ADVERTISEMENT

ಡಿಸಿಸಿ ಬ್ಯಾಂಕ್ ಸಾಲ ಮೇಳ: ಸ್ತ್ರೀ ಶಕ್ತಿ ಸಂಘಗಳಿಗೆ ₹5.80 ಕೋಟಿ ಸಾಲ ವಿತರಣೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 8:24 IST
Last Updated 30 ಜನವರಿ 2020, 8:24 IST
ಶ್ರೀನಿವಾಸಪುರದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ ಬುಧವಾರ ಏರ್ಪಡಿಸಿದ್ದ ಬಡ್ಡಿ ರಹಿತ ಸಾಲ ವಿತರಣಾ ಸಮಾರಂಭದಲ್ಲಿ ಕಸಬಾ ವ್ಯಾಪ್ತಿಯ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಶಾಸಕ ಕೆ.ಆರ್‌.ರಮೇಶ್ ಕುಮಾರ್‌ ಸಾಲ ವಿತರಿಸಿ ಮಾತನಾಡಿದರು
ಶ್ರೀನಿವಾಸಪುರದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ ಬುಧವಾರ ಏರ್ಪಡಿಸಿದ್ದ ಬಡ್ಡಿ ರಹಿತ ಸಾಲ ವಿತರಣಾ ಸಮಾರಂಭದಲ್ಲಿ ಕಸಬಾ ವ್ಯಾಪ್ತಿಯ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಶಾಸಕ ಕೆ.ಆರ್‌.ರಮೇಶ್ ಕುಮಾರ್‌ ಸಾಲ ವಿತರಿಸಿ ಮಾತನಾಡಿದರು   

ಶ್ರೀನಿವಾಸಪುರ: ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿ ರಹಿತ ಸಾಲ ಪಡೆದ ಫಲಾನುಭವಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು. ಆ ಮೂಲಕ ಬ್ಯಾಂಕ್‌ ಉಳಿಯಲು ಹಾಗೂ ಇನ್ನಷ್ಟು ಫಲಾನುಭವಿಗಳಿಗೆ ಅಭಿವೃದ್ಧಿ ಸಾಲ ನೀಡಲು ಅನುವು ಮಾಡಿಕೊಡಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ಸಮಾಜದಲ್ಲಿ ಒಳ್ಳೆ ಕೆಲಸ ಮಾಡುವವರಿಗೆ ತೊಂದರೆ ಕೊಡುವ ಜನ ಇದ್ದೇ ಇರುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಕರುಣೆ ಇಲ್ಲದವನು ಕಾಡು ಪ್ರಾಣಿಗಿಂತ ಕಡೆ ಎಂದು ಹೇಳಿದರು.

ಮಹಿಳೆಯರು ಮಾನಕ್ಕೆ ಅಂಜಿ ಜೀವನ ನಡೆಸುತ್ತಾರೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ರಕ್ಷಣೆ ಇತ್ಯಾದಿಗಳಿಗೆ ಆರ್ಥಿಕ ಶಕ್ತಿ ಬೇಕಾಗುತ್ತದೆ. ಇಲ್ಲಿನ ಡಿಸಿಸಿ ಬ್ಯಾಂಕ್‌ ನೀಡುತ್ತಿರುವ ಆರ್ಥಿಕ ನೆರವು ದೇಶದಲ್ಲಿಯೇ ಮಾದರಿಯಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಇಂಥ ಕಾರ್ಯ ನಡೆಯುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ದೇಶದಲ್ಲಿ ಬಡವ ಕನಸು ಕಾಣಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕನಸು ಕಾಣುವುದು ಶ್ರೀಮಂತರಿಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ. ಅಧಿಕಾರಿಗಳಿಗೆ ಹೃದಯವೇ ಇಲ್ಲ. ಬಡ್ಡಿ ಹಣ ನೀಡಲು ಸತಾಯಿಸುತ್ತಾರೆ. ಅವರಿಗೆ ಬಡ ಹೆಣ್ಣು ಮಕ್ಕಳ ನೋವು ಅರ್ಥವಾಗುವುದಿಲ್ಲ. ಈಗ ತಲಾ ₹ 50 ಸಾವಿರ ಸಾಲ ನೀಡಲಾಗುತ್ತಿದೆ. ಈ ಮೊತ್ತವನ್ನು ₹1 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ಅವರ ಶ್ರಮ ಹಾಗೂ ಪ್ರೋತ್ಸಾಹದ ಫಲವಾಗಿ ಇಂದು ಡಿಸಿಸಿ ಬ್ಯಾಂಕ್ ಸದೃಢವಾಗಿ ನಿಲ್ಲಲ್ಲು ಸಾಧ್ಯವಾಗಿದೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಹಂತ ಹಂತವಾಗಿ ₹ 100 ಕೋಟಿ ಸಾಲ ನೀಡಲು ಉದ್ದೇಶಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.