ADVERTISEMENT

ಬಂಗಾರಪೇಟೆ: ಆನೆ ದಾಳಿ ತಡೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 6:52 IST
Last Updated 24 ಸೆಪ್ಟೆಂಬರ್ 2021, 6:52 IST
ಬಂಗಾರಪೇಟೆ ಅರಣ್ಯ ಇಲಾಖೆಯ ಉದ್ಯಾನದಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಪದಾಧಿಕಾರಿಗಳು. ರಾಜ್ಯ ಘಟಕದ ಉಪಾಧ್ಯಕ್ಷ ಕೆ. ನಾರಾಯಣಗೌಡ, ಜಿಲ್ಲಾ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಚಾಂದ್ಪಾಷ, ಈಕಂಬಳ್ಳಿ ಮಂಜುನಾಥ್, ಕಿರಣ್ ಇದ್ದರು
ಬಂಗಾರಪೇಟೆ ಅರಣ್ಯ ಇಲಾಖೆಯ ಉದ್ಯಾನದಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಪದಾಧಿಕಾರಿಗಳು. ರಾಜ್ಯ ಘಟಕದ ಉಪಾಧ್ಯಕ್ಷ ಕೆ. ನಾರಾಯಣಗೌಡ, ಜಿಲ್ಲಾ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಚಾಂದ್ಪಾಷ, ಈಕಂಬಳ್ಳಿ ಮಂಜುನಾಥ್, ಕಿರಣ್ ಇದ್ದರು   

ಬಂಗಾರಪೇಟೆ: ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ. ಇಲ್ಲವೇ ಆನೆ ಹಿಡಿಯಲು ರೈತರಿಗೆ ಆದೇಶ ಕೊಡಿ ಎಂದು ಒತ್ತಾಯಿಸಿ ಸೆ. 30ರಂದು ಕಾಮಸಮುದ್ರದಲ್ಲಿ ಬೆಳೆ ಸಮೇತ ಪ್ರತಿಭಟನೆ ನಡೆಸಲು ರೈತ ಸಂಘದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಾಮೂಹಿಕ ನಾಯಕತ್ವದ ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕೆ. ನಾರಾಯಣಗೌಡ ತಿಳಿಸಿದರು.

ಸಭೆಯಲ್ಲಿ ಕದಿರಿನೆತ್ತ ವೆಂಕೋಬರಾವ್, ಗಡಿಭಾಗದ ರೈತರು ಮಾತನಾಡಿ, ಆಧುನಿಕತೆ ಎಷ್ಟೇ ಮುಂದುವರಿದರೂ ದಶಕದಿಂದ ಗಡಿ ಭಾಗಗಳಲ್ಲಿ ನಡೆಯುತ್ತಿರುವ ಆನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.

ಪ್ರತಿವರ್ಷ ರಾಗಿ, ಭತ್ತ, ಟೊಮೆಟೊ ಸೇರಿದಂತೆ ಎಲ್ಲ ಬೆಳೆಗಳನ್ನು ಆನೆಗಳು ನಾಶಪಡಿಸುತ್ತಿವೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಆನೆ ದಾಳಿಯಿಂದಾಗಿ ಗಡಿಭಾಗದ ಗ್ರಾಮಸ್ಥರು ಮನೆಯಿಂದ ಹೊರಬರಲು ಎದುರುವ ಪರಿಸ್ಥಿತಿ ಉಂಟಾಗಿದೆ. ನಿತ್ಯ ಅವು ಬೆಳೆಗಳನ್ನು ನಾಶ ಮಾಡುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಸಮಸ್ಯೆಗೆ ಸ್ಪಂದಿಸದೆ ರೈತ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ. ಮನಸ್ಥಿತಿ ಬದಲಾಗಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಚಾಂದ್ಪಾಷ, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಕಿರಣ್, ರೈತರಾದ ಗುಲ್ಲಟ್ಟಿ, ಗೋವಿಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.