ADVERTISEMENT

ಫಲಿತಾಂಶ ಘೋಷಿಸಿ: ಡಿಡಿಪಿಐ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 15:31 IST
Last Updated 11 ಏಪ್ರಿಲ್ 2020, 15:31 IST

ಕೋಲಾರ: ಕೊರೊನಾ ಸೋಂಕಿನ ಕಾರಣಕ್ಕೆ ಸರ್ಕಾರ 1ನೇ ತರಗತಿಯಿಂದ 9ನೇ ತರಗತಿವರೆಗಿನ ಪರೀಕ್ಷೆ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು 2019-20ನೇ ಸಾಲಿನ ರೂಪಣಾತ್ಮಕ 1,2,3,4 ಹಾಗೂ ಸಂಕಲನಾತ್ಮಕ 1ರಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಶ್ರೇಣೀಕೃತ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಡಿಡಿಪಿಐ ಕೆ.ರತ್ನಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆ ಆಯುಕ್ತರು ಫಲಿತಾಂಶ ಪ್ರಕಟಣೆಗೆ ಈ ನಿಯಮ ಪಾಲಿಸುವಂತೆ ಸೂಚಿಸಿದ್ದಾರೆ. ತಂತ್ರಾಂಶದಲ್ಲಿ ಶಾಲಾವಾರು ಫಲಿತಾಂಶ ರೂಪಿಸಲಾಗಿದ್ದು, ಈ ಸಾಲಿನ 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆ, ಕಲಿಕಾ ಪ್ರಗತಿ ವರದಿ ಹಾಗೂ ವರ್ಗಾವಣೆ ಪತ್ರ ಪಡೆಯಲು ಎಸ್‍ಎಟಿಎಸ್ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

2019-20ನೇ ಸಾಲಿನಲ್ಲಿ ರೂಪಣಾತ್ಮಕ 1,2,3,4 ಹಾಗೂ ಎಸ್‍ಎ 1, ಎಸ್ಎ-2ರಲ್ಲಿ ಗಳಿಸಿರುವ ಅಂಕ ಮತ್ತು ಹಾಜರಾತಿಯನ್ನು ಪ್ರತಿ ವರ್ಷ ಅನುಸರಿಸಿದಂತೆ ಎಸ್‍ಎಟಿಎಸ್ ತಂತ್ರಾಂಶದಲ್ಲಿ ದಾಖಲಿಸಿ ಶ್ರೇಣೀಕೃತ ಫಲಿತಾಂಶ ಮತ್ತು ಕಲಿಕಾ ಪ್ರಗತಿ ವರದಿ ಪಡೆಯಬಹುದು ಎಂದು ವಿವರಿಸಿದ್ದಾರೆ.

ADVERTISEMENT

ಕೆಲ ಶಾಲೆಗಳಲ್ಲಿ ಎಸ್‍ಎ-2 ಪರೀಕ್ಷೆ ನಡೆಸದಿದ್ದರೂ ಉಳಿದ ಎಫ್-1,2,3,4 ಹಾಗೂ ಎಸ್‍ಎ-1ರ ಫಲಿತಾಂಶದ ಆಧಾರದ ಮೇಲೆ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಎಸ್‍ಎ-2 ಫಲಿತಾಂಶ ಲೆಕ್ಕಾಚಾರ ಮಾಡಿ ಪ್ರಕಟಿಸಬೇಕು. ವಿದ್ಯಾರ್ಥಿಯು ಸಿ ಶ್ರೇಣಿಗಿಂತ ಕಡಿಮೆ ಅಂಕ ಪಡೆದಿದ್ದರೆ ಅಂತಹ ವಿದ್ಯಾರ್ಥಿಗೆ ತಂತ್ರಾಂಶವು ಸ್ವಯಂಚಾಲಿತವಾಗಿ ಕನಿಷ್ಟ ಶ್ರೇಣಿಯಾದ ‘ಸಿ’ಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಪರಿಹಾರ ಬೋಧನೆ: ಒಂದು ವೇಳೆ ಯಾವುದೇ ವಿದ್ಯಾರ್ಥಿ ಕಡಿಮೆ ಅಂಕ ಗಳಿಸಿ ಅನುತ್ತೀರ್ಣರಾಗುವಂತಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ತಂತ್ರಾಂಶದಲ್ಲಿ ಈಗಾಗಲೇ ನೀಡಿರುವ ಮಾಡ್ಯೂಲ್‌ನಂತೆ ಪರಿಹಾರ ಬೋಧನೆ ಕೈಗೊಂಡು ಮುಂದಿನ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ಪರೀಕ್ಷೆ ನಡೆಸಿ ಅಥವಾ ಆನ್‌ಲೈನ್‌ ಮೂಲಕ ಪರೀಕ್ಷೆ ಮಾಡಿ ಮುಂದಿನ ತರಗತಿಗೆ ಬಡ್ತಿ ನೀಡಬೇಕೆಂದು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಾಗಿರುವ ದಿಗ್ಬಂಧನದ ಅವಧಿ ಮುಗಿದ ನಂತರ ಶಾಲೆಗಳಿಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಎಸ್‍ಎಟಿಎಸ್ ತಂತ್ರಾಂಶ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಶಾಲೆಯವರು ಇಚ್ಛಿಸಿದರೆ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ವಿವರ ನಮೂದಿಸಲು ಅವಕಾಶ ಕಲ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.