ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳ ಚುನಾವಣೆಗೆ ಕೇವಲ ಎರಡು ದಿನ ಬಾಕಿ ಇದ್ದು, ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಕಾಂಗ್ರೆಸ್ ಪಕ್ಷವೇ ಎದುರಾಳಿಯಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟ ಮೌನವಾಗಿದೆ.
ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿ ಎರಡು ಬಣಗಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಣ ಪೈಪೋಟಿ ಮತ್ತೆ ಮುನ್ನೆಲೆಗೆ ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಈಗ ಇದೇ ಪರಿಸ್ಥಿತಿ ಇದೆ.
ಸಹಜವಾಗಿ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ನೇತೃತ್ವದಲ್ಲಿ ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಹಲವರು ಒಂದು ಬಣದಲ್ಲಿದ್ದು, ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯಲು ಪ್ರಯತ್ನ ನಡೆಸಿದ್ದಾರೆ. ಮತ್ತೊಂದು ಬಣದಲ್ಲಿ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಶಶಿಧರ್ ಹಾಗೂ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೇರಿದಂತೆ ಹಲವರು ಇದ್ದಾರೆ.
ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ರಮೇಶ್ ಕುಮಾರ್ ಬಣದವರ ಮೇಲೆ ಮುಗಿಬೀಳುತ್ತಿದ್ದಾರೆ. ಎರಡು ದಿನಗಳ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ವಿಚಾರವಾಗಿ ಸ್ವಪಕ್ಷೀಯರ ವಿರುದ್ಧವೇ ಘರ್ಜಿಸಿದ್ದಾರೆ.
ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಎರಡೂ ಬಣಗಳಲ್ಲಿ ಚಟುವಟಿಕೆಗಳು ಜೋರಾಗಿವೆ. ಎಂದಿನಂತೆ ಮತದಾರರನ್ನು ಒಲಿಸಿಕೊಳ್ಳಲು ಕೊಡುಗೆಯ ಮಹಾಪೂರವೇ ಹರಿಯುತ್ತಿದೆ.
ಇನ್ನು ಜೆಡಿಎಸ್–ಬಿಜೆಪಿ ಮೈತ್ರಿಕೂಟದಲ್ಲಿ ಚಟುವಟಿಕೆಗಳು ಸ್ತಬ್ಧಗೊಂಡಂತಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಮೈತ್ರಿಕೂಟ ಸ್ಪರ್ಧಿಸಲಿದೆ ಎಂಬುದಾಗಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಹಾಲಿ ಸಂಸದ ಎಂ.ಮಲ್ಲೇಶ್ ಬಾಬು ಹೇಳಿದ್ದರು. ಆದರೆ, ಬಹುತೇಕ ಕ್ಷೇತ್ರಗಳಲ್ಲಿ ಮೈತ್ರಿಕೂಟ ಗಪ್‌ಚುಪ್ ಆಗಿದೆ. ರಾಜಕೀಯವಾಗಿ ತಮಗೆ ಅನುಕೂಲವಾಗುವ ಕಡೆ ಕಾಂಗ್ರೆಸ್‌ನ ಒಂದು ಗುಂಪು ಬೆಂಬಲಿಸಲು ನಿರ್ಧರಿಸಿದಂತೆ.
ಮೇ 28ರ ಬುಧವಾರ ಕೋಲಾರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 12 ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆಯಲಿದೆ. ಒಟ್ಟು 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈಗಾಗಲೇ ಆರು ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಚೇಳೂರು, ಗೌರಿಬಿದನೂರು ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕ ಕ್ಷೇತ್ರಗಳು ಸೇರಿದಂತೆ ಹಲವೆಡೆ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ನಡುವೆ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಬೆಂಬಲಿತರಾಗಿ ಎ.ವಿ.ಅಕ್ಕಲರೆಡ್ಡಿ ಕಣಕ್ಕಿಳಿದಿದ್ದಾರೆ. ಅವರಿಗೆ ಎಂ.ಎನ್.ಕೃಷ್ಣಮೂರ್ತಿ, ಪಿ.ಎನ್.ಮುನೇಗೌಡ ಅವರಿಂದ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ಮಂಚೇನಹಳ್ಳಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಚುನಾಯಿಸಲ್ಪಡುವ ನಿರ್ದೇಶಕರ ಕ್ಷೇತ್ರಕ್ಕೆ ಜೆ.ವಿ.ಹನುಮೇಗೌಡ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇಲ್ಲಿ ಮಾತ್ರ ಕಾಂಗ್ರೆಸ್ ಅವಕಾಶ ಕಳೆದುಕೊಂಡಿದೆ.
ಕೋಲಾರ, ಮುಳಬಾಗಿಲು ತಾಲ್ಲೂಕಿನಬ?ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರ ಕ್ಷೇತ್ರಗಳಿಗೂ ಕಾಂಗ್ರೆಸ್‌ಗೆ ಜೆಡಿಎಸ್–ಬಿಜೆಪಿ ಮೈತ್ರಿಕೂಟದಿಂದ ಪ್ರಬಲ ಸ್ಪರ್ಧೆ ಇದೆ.
ಕೋಲಾರದಲ್ಲಿ ಕಾಂಗ್ರೆಸ್‌ನ ಕೆ.ಎಂ.ಮುನಿರಾಜ ಹಾಗೂ ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಎಂ.ಆನಂದಕುಮಾರ್, ಮುಳಬಾಗಿಲಿನಲ್ಲಿ ಕಾಂಗ್ರೆಸ್‌ನ ಎಂ.ಸಿ.ಸರ್ವಜ್ಞಗೌಡ ಅವರಿಗೆ ಆರ್.ಅಮರನಾರಾಯಣಪ್ಪ, ವಿ.ರಘುಪತಿರೆಡ್ಡಿ ಪೈಪೋಟಿಯೊಡ್ಡಿದ್ದಾರೆ.
ಬಂಗಾರಪೇಟೆ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಕಾಂಗ್ರೆಸ್‌ನ ಕೆ.ಎಸ್.ರಂಗನಾಥಾಚಾರಿ ಹಾಗೂ ಬಿಜೆಪಿ–ಜೆಡಿಎಸ್‌ನ ವಿ.ಮಾರ್ಕಂಡೇಗೌಡ ಪೈಪೋಟಿ ನಡೆಸಿದ್ದಾರೆ.
ಈಗಾಗಲೇ ಎಂ.ರೂಪಕಲಾ ಶಶಿಧರ್ (ಕೆಜಿಎಫ್), ಎಸ್.ಎನ್.ಸುಬ್ಬಾರೆಡ್ಡಿ (ಬಾಗೇಪಲ್ಲಿ), ಕೊತ್ತೂರು ಮಂಜುನಾಥ್ (ಮುಳಬಾಗಿಲು ಟಿಎಪಿಸಿಎಂಎಸ್), ರಮೇಶ್ ಡಿ.ಎಸ್.(ಮಾಲೂರು), ಎ.ನಾಗರಾಜ (ಶಿಡ್ಲಘಟ್ಟ), ವಿ.ಹನುಮೇಗೌಡ (ಮಂಚೇನಹಳ್ಳಿ) ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇ 28ರಂದು 12 ನಿರ್ದೇಶಕರ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ | 6 ನಿರ್ದೇಶಕರು ಈಗಾಗಲೇ ಅವಿರೋಧ ಆಯ್ಕೆ | ಕಾಂಗ್ರೆಸ್‌ನ ಎರಡು ಬಣಗಳಿಂದ ಪರಸ್ಪರ ಪೈಪೋಟಿ
ಗೋವಿಂದಗೌಡ ಕಾಂಗ್ರೆಸ್ಸಿಗ ಎಂದಿದ್ದು ಯಾರು?
ಬ್ಯಾಲಹಳ್ಳಿ ಗೋವಿಂದಗೌಡ ಕಾಂಗ್ರೆಸ್‌ನವರು ಎಂದು ಹೇಳಿದ್ದು ಯಾರು? ಕಾಂಗ್ರೆಸ್ ಎಂದುಕೊಂಡು ಇಷ್ಟುದಿನ ಎಲ್ಲರ ಕಣ್ಣಿಗೆ ಮಣ್ಣೆರೆಚಿದ್ದಾರೆ. ನಾನು ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ಅವರನ್ನು ಕಾಂಗ್ರೆಸ್‌ಗೆ ಸೇರಿಕೊಂಡಿದ್ದು ನಿಜ. ನಂತರ ಅವರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದೆವು. ಬ್ಯಾಂಕ್‌ನ ಪಕ್ಕದಲ್ಲೇ ಕಾಂಗ್ರೆಸ್ ಕಚೇರಿ ಇದ್ದರೂ ಅವರು ಒಂದು ದಿನ ಕಚೇರಿಗೆ ಬರಲಿಲ್ಲ. ಅವರು ಎಲ್ಲಾ ಚುನಾವಣೆಗಳಲ್ಲಿ ಕೆಜಿಎಫ್ ಹೊರತುಪಡಿಸಿ ಉಳಿದೆಡೆ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. 12 ನಿರ್ದೇಶಕರ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈ ಸಲ ಕಾಂಗ್ರೆಸ್ ಬೆಂಬಲಿತ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲ್ಲಲಿದ್ದು ಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯುತ್ತೇವೆ. ಎಲ್ಲಾ ಕ್ಷೇತ್ರಗಳಲ್ಲಿ ಆಯಾಯ ಶಾಸಕರು ಕಾಂಗ್ರೆಸ್ ಮುಖಂಡರು ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದು ಗೆಲ್ಲಿಸಿಕೊಂಡು ಬರಲಿದ್ದಾರೆ. ಈಗಾಗಲೇ ನಮ್ಮ ಐವರು ಅಭ್ಯರ್ಥಿಗಳು ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂ.ಎಲ್.ಅನಿಲ್ ಕುಮಾರ್ ವಿಧಾನ ಪರಿಷತ್ ಸದಸ್ಯ
ಬ್ಯಾಲಹಳ್ಳಿ ತಡೆಯಲು ಖೆಡ್ಡಾ?
ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕ್‌ನ ಕಾರ್ಯವ್ಯಾಪ್ತಿಗೆ ಬರುವ ಇನ್ನಿತರೆ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರ ಕ್ಷೇತ್ರಕ್ಕೆ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದಿಂದ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ಶಾಸಕ ಕೆ.ವೈ.ನಂಜೇಗೌಡರ ಬೆಂಬಲಿಗ ಮಾಲೂರಿನ ಬಿ.ಆರ್.ಶ್ರೀನಿವಾಸ್ (ಪಿಎಲ್‌ಡಿ ಬ್ಯಾಂಕ್) ಅವರನ್ನು ಕಣಕ್ಕಿಳಿಸಲಾಗಿದೆ. ಮತ್ತೆ ಡಿಸಿಸಿ ಬ್ಯಾಂಕ್‌ನತ್ತ ಬರದಂತೆ ತಡೆಯಲು ಹೇಗಾದರೂ ಮಾಡಿ ಗೋವಿಂದಗೌಡರನ್ನು ಮಣಿಸಲು ಕೆ.ಆರ್.ರಮೇಶ್ ಕುಮಾರ್ ಬಣ ಖೆಡ್ಡಾ ರಚಿಸಿದೆ ಎಂಬುದು ತಿಳಿದುಬಂದಿದೆ.
ಶತ್ರುವಿನ ಶತ್ರು ಮಿತ್ರ!
ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಕೆಲವೆಡೆ ಕಾಂಗ್ರೆಸ್‌ನಲ್ಲೇ ಎರಡು ಗುಂಪುಗಳಿದ್ದು ಒಂದು ಗುಂಪಿಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟ ಬೆಂಬಲ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕೆಲವೆಡೆ ನಾಮಪತ್ರ ವಾಪಸ್ ಪಡೆಯುವ ಮೂಲಕ ಬಹಿರಂಗವಾಗಿ ಬೆಂಬಲ ನೀಡಿರುವುದು ಉಂಟು. ಅಂದರೆ ಶತ್ರುವಿನ ಶತ್ರು ಮಿತ್ರರಾಗಿದ್ದಾರೆ. ಶಾಸಕರಾದ ಕೊತ್ತೂರು ಮಂಜುನಾಥ್ ಹಾಗೂ ರೂಪಕಲಾ ಶಶಿಧರ್ ಕಾಂಗ್ರೆಸ್‌ನಲ್ಲೇ ಪ್ರತ್ಯೇಕ ಬಣದಲ್ಲಿರುವುದು ಗೊತ್ತಿರುವ ವಿಚಾರ. ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಕಾಂಕ್ಷಿಗಳಲ್ಲಿ ಒಬ್ಬರು. ಅವರ ವಿರುದ್ಧ ಕೆಜಿಎಫ್‌ನ ಟಿಎಪಿಸಿಎಂಎಸ್‌ನಿಂದ ಕಣಕ್ಕಿಳಿದಿದ್ದ ಬಿಜೆಪಿ ಮಾಜಿ ಶಾಸಕ ವೈ.ಸಂಪಂಗಿ ಪುತ್ರ ಪ್ರವೀಣ್ ಕುಮಾರ್ ನಾಮಪತ್ರ ಹಿಂಪಡೆದಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ನಿರ್ದೇಶಕರಾಗಿ ಕೊತ್ತೂರು ಅವಿರೋಧ ಆಯ್ಕೆಯಾಗಿದ್ದಾರೆ. ರೂಪಕಲಾ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಜಿಎಫ್‌ನಲ್ಲಿ ರೂಪಕಲಾ ಹಾಗೂ ಸಂಪಂಗಿ ಕುಟುಂಬ ರಾಜಕೀಯವಾಗಿ ಪ್ರಬಲ ವಿರೋಧಿಗಳು. ಆದರೆ ಕೊತ್ತೂರು ಹಾದಿ ಸುಗಮವಾಗಲು ಸಂಪಂಗಿ ಪುತ್ರ ನಾಮಪತ್ರ ವಾಪಸ್ ಪಡೆದಿರುವುದು ‘ಶತ್ರುವಿನ ಶತ್ರು ಮಿತ್ರ’ ಎಂಬ ಮಾತಿಗೆ ಇಂಬು ನೀಡಿದೆ.
ಕಣದಲ್ಲಿರುವ ಅಭ್ಯರ್ಥಿ, ಮತಕ್ಷೇತ್ರ
* ಎಂ.ಆನಂದಕುಮಾರ್ ಕೆ.ಎಂ.ಮುನಿರಾಜ: ಕೋಲಾರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
* ವಿ.ಮಾರ್ಕಂಡೇಗೌಡ ಕೆ.ಎಸ್.ರಂಗನಾಥಾಚಾರಿ: ಬಂಗಾರಪೇಟೆ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
* ಆರ್.ಅಮರನಾರಾಯಣಪ್ಪ ವಿ.ರಘುಪತಿರೆಡ್ಡಿ ಎಂ.ಸಿ.ಸರ್ವಜ್ಞಗೌಡ: ಮುಳಬಾಗಿಲು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
* ಎ.ಸಿ.ನಾಗರತ್ನ ಬಿ.ಎಸ್.ಶಶಿಕುಮಾರ್ ಬಿ.ವಿ.ಸುರೇಶ್ ರೆಡ್ಡಿ: ಶ್ರೀನಿವಾಸಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
* ಚಂದ್ರಾರೆಡ್ಡಿ ಜಿ. ಎನ್.ನಾಗಿರೆಡ್ಡಿ: ಚಿಂತಾಮಣಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
* ಎ.ವಿ.ಅಕ್ಕಲರೆಡ್ಡಿ ಎಂ.ಎನ್.ಕೃಷ್ಣಮೂರ್ತಿ ಪಿ.ಎನ್.ಮುನೇಗೌಡ ಎನ್.ಮಂಜುನಾಥ್: ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
* ಕೆ.ಜೆ.ಆನಂದರೆಡ್ಡಿ ಎಚ್.ಎನ್.ಮಂಜುನಾಥ್ ರೆಡ್ಡಿ: ಗುಂಡಿಬಂಡೆ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
* ವೆಂಕಟರಮಣರೆಡ್ಡಿ ಕೆ.ಎನ್. ಹನುಮಂತರೆಡ್ಡಿ: ಗೌರಿಬಿದನೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
* ಭಾಸ್ಕರರೆಡ್ಡಿ ಕೆ.ವಿ. ಪಿ.ಎನ್.ಮಂಜುನಾಥರೆಡ್ಡಿ ಬಿ.ಶೇಖರ್: ಚೇಳೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
* ಎಚ್.ವಿ.ವಿನೋದ್ ಕುಮಾರ್ ಕೆ.ಶಿವಾನಂದ: ಎರಡೂ ಜಿಲ್ಲೆಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರು (ಕೋಲಾರ ಜಿಲ್ಲೆ)
* ಎಚ್.ಎಸ್.ಮೋಹನರೆಡ್ಡಿ ಎಂ.ರಾಮಯ್ಯ: ಎರಡೂ ಜಿಲ್ಲೆಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರು (ಚಿಕ್ಕಬಳ್ಳಾಪುರ ಜಿಲ್ಲೆ)
* ಬ್ಯಾಲಹಳ್ಳಿ ಎಂ.ಗೋವಿಂದಗೌಡ ಬಿ.ಆರ್.ಶ್ರೀನಿವಾಸ್: ಬ್ಯಾಂಕ್‌ನ ಕಾರ್ಯವ್ಯಾಪ್ತಿಗೆ ಬರುವ ಇನ್ನಿತರೆ ಸಹಕಾರ ಸಂಘಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.