ADVERTISEMENT

ಕೋಲಾರ| ಒತ್ತುವರಿ ತೆರವಿಗೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 14:07 IST
Last Updated 24 ಜನವರಿ 2020, 14:07 IST
ಗಂಗರಸನಹಳ್ಳಿ ರೈತರ ಜಮೀನಿನ ಒತ್ತುವರಿ ತೆರವಿಗೆ ಒತ್ತಾಯಿಸಿ ರೈತ ಸೇನೆ ಸದಸ್ಯರು ಕೋಲಾರದಲ್ಲಿ ಶುಕ್ರವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.
ಗಂಗರಸನಹಳ್ಳಿ ರೈತರ ಜಮೀನಿನ ಒತ್ತುವರಿ ತೆರವಿಗೆ ಒತ್ತಾಯಿಸಿ ರೈತ ಸೇನೆ ಸದಸ್ಯರು ಕೋಲಾರದಲ್ಲಿ ಶುಕ್ರವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.   

ಕೋಲಾರ: ತಾಲ್ಲೂಕಿನ ಗಂಗರಸನಹಳ್ಳಿ ರೈತರ ಜಮೀನಿನ ಒತ್ತುವರಿ ತೆರವಿಗೆ ಒತ್ತಾಯಿಸಿ ರೈತ ಸೇನೆ ಸದಸ್ಯರು ಇಲ್ಲಿ ಶುಕ್ರವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

‘ಗಂಗರಸನಹಳ್ಳಿಯ ವೆಂಕಟೇಶ್ ಹಾಗೂ ಗಾಯತ್ರಿ ಎಂಬ ರೈತರಿಗೆ ಸೇರಿದ ಜಮೀನನ್ನು ಆಂಧ್ರಪ್ರದೇಶದ ಹರಿರೆಡ್ಡಿ ಎಂಬುವರು ಒತ್ತುವರಿ ಮಾಡಿ ಕೋಳಿ ಫಾರಂ ನಿರ್ಮಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಯು ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರೂ ತಹಶೀಲ್ದಾರ್‌ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ತಹಶೀಲ್ದಾರ್‌ ಶೋಭಿತಾ ಅವರು ಹಲವು ಬಾರಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಹರಿರೆಡ್ಡಿ ಅವರು ಜಮೀನು ಒತ್ತುವರಿ ಮಾಡಿರುವುದು ಪರಿಶೀಲನೆ ವೇಳೆ ದೃಢಪಟ್ಟಿದೆ. ಆದರೂ ತಹಶೀಲ್ದಾರ್‌ ಒತ್ತುವರಿ ತೆರವು ಮಾಡಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ರೈತ ವೆಂಕಟೇಶ್‌ ಕಿಡಿಕಾರಿದರು.

ADVERTISEMENT

ಧರಣಿನಿರತರನ್ನು ಭೇಟಿಯಾದ ತಹಶೀಲ್ದಾರ್, ‘ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಹೀಗಾಗಿ ಒತ್ತುವರಿ ತೆರವು ಮಾಡುವುದು ತಡವಾಗಿದೆ. ಜಮೀನಿನ ಒಡೆತನ ಸಂಬಂಧ ಹರಿರೆಡ್ಡಿಯವರು ದಾಖಲೆಪತ್ರ ಸಲ್ಲಿಸಿದ ನಂತರ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಇದಕ್ಕೆ ಆಕ್ರೋಶಗೊಂಡ ಧರಣಿನಿರತರು, ‘ಒತ್ತುವರಿದಾರರಿಗೂ ಜಮೀನಿನ ಮೂಲ ಮಾಲೀಕರಿಗೂ ಸಂಬಂಧವಿಲ್ಲ. ಅವರು ದೌರ್ಜನ್ಯದಿಂದ ಜಮೀನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ನ್ಯಾಯಾಲಯದ ತಡೆಯಾಜ್ಞೆ ತೆರವಾಗಿದ್ದು, ಶೀಘ್ರವೇ ಗಡಿ ಗುರುತಿಸಿ ಒತ್ತುವರಿ ತೆರವು ಮಾಡಿಸಿ’ ಎಂದು ಆಗ್ರಹಿಸಿದರು.

ಬಳಿಕ ತಹಶೀಲ್ದಾರ್‌ ಅವರು ಗ್ರೇಡ್ 2 ತಹಶೀಲ್ದಾರ್, ಕಂದಾಯ ನಿರೀಕ್ಷರು ಮತ್ತು ಸರ್ವೆಯರ್‌ಗಳಿಗೆ ಗಡಿ ಗುರುತು ಮಾಡಿ ರೈತರ ಸ್ವಾಧೀನಕ್ಕೆ ಜಮೀನು ಒಪ್ಪಿಸಿ ಎಂದು ಆದೇಶಿಸಿದರು.ರೈತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವೈ.ಗಣೇಶ್‌ಗೌಡ, ಗೌರವಾಧ್ಯಕ್ಷ ಕೆ.ಬಿ.ಮುನಿವೆಂಕಟಪ್ಪ, ಸಂಘಟನಾ ಕಾರ್ಯದರ್ಶಿ ಎಂ.ವಿ.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮುಜೀಬ್ ಪಾಷಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.