ADVERTISEMENT

DCC ಬ್ಯಾಂಕ್‌ ಆಡಳಿತ ಮಂಡಳಿಗೆ ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆ; ನಾಟಕೀಯ ಬೆಳವಣಿಗೆ

ವಿಡಿಯೋ ನೀಡುವಂತೆ ಅಭ್ಯರ್ಥಿ, ಜೆಡಿಎಸ್‌ ಮುಖಂಡರಿಂದ ಪ್ರತಿಭಟನೆ–ಪೊಲೀಸರ ಪ್ರವೇಶ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:06 IST
Last Updated 7 ನವೆಂಬರ್ 2025, 7:06 IST
ಕೋಲಾರದಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆಯ ಲಾಟರಿ ಪ್ರಕ್ರಿಯೆ ವಿಡಿಯೊ ನೀಡುವಂತೆ ಆಗ್ರಹಿಸಿ ಪ್ರತಿಸ್ಪರ್ಧಿ ಆನಂದ್‌ ಕುಮಾರ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಮನವೊಲಿಸಲು ಪ್ರಯತ್ನಿಸಿದರು
ಕೋಲಾರದಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆಯ ಲಾಟರಿ ಪ್ರಕ್ರಿಯೆ ವಿಡಿಯೊ ನೀಡುವಂತೆ ಆಗ್ರಹಿಸಿ ಪ್ರತಿಸ್ಪರ್ಧಿ ಆನಂದ್‌ ಕುಮಾರ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಮನವೊಲಿಸಲು ಪ್ರಯತ್ನಿಸಿದರು    

ಕೋಲಾರ: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಆಡಳಿತ ಮಂಡಳಿಯ ನಿರ್ದೇಶಕರಾಗಿ ಲಾಟರಿ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಖಾಜಿಕಲ್ಲಹಳ್ಳಿ ಮುನಿರಾಜು ಆಯ್ಕೆ ಆಗಿರುವ ಸಂಬಂಧಿಸಿದ ವಿಡಿಯೋ ನೀಡುವಂತೆ ಪರಾಜಿತ ಅಭ್ಯರ್ಥಿ ಹಾಗೂ ಜೆಡಿಎಸ್‌ ಮುಖಂಡರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಡಿಸಿಸಿ ಬ್ಯಾಂಕ್‌ ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಡಾ.ಎಚ್‌.ಪಿ.ಎಸ್‌.ಮೈತ್ರಿ ಅವರ ಕಚೇರಿ (ಜಿಲ್ಲಾಡಳಿತ ಭವನ) ಬಳಿ ಗುರುವಾರ ನಾಟಕೀಯ ಬೆಳವಣಿಗೆ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ.

ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವಿಡಿಯೋ ನೀಡುವಂತೆ ಮನವಿ ಸಲ್ಲಿಸಿದ್ದರೂ ನಿರಾಕರಿಸಿ ಅಧಿಕಾರ‌ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕೋಲಾರ ತಾಲ್ಲೂಕು ಪ್ರಾಥಮಿಕ ಪತ್ತಿನ ಸಹಕಾರ ಸಂಘದಿಂದ ಆಯ್ಕೆ ನಿರ್ದೇಶಕ ಸ್ಥಾನವು ಪಾರದರ್ಶಕವಾಗಿ ನಡೆದಿಲ್ಲ. ಇಬ್ಬರು ಅಭ್ಯರ್ಥಿಗಳಿಗೆ ಸಮಾನ ಮತಗಳು ಬಂದ ಹಿನ್ನೆಲೆಯಲ್ಲಿ ಚೀಟಿಯಲ್ಲಿ ಹೆಸರು ಬರೆದು ಲಾಟರಿ ಮೂಲಕ ಆಯ್ಕೆ ಮಾಡಿದ್ದರು. ಆದರೆ, ಚೀಟಿಯಲ್ಲಿ ಉಪವಿಭಾಗಾಧಿಕಾರಿಯೇ ಹೆಸರು ಬರೆದು ಅವರೇ ಎತ್ತಿದ್ದರು. ಆ ರೀತಿ ಮಾಡುವಂತಿಲ್ಲ. ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಚುನಾವಣಾ ಪ್ರಕ್ರಿಯೆಯ ವಿಡಿಯೋ ನೀಡಬೇಕೆಂದು ಮನವಿ ಮಾಡಿದ್ದವು. ಆದರೆ. ವಿಡಿಯೋ ನೀಡದೇ ಚುನಾವಣಾಧಿಕಾರಿಯು ನಮ್ಮನ್ನು ಸತಾಯಿಸುತ್ತಿದ್ದಾರೆ’ ಪ್ರತಿಸ್ಪರ್ಧಿ ಆನಂದಕುಮಾರ್‌ ಹಾಗೂ ಜೆಡಿಎಸ್ ಕಾರ್ಯಕರ್ತರು ದೂರಿದರು.

ಉಪವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿ ರವಿ, ವಿಡಿಯೋವಿರುವ ಪೆನ್ ಡ್ರೈ ಇಟ್ಟುಕೊಂಡಿದ್ದಾರೆ. ಅವರು ಅದನ್ನು ತಿರುಚುವ ಸಾಧ್ಯತೆ ಇದೆ. ಕೂಡಲೇ ನಮಗೆ ಆ ವಿಡಿಯೋ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ರವಿ ಅವರನ್ನು ಕಚೇರಿಯಿಂದ ಮನೆಗೆ ತೆರಳು ಬಿಡದೇ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ಸರ್ಕಲ್‌ ಇನ್‌ಸ್ಪೆಕ್ಟರ್‌ ಲೋಕೇಶ್‌ ನೇತೃತ್ವದಲ್ಲಿ ಪೊಲೀಸರು ಜೆಡಿಎಸ್ ಕಾರ್ಯಕರ್ತರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೂ ಪ್ರತಿಭಟನಕಾರರು ಪಟ್ಟು ಬಿಡಲಿಲ್ಲ.

ಈ ವೇಳೆ ನುಕ್ಕನಹಳ್ಳಿ‌ ರಘುನಾಥ್, ಟಮಕಾ ರಮೇಶ್, ಜೆಡಿಎಸ್ ಯುವಕ ಘಟಕ ಅಧ್ಯಕ್ಷ, ವಿಜಯ್ ಗೌಡ, ಬಣಕನಹಳ್ಳಿ‌ ನಟರಾಜ್, ವಕ್ಕಲೇರಿ ಪಿಎಲ್.ಡಿ ಬ್ಯಾಂಕಿನ ನಿರ್ದೇಶಕ ಮಂಜುನಾಥ್‌ ಗೌಡ ಇದ್ದರು.

ಏನಿದು ಪ್ರಕರಣ?

ಡಿಸಿಸಿ ಬ್ಯಾಂಕ್‌ನ ಕೋಲಾರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಒಟ್ಟು 12 ಮತಗಳು ಇದ್ದವು. ಅದರಲ್ಲಿ ಮೇ 28ರಂದು ಚುನಾವಣೆ ನಡೆದಾಗ ಕಾಂಗ್ರೆಸ್‌ ಬೆಂಬಲಿತ ಮುನಿರಾಜು 5 ಹಾಗೂ ಮೈತ್ರಿಕೂಟದ ಅಭ್ಯರ್ಥಿ ಎಂ.ಆನಂದಕುಮಾರ್‌ 6 ಮತ ಪಡೆದಿದ್ದರು.

ಕ್ಯಾಲನೂರು ಸೊಸೈಟಿಗೆ ಸಂಬಂಧಿಸಿದ ಒಂದು ಮತದ ಹಕ್ಕಿನ ವಿಚಾರದಲ್ಲಿ ನ್ಯಾಯಾಲಯ ಮೊರೆ ಹೋಗಲಾಗಿತ್ತು. ಅದು ಇತ್ಯರ್ಥಗೊಂಡಿದ್ದು ಆ ಮತ ಎಣಿಕೆ ನಡೆಸಲು ನ್ಯಾಯಾಲಯ ಆದೇಶಿಸಿತ್ತು. ಅದರಂತೆ ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಡಾ.ಮೈತ್ರಿ ಉಭಯ ಅಭ್ಯರ್ಥಿಗಳ ಸಮ್ಮುಖದಲ್ಲಿ ಬುಧವಾರ ಮತ ಪೆಟ್ಟಿಗೆ ತೆಗೆದು ಎಣಿಕೆ ನಡೆಸಿದ್ದರು.

ಆ ಮತ ಮುನಿರಾಜು ಪರವಾಗಿತ್ತು. ಇದರಿಂದ ಇಬ್ಬರಿಗೂ ತಲಾ ಆರು ಮತಗಳು ಬಂದಂತಾಗಿ ಸಮಬಲವಾಯಿತು. ಫಲಿತಾಂಶ ನಿರ್ಧರಿಸಲು ಡಾ.ಮೈತ್ರಿ ಅವರು ಲಾಟರಿ ಮೊರೆ ಹೋದರು. ಇಬ್ಬರ ಹೆಸರನ್ನು ಪೆಟ್ಟಿಗೆಗೆ ಬರೆದು ಹಾಕಿ ಲಾಟರಿ ಎತ್ತಿದರು. ಅದರಲ್ಲೂ ಮುನಿರಾಜು ಅವರಿಗೆ ಅದೃಷ್ಟ ಒಲಿಯಿತು. ಅವರು ನಿರ್ದೇಶಕರಾಗಿ ಆಯ್ಕೆಯಾದರು.

ಈ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. ಡಾ.ಮೈತ್ರಿ ಅಭ್ಯರ್ಥಿಗಳ ಗಮನಕ್ಕೆ ತಂದು ಲಾಟರಿ ಎತ್ತಿದ್ದರು. ಇದಕ್ಕೆ ಎನ್‌ಡಿಎ ಅಭ್ಯರ್ಥಿ ಆಕ್ಷೇಪ ವ್ಯಕ್ತಪಡಿಸಿ ಲಾಟರಿಯನ್ನು ಬೇರೆಯವರಿಂದ ಎತ್ತಿಸಬೇಕು ಎಂದಿದ್ದರು.

ಆಗ ಚುನಾವಣಾಧಿಕಾರಿಯು ‘ಪಾರದರ್ಶನವಾಗಿ ಪ್ರಕ್ರಿಯೆ ನಡೆಯುತ್ತಿದೆ. ಬೇರೆಯವರು ಎಂದರೆ ಇನ್ಯಾರ ಕೈಯಲ್ಲಿ ಎತ್ತಿಸಬೇಕು’ ಎಂದು ಪ್ರಶ್ನಿಸಿದ್ದರು.