ADVERTISEMENT

ಜಾಲಪ್ಪರಿಗೆ ಗೌರವ ಸಮರ್ಪಣೆ: ಪೂರ್ವಭಾವಿ ಸಭೆ

ಜನಮಾನಸದಲ್ಲಿ ಉಳಿಯುವ ಮಹಾನ್ ನಾಯಕ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 13:02 IST
Last Updated 18 ಜುಲೈ 2021, 13:02 IST

ಕೋಲಾರ: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ನೀಡಿ ಹೃದಯವಂತಿಕೆ ಮೆರೆದಿರುವ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರಿಗೆ ಗೌರವ ಸಮರ್ಪಿಸುವ ಕುರಿತು ಚರ್ಚಿಸಲು ಜಿಲ್ಲಾ ಕೇಂದ್ರದ ಪತ್ರಕರ್ತರ ಭವನದಲ್ಲಿ ಜುಲೈ 21ರಂದು ಬೆಳಿಗ್ಗೆ 10.30ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಿಂದ ರಾಜಕೀಯ ಜೀವನ ಆರಂಭಿಸಿದ ಜಾಲಪ್ಪ ಅವರು ಸಂಸದ, ಶಾಸಕ, ಕೇಂದ್ರ ಮತ್ತು
ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುವ ಮೂಲಕ ಜನಮಾನಸದಲ್ಲಿ ಸದಾ ಉಳಿಯುವ ಮಹಾನ್ ನಾಯಕರಾಗಿ ಹೊರಹೊಮ್ಮಿದ್ದಾರೆ’ ಎಂದು ಬಣ್ಣಿಸಿದರು.

‘ಜಾಲಪ್ಪ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದು ರಾಜಕಾರಣ ಆರಂಭಿಸಿ, ಕ್ರಾಂತಿ ರಂಗದಿಂದ ಶಾಸಕರಾಗಿ ರಾಜಕೀಯ ಶಕ್ತಿ ತೋರಿದ್ದರು. ಕ್ರಾಂತಿರಂಗ ಜನತಾ ಪಕ್ಷದಲ್ಲಿ ವಿಲೀನವಾದ ನಂತರ ರಾಜ್ಯದ ಸಹಕಾರ, ಅಬಕಾರಿ, ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. 1996ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಜವಳಿ ಖಾತೆ ಸಚಿವರಾಗಿ ಮಾಡಿದ ಸೇವೆ ಅನನ್ಯ’ ಎಂದು ಸ್ಮರಿಸಿದರು.

ADVERTISEMENT

‘ಜಾಲಪ್ಪ ಅವರು ಕೋಲಾರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸುವ ಮೂಲಕ ಅವಿಭಜಿತ ಜಿಲ್ಲೆಯ ಲಕ್ಷಾಂತರ ರೋಗಿಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜಾಲಪ್ಪ ಆಸ್ಪತ್ರೆಯು ನೂರಾರು ಸೋಂಕಿತರ ಜೀವ ಉಳಿಸಿದೆ. ಲಕ್ಷಾಂತರ ಬಡ ರೋಗಿಗಳಿಗೆ ಬದುಕು ಕಟ್ಟಿಕೊಟ್ಟ ಮಹಾನ್ ನಾಯಕ ಜಾಲಪ್ಪ ಅವರನ್ನು ಗೌರವಿಸುವುದು ಅವಿಭಜಿತ ಜಿಲ್ಲೆಯ ಪ್ರತಿಯೊಬ್ಬರ ಕರ್ತವ್ಯ’ ಎಂದು ಅಭಿಪ್ರಾಯಪಟ್ಟರು.

ಕೃತಿ ರಚನೆ: ‘ಜಾಲಪ್ಪ ಅವರು ಅವಿಭಜಿತ ಜಿಲ್ಲೆಗೆ ನೀಡಿರುವ ಕೊಡುಗೆಯನ್ನು ಸದಾ ಸ್ಮರಿಸುವುದರ ಜತೆಗೆ ಮುಂದಿನ ಪೀಳಿಗೆಗೆ ಅವರ ಜನಪರ ಕಾರ್ಯದ ನೆನಪು ಸದಾ ಉಳಿಯಬೇಕು. ಈ ನಿಟ್ಟಿನಲ್ಲಿ ಅವರ ಜೀವನ ಚರಿತ್ರೆ ಕುರಿತ ಕೃತಿ ರಚನೆಯಾಗಬೇಕು. 96 ವರ್ಷದ ಇಳಿ ವಯಸ್ಸಿನಲ್ಲೂ ಅವರು ಅವಿಭಜಿತ ಜಿಲ್ಲೆಗೆ ನೀಡಿರುವ ಕೊಡುಗೆ, ಸೇವೆ ಸ್ಮರಿಸುವ ಮೂಲಕ ಅವರಿಗೆ ಗೌರವ ಸಮರ್ಪಿಸಬೇಕು’ ಎಂದು ಹೇಳಿದರು.

‘ಸಮಾನ ಮನಸ್ಕ ಸ್ನೇಹಿತರು, ಜನಪ್ರತಿನಿಧಿಗಳು, ಜಾಲಪ್ಪರ ಬಗ್ಗೆ ತಿಳಿದಿರುವ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಪೂರ್ವಭಾವಿ ಸಭೆಗೆ ಆಗಮಿಸಿ ಸಲಹೆ ನೀಡಬೇಕು. ಸಭೆಯಲ್ಲಿ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.