ADVERTISEMENT

ಡಿಸಿಸಿ ಬ್ಯಾಂಕ್‌: ಕಿರಿಯ ಸಹಾಯಕನ ಅಮಾನತು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 5:52 IST
Last Updated 25 ಜನವರಿ 2026, 5:52 IST
ಡಿಸಿಸಿ ಬ್ಯಾಂಕ್‌ ಮುಖ್ಯ ಕಚೇರಿ
ಡಿಸಿಸಿ ಬ್ಯಾಂಕ್‌ ಮುಖ್ಯ ಕಚೇರಿ   

ಕೋಲಾರ: ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘಗಳ ಚಾಲ್ತಿ ಖಾತೆಗೆ ಹಣ ವ‌ರ್ಗಾವಣೆ ಮಾಡಿ ಉದ್ಯೋಗದಾತನ ವ್ಯವಹಾರದ ಆಸ್ತಿಗೆ ಹಾನಿ, ಕರ್ತವ್ಯ ಲೋಪ ಎಸಗಿರುವ ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪದಡಿ ಕಿರಿಯ ಸಹಾಯಕ ಎಂ.ಎ.ಅಮೀನ್ ಅವರನ್ನು ಅಮಾನತುಪಡಿಸಿ ಡಿಸಿಸಿ ಬ್ಯಾಂಕ್‌ನ ಸಿಇಒ ಆದೇಶಿಸಿದ್ದಾರೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನ ಕೋಲಾರ ಶಾಖೆಯ ಮೇಲ್ವಿಚಾರಕಾಗಿ ಕಾರ್ಯನಿರ್ವಹಿಸಿದ 2022ರ ಏ.7ರಂದು ಬ್ಯಾಂಕಿನ ಆಸ್ತಿ –ಜವಾಬ್ದಾರಿ ತಖ್ತೆಯಲ್ಲಿ, ಜವಾಬ್ದಾರಿ ಕಡೆ ಅವಕಾಶ ಎಂದು ಗುರ್ತಿಸಿರುವ ‘ಶೇ 2ರಷ್ಟು ಪ್ಯಾಕ್ಸ್‌ಗಳ ಕೊಡಬೇಕಾದ ಬಡ್ಡಿ, ಮಾರ್ಜಿನ್‌ ಕೊಡಬೇಕಾದ ಬಾಬ್ತು’ ಎಂಬ ಶೀರ್ಷಿಕೆಯಡಿ ₹ 28,12,540 ನಮೂದು ಇದ್ದು, ಬಿಜಿಎಲ್‌ ಖಾತೆ ಸಂಖ್ಯೆ 80056030013ಗೆ ಅನಧಿಕೃತವಾಗಿ ಖರ್ಚು ಹಾಕಲು ಅಂದಿನ ವ್ಯವಸ್ಥಾಪಕ ಎಂ.ಅಮರೇಶ್‌ ಅವರೊಂದಿಗೆ ಶಾಮೀಲಾಗಿ, ಈ ಮೊತ್ತವನ್ನು 11 ಸಹಕಾರ ಸಂಘಗಳ ಚಾಲ್ತಿ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ವ್ಯವಹಾರದ ಬಿಜಿಎಲ್‌ ವೋಚರ್‌ ವೆರಿಫಿಕೇಶನ್‌ ರಿಪೋರ್ಟ್‌ ಮೂಲಕ ಧೃಡಪಟ್ಟಿದೆ.

ಕೇಂದ್ರ ಕಚೇರಿಯ ಆದೇಶವಿಲ್ಲದೆ ಕೃತಕ ನಮೂದಿನ ಮೇರೆಗೆ ಅನಧಿಕೃತವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಐಡಿ ಸಂಖ್ಯೆಯನ್ನು 276 ಚೆಕ್ಕರ್‌ ಆಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಹಣ ವರ್ಗಾವಣೆಗೆ ‘ಶೇ 2ರ ಪ್ಯಾಕ್ಸ್‌ಗಳ ಬಡ್ಡಿ ಮಾರ್ಜಿನ್‌ ಕೊಡಬೇಕಾದ ಬಾಬ್ತು’ ಖಾತೆಯನ್ನು ದುರ್ಬಳಕೆ ಮಾಡಿಕೊಂಡಿಕೊಂಡು ಬ್ಯಾಂಕ್‌ಗೆ ಆರ್ಥಿಕ ಹಾನಿ ಉಂಟು ಮಾಡಲಾಗಿದೆ.

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲಕಾಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರು, ಅನಧಿಕೃತ ವ್ಯವಹಾರ ಮಾಡಿದವರ ಮೇಲೆ ಶಿಸ್ತುಕ್ರಮಕ್ಕೆ ಮತ್ತು ವಸೂಲಿಗೆ 2025ರ ಡಿ. 8ರಂದು ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದ್ದು, ಲಿಖಿತ ಹೇಳಿಕೆ ಸಲ್ಲಿಸಲು ಸೂಚಿಸಲಾಗಿತ್ತು. ಪ್ರಾಧಿಕಾರಕ್ಕೆ ಹೇಳಿಕೆ ಸಲ್ಲಿಸಲು ಹಾಗೂ ಪೂರಕ ದಾಖಲೆಗಳನ್ನ ಒದಗಿಸಲು ಕಾಲಾವಕಾಶ ನೀಡಿದ್ದರು. ಈ ಕುರಿತು ಆಡಳಿತಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಇದಕ್ಕೆ ಶಿಸ್ತುಕ್ರಮಕ್ಕೆ ಒಳಪಡಿಸಲು ನಿರ್ದೇಶನ ನೀಡಿದ್ದರು, ಇದರ ಹಿನ್ನೆಯಲ್ಲಿ ಬ್ಯಾಂಕಿನ ಸಿಇಒ, ಕಿರಿಯ ಸಹಾಯಕನನ್ನು ಅಮಾನತ್ತುಪಡಿಸಿ ಆದೇಶ ಹೊರಡಿದ್ದಾರೆ.