ADVERTISEMENT

ಡಿಸಿಸಿ ಬ್ಯಾಂಕ್‌ನಲ್ಲಿ 500 ಕಡತ ನಾಪತ್ತೆ

ಸಹಕಾರ ಸಪ್ತಾಹದಲ್ಲಿ ಬ್ಯಾಂಕ್‌ನ ಅಧಿಕಾರಿಗಳು, ವ್ಯವಸ್ಥೆ ವಿರುದ್ಧ ಶಾಸಕ ಕೊತ್ತೂರು ಮಂಜುನಾಥ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 7:01 IST
Last Updated 21 ನವೆಂಬರ್ 2025, 7:01 IST
ಕೋಲಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಿದರು. ಎಂ.ಎಲ್‌.ಅನಿಲ್‌ ಕುಮಾರ್‌, ಕೆ.ಎಸ್‌.ಗಣೇಶ್‌, ಚಂಜಿಮಲೆ ರಮೇಶ್‌, ಮುನಿರಾಜು ಹಾಗೂ ಸಹಕಾರಿಗಳು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಿದರು. ಎಂ.ಎಲ್‌.ಅನಿಲ್‌ ಕುಮಾರ್‌, ಕೆ.ಎಸ್‌.ಗಣೇಶ್‌, ಚಂಜಿಮಲೆ ರಮೇಶ್‌, ಮುನಿರಾಜು ಹಾಗೂ ಸಹಕಾರಿಗಳು ಪಾಲ್ಗೊಂಡಿದ್ದರು   

ಪ್ರಜಾವಾಣಿ ವಾರ್ತೆ

ಕೋಲಾರ: ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ವಿತರಿಸಿದ 500 ಕಡತಗಳೇ ನಾಪತ್ತೆಯಾಗಿವೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಯನ್ನು ಕೇಳಿದರೆ ಅವರು ರಜೆ ಹಾಕಿ ಪರಾರಿಯಾಗಿದ್ದಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

ರೈತರು, ಬಡ ಮಹಿಳೆಯರ ಹೆಸರಿನಲ್ಲಿ ಹಣ ನುಂಗಿದವರಿಗೆ ಬರಬಾರದ ರೋಗ ಬರಲಿ. ರೈತರು, ತಾಯಂದಿರಿಗೆ ಮೋಸ ಮಾಡಿದವರಿಗೆ ಖಂಡಿತ ಒಳ್ಳೆಯದಾಗುವುದಿಲ್ಲ. ಬ್ಯಾಂಕ್‌ ಸರಿಪಡಿಸುವ ಪ್ರಯತ್ನವನ್ನು ನಿರ್ದೇಶಕನಾಗಿ ನಾನು ಪ್ರಾಮಾಣಿಕವಾಗಿ ಮಾಡುವೆ ಎಂದರು.

ಬ್ಯಾಂಕ್ ಉಳಿಸಲು ಸರ್ಕಾರದಿಂದ ₹ 10 ಕೋಟಿ ಕೊಡಿಸಿದ್ದೆ. ಬ್ಯಾಂಕ್ ಚೆನ್ನಾಗಿಯೇ ನಡೆಯುತಿತ್ತು. ಕಡತ ಕೇಳಿದರೆ ಬ್ಯಾಂಕ್‌ನ ಸಿಬ್ಬಂದಿಯೊಬ್ಬರು ರಜೆ ಮೇಲೆ ತೆರಳಿದ್ದಾರೆ. ನಾವೇನು ಮಾಡುವುದು ಎಂದು ಕಿಡಿಕಾರಿದರು.

ತಮ್ಮ ಬೆವರಿನಲ್ಲಿಯೇ ಸ್ನಾನ ಮಾಡಿ ಜನತೆಗೆ ಅನ್ನ ಕೊಡುವ ವ್ಯಕ್ತಿ ಯಾರಾದರೂ ಇದ್ದರೆ ಅದು ರೈತ ಮಾತ್ರ. ಸಮಾಜದ ಪ್ರತಿಯೊಬ್ಬರಿಗೂ ಸಹಕಾರ ಸದಸ್ಯತ್ವ ಸಿಗಬೇಕು. ಈ ಕುರಿತು ಸಹಕಾರ ಕಾಯಿದೆಗೆ ತಿದ್ದುಪಡಿ ತರುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ಕಾರ್ಯಕ್ಕೆ ತಮ್ಮ ಬೆಂಬಲವೂ ಇದೆ ಎಂದರು.

ಕೋಲಾರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ₹ 1,600 ಕೋಟಿ ತಂದಿರುವೆ. ಸಾವಿರ ಕೋಟಿ ವೆಚ್ಚದಲ್ಲಿ ಕೆಲಸ ಪ್ರಗತಿಯಲ್ಲಿದೆ. ₹ 600 ಕೋಟಿ ಕೆಲಸಕ್ಕೆ ಟೆಂಡರ್ ಆಗಬೇಕಾಗಿದೆ. ದಾಖಲೆಗಳನ್ನು ಇಟ್ಟುಕೊಂಡಿದ್ದು, ಬೇಕಾದರೆ ಕಚೇರಿಗೆ ಬಂದು ಪರಿಶೀಲಿಸಿ ಎಂದು ತಿಳಿಸಿದರು.

ವೇಮಗಲ್‌–ನರಸಾಪುರ ಯೋಜನಾ ಪ್ರಾಧಿಕಾರ ಮಾಡಲಾಗಿದೆ. ಶೇ 80ರಷ್ಟು ಹಳದಿ ವಲಯ ಹಾಗೂ ಶೇ 20ರಷ್ಟು ಹಸಿರು ವಲಯ ಮಾಡಬೇಕೆಂಬ ನಿರ್ದೇಶನ ನಮಗಿದೆ. ಈ ರೀತಿ ಮಾಡಿದರೆ ರೈತರು ಊರು ಬಿಟ್ಟು ಹೋಗಬೇಕಾಗುತ್ತದೆ. ಹೀಗಾಗಿ, ಶೇ 60ರಷ್ಟು ಹಸಿರು ವಲಯ, ಶೇ 40ರಷ್ಟು ಹಳದಿ ವಲಯ ಮಾಡಲು ನಾವು ಮುಂದಾಗಿದ್ದೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ಸಹಕಾರಿ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿ ರಚಿಸಿದ್ದು, ವರದಿ ಪಡೆದುಕೊಂಡಿದ್ದಾರೆ. ಆದಷ್ಟು ಶೀಘ್ರ ಕಾಯಿದೆ ಜಾರಿಗೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ‘ಕೆಲವರ ಸ್ವತ್ತಾಗಿರುವ ಸಹಕಾರ ರಂಗದಲ್ಲಿ ಎಲ್ಲ ವರ್ಗಗಳಿಗೂ ಸಅವಕಾಶ ಕಲ್ಪಿಸುವ ಪ್ರಯತ್ನವಾಗಲಿ. ಜಿಲ್ಲೆಯ ರಾಜಕಾರಣಿಗಳು ಸಹಕಾರ ರಂಗವನ್ನು ಮೆಟ್ಟಿಲಾಗಿಸಿಕೊಂಡು ಮೇಲೆ ಹೋಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಸರ್ವರ ಪಾಲುದಾರಿಕೆಗೆ ಏನು ಮಾಡಲಾಗಿದೆ ಎಂಬ ಆತ್ಮಾವಲೋಕನಕ್ಕೆ ಈ ಸಪ್ತಾಹ ಕಾರಣವಾಗಬೇಕು’ ಎಂದರು.

ದೇಶದ ಅಭಿವೃದ್ಧಿಯಲ್ಲಿ ಸರ್ಕಾರದ ಯೋಜನೆಗಳು ಎಷ್ಟು ಮುಖ್ಯವೋ ಅಷ್ಟೇ ಪ್ರಮುಖ ಸ್ಥಾನವನ್ನು ಸಹಕಾರ ಸಂಸ್ಥೆಗಳು ಪಾಲು ಹೊಂದಿವೆ. ಜಿಲ್ಲೆಯ ಸಹಕಾರ ಕ್ಷೇತ್ರದ ಎರಡು ಕಣ್ಣುಗಳಾಗಿರುವ ಕೋಮುಲ್ ಹಾಗೂ ಡಿಸಿಸಿ ಬ್ಯಾಂಕ್ ಅಧಃಪತನದತ್ತ ಸಾಗಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ವಿ.ಗೋಪಿನಾಥ್, ‘ಸಹಕಾರ ಸಪ್ತಾಹದ ಸಮಾರೋಪವು ಜಿಲ್ಲೆಯ ಸಹಕಾರ ಸಂಸ್ಥೆಗಳಿಗೆ ಅಂಟಿರುವ ರೋಗಕ್ಕೆ ಸಮಾರೋಪವಾಗಬೇಕಿದೆ. ರೈತರ ಆತ್ಮಹತ್ಯೆ ತಡೆಗೆ ಕಾರಣವಾಗಿ ಆತ್ಮಸ್ಥೈರ್ಯ ತುಂಬಿದ ಸಹಕಾರಿ ಸಂಸ್ಥೆಗಳು ಉಳಿಸಲು ಪ್ರಯತ್ನವಾಗಲಿ’ ಎಂದು ಕೋರಿದರು.

ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ ಮಾತನಾಡಿ, ‘ಎಂಪಿಸಿಎಸ್‍ಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ರೈತರು ಹಾಕುವ ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ಹಣ ಪಾವತಿಯಾಗುತ್ತಿದೆ’ ಎಂದರು.

ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿ, ‘ಕೆಲವರ ಸ್ವಾರ್ಥಕ್ಕೆ ಸಹಕಾರ ರಂಗ ಬಲಿಕೊಡದಿರಿ. ಸಹಕಾರ ಸೋತಿದೆ, ಅನುದಾನವಿದ್ದರೂ ಅನುಷ್ಠಾನದ ಕೊರತೆ ಇದೆ. ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಸಹಕಾರ ಸಂಸ್ಥೆಗಳ ಗಣಕೀಕರಣಕ್ಕೆ ಒತ್ತು ನೀಡಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಸಂಸದರನ್ನು ಕರೆಯಬೇಕಾಗಿತ್ತು’ ಎಂದರು.

ರಾಜ್ಯ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ‘ಪ್ರತಿಯೊಬ್ಬರಿಗೂ ಷೇರು ಪಡೆಯುವ ಅವಕಾಶವಾಗಲಿ, ಸಹಕಾರ ರಂಗದಲ್ಲಿ ಪಾರದರ್ಶಕತೆ ಮೂಡಲು ಗಣಕೀಕರಣವಾಗಲಿ’ ಎಂದು ಹೇಳಿದರು.

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಮುರಳಿಗೌಡ, ‘ಸಹಕಾರ ಸಂಘಗಳ ನಿರ್ವಹಣೆಯಲ್ಲಿನ ವೈಫಲ್ಯ ಸರಿಪಡಿಸಬೇಕು, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಶೀಘ್ರ ಅಸ್ತಿತ್ವಕ್ಕೆ ಬಂದು ಮೀಟರ್ ಬಡ್ಡಿ ದಂಧೆಯಿಂದ ರೈತರು, ಮಹಿಳೆಯರನ್ನು ರಕ್ಷಿಸುವಂತಾಗಲಿ’ ಎಂದರು.

ಒಕ್ಕೂಟದ ಹಿರಿಯ ನಿರ್ದೇಶಕ ಟಿ.ಕೆ.ಬೈರೇಗೌಡ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಸಿಇಒ ಕೆ.ಎಂ.ಭಾರತಿ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಂ.ಮುನಿರಾಜು, ಒಕ್ಕೂಟದ ನಿರ್ದೇಶಕರಾದ ಬೆಟ್ಟಹೊಸಪುರ ಮುರಳೀಧರ್, ಗೋವರ್ಧನರೆಡ್ಡಿ, ಕೆ.ನಾರಾಯಣಗೌಡ, ಜಿ.ಸಿ.ಮಂಜುನಾಥರೆಡ್ಡಿ, ಎನ್.ಎಸ್.ಶಂಕರ್, ಷಂಷೀರ್, ಬಂಗಾರಪೇಟೆ ಟಿಎಪಿಸಿಎಂಎಸ್ ಉಪಾಧ್ಯಕ್ಷ ಅ.ನಾ.ಹರೀಶ್, ಒಕ್ಕೂಟದ ವ್ಯವಸ್ಥಾಪಕಿ ಲಕ್ಷ್ಮಿದೇವಿ, ರವಿ, ಪತ್ರಕರ್ತರ ಸಹಕಾರ ಸಂಘದ ಕಾರ್ಯದರ್ಶಿ ಗಂಗಾಧರ್ ಇದ್ದರು.

Highlights - 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಎಲ್ಲ ವರ್ಗಗಳಿಗೂ ಸಹಕಾರ ರಂಗದ ಸದಸ್ಯತ್ವ-ಕಾಯಿದೆ ತಿದ್ದುಪಡಿಗೆ ಸಹಮತ ಬ್ಯಾಂಕ್‌ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ: ಶಾಸಕ

ನಾನು ರಾಜಕೀಯ ಅಥವಾ ಯಾವುದೇ ಸಂಸ್ಥೆಯನ್ನು ನಂಬಿಕೊಂಡಿಲ್ಲ. ಇದನ್ನೇ ನಂಬಿ ಜೀವನ ಮಾಡಬೇಕೆಂಬ ಉದ್ದೇಶವೂ ನನಗಿಲ್ಲ. ರೈತರಿಗೆ ನೆರವಾಗಬೇಕೆಂಬ ಆಸೆ ನನಗಿದೆ
ಕೊತ್ತೂರು ಮಂಜುನಾಥ್‌ ಶಾಸಕ
400 ಮಹಿಳಾ ಸಂಘಗಳಿಗೆ ಸಾಲ ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ನವರು ಹೇಳುತ್ತಾರೆ. ಆದರೆ 300 ಸಂಘಗಳು ದಾಖಲೆಗಳೇ ಇಲ್ಲ ಸಾಲ ವಸೂಲಿಯೇ ಆಗಿಲ್ಲ
ಎಂ.ಎಲ್.ಅನಿಲ್ ಕುಮಾರ್ ವಿಧಾನ ಪರಿಷತ್‌ ಸದಸ್ಯ

ದುಡ್ಡು ತಿಂದವರಿಗೆ ಕುಷ್ಠ ರೋಗ ಬರಲಿ

ಡಿಸಿಸಿ ಬ್ಯಾಂಕ್‌ ಸೇರಿದಂತೆ ಸಹಕಾರ ಸಂಸ್ಥೆಗಳಲ್ಲಿ ದುಡ್ಡು ತಿಂದವರಿಗೆ ರೈತರಿಗೆ ಮಹಿಳೆಯರಿಗೆ ಅನ್ಯಾಯ ಮಾಡಿದವರಿಗೆ ಕುಷ್ಠ ರೋಗ ಹಾರ್ಟ್‌ ಅಟ್ಯಾಕ್‌ ಶುಗರ್‌ ಬಿ.ಪಿ. ಪೈಲ್ಸ್‌ ಬ್ರೇನ್‌ ಟೂಮರ್ ಬರುತ್ತದೆ ನಾಲಿಗೆ ಕಾಲು ಕೈ ಬಿದ್ದು ಹೋಗುತ್ತದೆ. ಕೋಲಾರಮ್ಮ ಅಂತರಗಂಗೆ ಶಿವನ ಸಾಕ್ಷಿಯಾಗಿಯೂ ಕಾಯಿಲೆ ಬಂದು ಹಾಳಾಗಿ ಹೋಗುತ್ತಾರೆ ನಾಶವಾಗಿ ಹೋಗುತ್ತಾರೆ. ನಾನಂತೂ ಮುಟ್ಟುವುದಿಲ್ಲ ತಿನ್ನುವುದಿಲ್ಲ ಎಂದು ಕೊತ್ತೂರು ಮಂಜುನಾಥ್‌ ಹೇಳಿದರು. ಡಿಸಿಸಿ ಬ್ಯಾಂಕ್‌ ಸರಿಪಡಿಸಲು ರೈತರಿಗೆ ನೆರವಾಗಲು ಪ್ರಯತ್ನ ಮಾಡುತ್ತೇನೆ. ಈ ನಿಟ್ಟಿನಲ್ಲಿ‌ ನಾನು ಬ್ಯಾಂಕ್‌ನ ನಿರ್ದೇಶಕನಾಗಿ ಬಂದಿದ್ದೇನೆ ಎಂದರು.

ಸಹಕಾರ ಸಂಸ್ಥೆಗಳಲ್ಲಿ ಮಾಫಿಯಾ

ಸಹಕಾರ ಸಂಸ್ಥೆಗಳಲ್ಲಿ ಕೆಲವೆಡೆ ಬೇರೆಯವರಿಗೆ ಪ್ರವೇಶ ನೀಡದೆಯೇ ಮಾಫಿಯಾ ಮಾದರಿ ಕೆಲಸ ನಡೆಯುತ್ತಿದೆ. ಇಂತಹ ಅಡ್ಡೆಗಳಿಗೆ ಕೊನೆಯಾಡಬೇಕು ಇದು ಬದಲಾಗಬೇಕು. ಪ್ರತಿಯೊಬ್ಬರಿಗೂ ಸದಸ್ಯತ್ವ ಸಿಗುವಂತೆ ಆಗಬೇಕು ಈ ನಿಟ್ಟಿನಲ್ಲಿ ಮುಳಬಾಗಿಲು ಟಿಎಪಿಸಿಎಂಎಸ್ ಬದಲಾವಣೆಯಾಗಲು ಶ್ರಮಪಟ್ಟಿದ್ದೇನೆ ಎಂದು ಕೊತ್ತೂರು ಮಂಜುನಾಥ್‌ ತಿಳಿಸಿದರು.

ಡೂಪ್ಲಿಕೇಟ್‌ ಪತ್ರಕರ್ತರ ಬಗ್ಗೆ ಎಚ್ಚರವಿರಲಿ

ಕೆಲ ಡೂಪ್ಲಿಕೇಟ್‌ ಪತ್ರಕರ್ತರು ಇದ್ದಾರೆ. ಸುಮ್ಮಸುಮ್ಮನೇ ಏನೇನೋ ಸುದ್ದಿ ಹಾಕಿಬಿಡುತ್ತಾರೆ. ಅಂಥವರನ್ನು ಪತ್ರಕರ್ತರ ಸಂಘ ನಿಯಂತ್ರಿಸಬೇಕಲ್ಲವೇ? ಅವರು ತಮ್ಮಲ್ಲಿ ಸದಸ್ಯರಾಗಿರುತ್ತಾರಲ್ಲವೇ? ಅಂಥವರನ್ನು ಏಕೆ ಸಂಘದಲ್ಲಿ ಇಟ್ಟುಕೊಂಡಿದ್ದೀರಿ? ಅವರಿಂದ ತಮಗೆ ತೊಂದರೆ ಆಗುವುದಿಲ್ಲವೇ? ಅವರನ್ನು ನಿಯಂತ್ರಿಸಬೇಕಲ್ಲವೇ? ಎಂದು ಕೊತ್ತೂರು ಮಂಜುನಾಥ್‌ ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.