ADVERTISEMENT

ಡಿಸಿಸಿ ಬ್ಯಾಂಕ್‌ ಮನೆ ಮಾತಾಗಿದೆ: ಶಾಸಕ ಶ್ರೀನಿವಾಸಗೌಡ

ಮಹಿಳೆಯರು–ರೈತರಿಗೆ ಆರ್ಥಿಕ ನೆರವು: ಶಾಸಕ ಶ್ರೀನಿವಾಸಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 15:32 IST
Last Updated 7 ಆಗಸ್ಟ್ 2021, 15:32 IST
ಡಿಸಿಸಿ ಬ್ಯಾಂಕ್, ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸಹಯೋಗದಲ್ಲಿ ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಚೆಕ್‌ ವಿತರಿಸಿದರು
ಡಿಸಿಸಿ ಬ್ಯಾಂಕ್, ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸಹಯೋಗದಲ್ಲಿ ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಚೆಕ್‌ ವಿತರಿಸಿದರು   

ಕೋಲಾರ: ‘ದಿವಾಳಿಯಾಗಿ ಜನರ ಮನಸ್ಸಿನಿಂದಲೇ ಕಣ್ಮರೆಯಾಗುವ ಹಂತ ತಲುಪಿದ್ದ ಡಿಸಿಸಿ ಬ್ಯಾಂಕನ್ನು ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿಯು ರಾಜ್ಯದಲ್ಲೇ ನಂ.1ಆಗಿಸಿದೆ. ಗೋವಿಂದಗೌಡರಿಗೆ ಸಹಕಾರಿ ರಂಗದ ಮೇಲಿನ ಶ್ರದ್ಧೆ ಮತ್ತು ಬದ್ಧತೆ ಇದಕ್ಕೆ ಕಾರಣ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಶ್ಲಾಘಿಸಿದರು.

ಡಿಸಿಸಿ ಬ್ಯಾಂಕ್, ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ₹ 1.60 ಕೋಟಿ ಬಡ್ಡಿರಹಿತ ಸಾಲ ವಿತರಿಸಿ ಮಾತನಾಡಿದರು.

‘ಗೋವಿಂದಗೌಡರು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗುವುದಕ್ಕೆ ನಾನೇ ಮೊದಲು ವಿರೋಧಿಸಿದ್ದೆ. ಆದರೆ, ಅವರು ಲಾಟರಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು. ಅಂದು ವಿರೋಧಿಸಿದ್ದು ತಪ್ಪು ಎಂದು ನನಗೆ ಅರಿವಾಗಿದೆ. ಬ್ಯಾಂಕ್‌ ಇಂದು ಅವಿಭಜಿತ ಕೋಲಾರ ಜಿಲ್ಲೆಯ ಲಕ್ಷಾಂತರ ಮಹಿಳೆಯರು ಹಾಗೂ ರೈತರಿಗೆ ನೆರವಾಗುವ ಮೂಲಕ ಮನೆ ಮಾತಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ದಕ್ಷಿಣ ಕಸಬಾ ಸೊಸೈಟಿಗೆ ಮಾಜಿ ಶಾಸಕ ಕೆ.ಆರ್.ಶ್ರೀನಿವಾಸಯ್ಯ ನಿವೇಶನ ಒದಗಿಸಿಕೊಟ್ಟಿದ್ದಾರೆ. ಅವರ ನಂತರ ದಿವಂಗತ ಸಿ.ಬೈರೇಗೌಡರು ಮತ್ತು ಪಿ.ವೆಂಕಟಗಿರಿಯಪ್ಪ ಅವರು ಸೊಸೈಟಿ ಬೆಳೆಸಿದ್ದಾರೆ. ಈ ಮೂವರ ಹೆಸರಿನಲ್ಲಿ ತಲಾ ಒಂದೊಂದು ಮಹಡಿಯಂತೆ ₹ 2.50 ಕೋಟಿ ವೆಚ್ಚದಲ್ಲಿ 3 ಮಹಡಿಯ ವಾಣಿಜ್ಯ ಮಳಿಗೆ ನಿರ್ಮಿಸುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಭರವಸೆ ನೀಡಿದರು.

‘ಮಹಿಳೆಯರು ಸೊಸೈಟಿ ಅಥವಾ ಡಿಸಿಸಿ ಬ್ಯಾಂಕ್‌ನಲ್ಲಿ ಉಳಿತಾಯದ ಹಣ ಠೇವಣಿ ಇಡಬೇಕು. ಮಹಿಳೆಯರಿಗೆ ನೀಡುತ್ತಿರುವ ಸಾಲದ ಮೊತ್ತವನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ ಹೆಚ್ಚಿಸುತ್ತೇವೆ. ಸಾಲ ಪಡೆಯುವವರ ಖಾತೆಗೆ ನೇರವಾಗಿ ಹಣ ಹೋಗಲಿದ್ದು, ಎಟಿಎಂ ಮೂಲಕ ಡ್ರಾ ಮಾಡಿಕೊಳ್ಳಬಹುದು’ ಎಂದು ವಿವರಿಸಿದರು.

ಟೀಕಾಕಾರರಿಗೆ ಉತ್ತರ: ‘ಕೋವಿಡ್ ಜತೆ ಜೀವನ ನಡೆಸುವುದು ಅನಿವಾರ್ಯವಾಗಿದೆ. ಈ ಸಂಕಷ್ಟದಲ್ಲೂ ಡಿಸಿಸಿ ಬ್ಯಾಂಕ್ ಸಾಲ ನೀಡಿ ನೆರವಾಗುತ್ತಿದೆ. ಸಾಲ ವಿತರಣೆಯು ಆಂದೋಲನವಾಗಬೇಕು. ಅವಳಿ ಜಿಲ್ಲೆಯ ಪ್ರತಿ ಕುಟುಂಬಕ್ಕೂ ನೆರವಾಗುವ ಸಂಕಲ್ಪ ಆಡಳಿತ ಮಂಡಳಿಯದು. ಈ ನಡುವೆ ಕೆಲವರು ಬ್ಯಾಂಕ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಅವರಿಗೆ ಮಹಿಳೆಯರು ಸಾಲದ ಸಮರ್ಪಕ ಮರುಪಾವತಿ ಮೂಲಕ ಉತ್ತರ ಕೊಟ್ಟಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಹೇಳಿದರು.

ಬ್ಯಾಂಕ್‌ನ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್‌, ಕೆ.ವಿ.ದಯಾನಂದ್, ಕಸಬಾ ಸೊಸೈಟಿ ಅಧ್ಯಕ್ಷ ಶ್ರೀನಿವಾಸಪ್ಪ, ಉಪಾಧ್ಯಕ್ಷ ಶ್ರೀನಿವಾಸ್, ನಿರ್ದೇಶಕರಾದ ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ, ಪದ್ಮಮ್ಮ, ಸರೋಜಮ್ಮ, ವೆಂಕಟೇಶಪ್ಪ, ಕೆ.ವೆಂಕಟೇಶ್, ಮುನಿಯಪ್ಪ, ಶ್ರೀನಿವಾಸ್, ಪ್ರಕಾಶ್, ಮುನಿವೆಂಕಟಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.