದಾಗುವ ಜೊತೆಗೆ ಸರ್ಕಾರ ಕೃಷಿ ಆಧಾರಿತ ಹಾಗೂ ಮಾವು ಸಂಸ್ಕರಣ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೆಲೆ ಕಸಿದಾಗ ರೈತರ ರಕ್ಷಣೆಗೆ ಮುಂದಾಗಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಅಜಯ್ ಕುಮಾರ್, ‘ಜಿಲ್ಲೆಯ ರೈತರ ಸಮಸ್ಯೆಗಳಿಗೆ ಕಂದಾಯ, ಸರ್ವೆ ಹಾಗೂ ಎಲ್ಲಾ ಅಧಿಕಾರಿಗಳು ಸ್ಪಂದಿಸುತ್ತಾರೆ. ಜೊತೆಗೆ ಜಿಲ್ಲಾಡಳಿತವು ರೈತ ಪರವಾಗಿದೆ’ ಎಂದು ಧೈರ್ಯ ತುಂಬಿದರು.
ರೈತರ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ‘ರೈತರ ಸಮಸ್ಯೆಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಅನಧಿಕೃತ ನರ್ಸರಿ, ನಕಲಿ ಬಿತ್ತನೆ ಬೀಜ, ಕೀಟನಾಶಕ ನಿಯಂತ್ರಣಕ್ಕೆ ಕಾನೂನು ಜಾರಿ ಮಾಡಬೇಕು. ಕೆ.ಸಿ ವ್ಯಾಲಿ ನೀರು ಮೂರನೇ ಹಂತದ ಶುದ್ಧೀಕರಣ ಮಾಡಬೇಕು. ಪಾಲಿಹೌಸ್ ಹಾಗೂ ಡ್ರಿಪ್ ಸಾಮಗ್ರಿಗಳಿಗೆ ಶೇ 95ರಷ್ಟು ಸಬ್ಸಿಡಿ ನೀಡಬೇಕು. ಪಿ.ನಂಬರ್ ದುರಸ್ತಿ ಮಾಡಬೇಕು, ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ಗುಂಡು ತೋಪು ತೆರವುಗೊಳಿಸಲು ವಿಶೇಷ ತಂಡ ರಚಿಸಬೇಕು. ವಿಮೆ ಕಂಪನಿಗಳು ರೈತರನ್ನು ವಂಚಿಸುತ್ತಿದ್ದು, ಬೆಳೆ ನಷ್ಟವಾದಾಗ ಯಾವುದೇ ಷರತ್ತು ಇಲ್ಲದೆ ರೈತರಿಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ನಗರಸಭೆ ಆಯುಕ್ತ ನವೀನ್ ಚಂದ್ರ, ಜಿಲ್ಲಾಧಿಕಾರಿ ಆದೇಶದಂತೆ ಕೋಲಾರ ನಗರದಲ್ಲಿರುವ ಕಸವನ್ನು ಸಾವಯವ ಗೊಬ್ಬರ ಮಾಡಿ ರೈತರಿಗೆ 25 ಕೆ.ಜಿ ಮೂಟೆಯನ್ನು ₹ 125ರಂತೆ ಮಾರಾಟ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ರೈತರಿಗೆ ಹೆಲ್ಮೆಟ್ ಹಾಗೂ ಸಾವಯವ ಗೊಬ್ಬರ ವಿತರಣೆ ಮಾಡಲಾಯಿತು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಮುನಿರಾಜು, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್. ತರಕಾರಿ ಸಂಘದ ಅಧ್ಯಕ್ಷ ಅಂಬರೀಶ್, ಪುಟ್ಟರಾಜು, ಸತೀಶ್, ಕೆಎನ್‌ಎನ್ ಪ್ರಕಾಶ್, ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ವಕ್ಕಲೇರಿ ಹನುಮಯ್ಯ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ರೈತರರು, ಅಧಿಕಾರಿಗಳು ಭಾಗವಹಿಸಿದ್ದರು.
ರೈತರ ಜೀವನ ಹೆಜ್ಜೆಹೆಜ್ಜೆಗೂ ಸವಾಲಾಗಿದೆ. ಹವಾಮಾನ ವೈಪರೀತ್ಯ ಕಳಪೆ ಬಿತ್ತನೆ ಬೀಜ ಗೊಬ್ಬರ ಸಮಸ್ಯೆ ನೀರಿನ ಕೊರತೆ ರೋಗಬಾಧೆ ಬೆಳೆನಷ್ಟ ದರ ಕುಸಿತ ಸಮಸ್ಯೆ ಎದುರಿಸಬೇಕಾಗಿದೆಎಂ.ಆರ್.ರವಿ ಜಿಲ್ಲಾಧಿಕಾರಿ
ರೈತ ದಿನಾಚರಣೆ ಸಂಬಂಧ ರೈತ ಸಂಘದಿಂದ ಟೊಮೆಟೊ ಬೀನ್ಸ್ ಕ್ಯಾರೆಟ್ ಬೀಟ್ ರೂಟ್ ಮೆಣಸಿನಕಾಯಿ ಬದನೆಕಾಯಿ ರಾಗಿ ಭತ್ತ ಸೇರಿದಂತೆ ವಿವಿಧ ತರಕಾರಿ ಹಣ್ಣುಗಳು ಹಾಗೂ ಧಾನ್ಯವನ್ನು ರಾಶಿ ಹಾಕಿ ಪೂಜೆ ಮಾಡಲಾಯಿತು. ಕಾರ್ಯಕ್ರಮದ ನಂತರ ಅವುಗಳನ್ನು ತೆಗೆದುಕೊಂಡು ಹೋಗಲು ಕೆಲ ಮಹಿಳೆಯರು ಪುರುಷರು ಮುಗಿಬಿದ್ದರು. ಜೊತೆಗೆ ಕಿತ್ತಾಟವೂ ನಡೆದು ಕೆಲ ಮಹಿಳೆಯರು ಮುಗ್ಗರಿಸಿ ಬಿದ್ದರು. ಕೆಲವರು ಬ್ಯಾಗ್ ಚೀಲ ಸಿದ್ಧ ಮಾಡಿಟ್ಟುಕೊಂಡು ಕಾರ್ಯಕ್ರಮ ಮುಗಿಯುವುದನ್ನೇ ಕಾಯುತ್ತಿದ್ದರು.
ಕೋಲಾರ ಎಪಿಎಂಸಿಗೆ ರೈತರು 100 ಎಕರೆ ಜಮೀನು ಕೇಳುತ್ತಿದ್ದಾರೆ. 60 ಎಕರೆ ಜಾಗ ಗುರುತಿಸಿ ಪ್ರಸ್ತಾಪ ಕಳಿಸಲಾಗಿದೆ. ಇನ್ನೂ 20 ಎಕರೆಯನ್ನು ಹೆಚ್ಚುವರಿಯಾಗಿ ಪಡೆಯಲು ಪ್ರಯತ್ನ ನಡೆಯುತ್ತಿದೆ. ಹೊಸ ವರ್ಷದಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಎಂ.ಆರ್.ರವಿ ಹೇಳಿದರು. ಹಳೆ ಬಸ್ ನಿಲ್ದಾಣದಲ್ಲಿರುವ ಹೂವಿನ ಮಾರುಕಟ್ಟೆಯನ್ನು ಈಗಿರುವ ಎಪಿಎಂಸಿಗೆ ಸ್ಥಳಾಂತರ ಮಾಡಲಾಗುವುದು. ಹಳೆ ಬಸ್ ನಿಲ್ದಾಣವನ್ನು ₹ 13 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಇಲ್ಲಿ ಬಸ್ ನಿಲ್ದಾಣ ಮಳಿಗೆಗಳು ಬರಲಿವೆ ಎಂದರು.
ಕೋಲಾರ ತಾಲ್ಲೂಕಿನ ಕೆಂದಟ್ಟಿಯಲ್ಲಿ ಸಿಎನ್‌ಜಿ ಗ್ಯಾಸ್ ಉತ್ಪಾದನಾ ಘಟಕ ನಿರ್ಮಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅದಕ್ಕೆ 150 ಟನ್ ತ್ಯಾಜ್ಯ ಬೇಕು. ಕೋಲಾರ ವೇಮಗಲ್ ಮಾಲೂರು ನಗರದ ತ್ಯಾಜ್ಯ ಹಾಗೂ ಎಪಿಎಂಸಿಯಲ್ಲಿನ ತ್ಯಾಜ್ಯ ಬಳಸಿಕೊಂಡು ವೈಜ್ಞಾನಿಕವಾಗಿ ಸಿಎನ್‌ಜಿ ಗ್ಯಾಸ್ ಉತ್ಪಾದನೆ ಮಾಡಲಾಗುವುದು ಎಂದು ಎಂ.ಆರ್.ರವಿ ತಿಳಿಸಿದರು. ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿಗಳಲ್ಲಿ ಸಂಗ್ರಹಿಸುತ್ತಿರುವ ತ್ಯಾಜ್ಯವನ್ನು ಬಳಸಿಕೊಂಡು ಕೆಂದಟ್ಟಿಯಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಿ ಸಾವಯವ ಗೊಬ್ಬರವನ್ನು ಈಗಾಗಲೇ ಉತ್ಪಾದಿಸಲಾಗುತ್ತಿದೆ. ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡುತ್ತಿದ್ದು ಸ್ಥಳೀಯ ಸಂಸ್ಥೆಗಳಿಗೂ ಲಾಭ ಹಾಗೂ ರೈತರ ಜಮೀನಿಗೂ ಅನುಕೂಲವಾಗಿದೆ ಎಂದರು. ಕೋಲಾರದಲ್ಲಿ ಅಗ್ರಿ ಗೋಲ್ಡ್ ಮುಳಬಾಗಿಲಿನಲ್ಲಿ ಸೂರ್ಯಗೋಲ್ಡ್ ಬಂಗಾರಪೇಟೆಯಲ್ಲಿ ಜೀವಧಾರೆ ಕೆಜಿಎಫ್‌ನಲ್ಲಿ ಕೆಜಿಎಫ್ ಗೋಲ್ಡ್ ಎಂಬ ಹೆಸರಿನಲ್ಲಿ ಕಡಿಮೆ ದರದಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡುತ್ತಿದ್ದೇವೆ. ಎಲ್ಲಾ ಎಪಿಎಂಸಿಗಳಲ್ಲಿ ಸಾವಯವ ರಸಗೊಬ್ಬರ ಮಾರಾಟ ಮಾಡಲು ಮಳಿಗೆ ತೆರೆಯಲು ಅಧಿಕಾರಿಗಳಿಗೆ ಸೂಚಿಸುವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.