ADVERTISEMENT

ಜಿಲ್ಲೆಯಲ್ಲಿ 3 ಸೋಂಕಿತರ ಸಾವು

ಜೀವನ್ಮರಣ ಹೋರಾಟದಲ್ಲಿ ಕೊನೆಯುಸಿರು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 15:46 IST
Last Updated 20 ಆಗಸ್ಟ್ 2020, 15:46 IST

ಕೋಲಾರ: ಜಿಲ್ಲೆಯಲ್ಲಿ ಗುರುವಾರ 3 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಸೋಂಕಿತರ ಸಾವಿನ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಲ್ಲಿ ಕೆಲ ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದ ಮೂವರು ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಇದರ ಬೆನ್ನಲ್ಲೇ ಹೊಸದಾಗಿ 68 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದ್ದು, ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 803ಕ್ಕೆ ಜಿಗಿದಿದೆ.

ವಿಷಮ ಶೀತ ಜ್ವರದಿಂದ ಬಳಲುತ್ತಿರುವ 46 ಮಂದಿ ಮತ್ತು ಸೋಂಕಿತರ ಸಂಪರ್ಕದಿಂದ 20 ಮಂದಿಗೆ ಸೋಂಕು ತಗುಲಿದೆ. ಜತೆಗೆ ತೀವ್ರ ಉಸಿರಾಟ ಸಮಸ್ಯೆಯಿರುವ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

ADVERTISEMENT

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 25 ಮಂದಿಗೆ ಸೋಂಕು ಹರಡಿದೆ. ವಿಷಮ ಶೀತ ಜ್ವರವಿರುವ 15 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 10 ಮಂದಿಗೆ ಸೋಂಕು ಬಂದಿದೆ. ಮಾಲೂರು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಪೀಡಿತ 7 ಮಂದಿಗೆ, ಸೋಂಕಿತರ ಸಂಪರ್ಕದಿಂದ ಒಬ್ಬರಿಗೆ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಇಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 4 ಮಂದಿಗೆ ಮತ್ತು ಕೆಜಿಎಫ್‌ತಾಲ್ಲೂಕಿನಲ್ಲಿ ಸೋಂಕಿತರ ಸಂಪರ್ಕದಿಂದ ಇಬ್ಬರಿಗೆ ಸೋಂಕು ಬಂದಿದೆ. ಮುಳಬಾಗಿಲು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 17 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 3 ಮಂದಿಗೆ ಸೋಂಕು ತಗುಲಿದೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಪೀಡಿತ 3 ಮಂದಿಗೆ ಹಾಗೂ ಸೋಂಕಿತರ ಸಂಪರ್ಕದಿಂದ 4 ಮಂದಿಗೆ ಸೋಂಕು ಹರಡಿದೆ. ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಸುರಕ್ಷತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.