ADVERTISEMENT

ಬಂಗಾರಪೇಟೆ: ಶಾಸಕ ಕೈವೈಎನ್‌ ವಿರುದ್ಧ ದೂರು ದಾಖಲಿಸಲು ಆಗ್ರಹ

ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘಿಸಲು ಪ್ರಚೋದನೆ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 14:08 IST
Last Updated 3 ಜುಲೈ 2025, 14:08 IST
ಬಂಗಾರಪೇಟೆಯಲ್ಲಿ ದಲಿತ ರೈತ ಸೇನೆ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು
ಬಂಗಾರಪೇಟೆಯಲ್ಲಿ ದಲಿತ ರೈತ ಸೇನೆ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು   

ಬಂಗಾರಪೇಟೆ: ಕೋಲಾರ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಬಾಲ್ಯವಿವಾಹ ಪ್ರಕರಣದಲ್ಲಿ 18ವರ್ಷ ಪೂರ್ಣಗೊಳ್ಳಲು ಎರಡರಿಂದ ಮೂರು ತಿಂಗಳಲ್ಲಿ ವಯಸ್ಸಿನ ಅಂತರವಿದ್ದರೆ ಅಂತಹ ಪ್ರಕರಣಗಳಲ್ಲಿ ಮಾನವೀಯತೆ ದೃಷ್ಟಿಯಿಂದ ದೂರು ದಾಖಲಿಸದಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಕೆ.ವೈ ನಂಜೇಗೌಡ ಅವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಬೇಕು ಎಂದು ದಲಿತ ರೈತ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ಒತ್ತಾಯಿಸಿದರು.

ಪಟ್ಟಣದ ಕರ್ನಾಟಕ ದಲಿತ ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಾಲ್ಯವಿವಾಹ ನಿಷೇಧ ಕಾಯ್ದೆಯಂತೆ ಹೆಣ್ಣು ಮಕ್ಕಳಿಗೆ 18 ಪೂರ್ಣಗೊಳ್ಳುವವರೆಗೆ ವಿವಾಹ ಮಾಡಬಾರದು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಕುರಿತು ಗ್ರಾಮೀಣ ಪ್ರದೇಶದಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸಲು ಪ್ರತಿವರ್ಷ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ.  ಬಾಲ್ಯವಿವಾಹ ಪ್ರಕರಣಗಳು ಜಿಲ್ಲೆಯಲ್ಲಿ ಅಧಿಕವಾಗಿದ್ದು, ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ.

ಕೆ.ವೈ.ನಂಜೇಗೌಡ ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರುದ್ಧ ಮಾತನಾಡುವಾಗ, ‘ನಾನು ಫೋನ್ ಮಾಡಿದರೆ ತೆಗೆಯುವುದಿಲ್ಲ. ನಮ್ಮ ಕ್ಷೇತ್ರದಲ್ಲಿ ಬಹಳಷ್ಟು ಮಂದಿಯನ್ನು ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಫೋಕ್ಸೊ ಕಾಯ್ದೆಯಡಿ ಜೈಲಿಗೆ ಕಳುಹಿಸಿದ್ದೀಯಾ ಎಂದು ಏಕವಚನದಲ್ಲಿ ನಿಂದಿಸಿದ್ದರು. ಎರಡರಿಂದ ಮೂರು ತಿಂಗಳು ಹೆಚ್ಚು ಕಡಿಮೆ ಇದ್ದರೆ ಅಂತಹ ಪ್ರಕರಣಗಳನ್ನು ಮಾನವೀಯತೆ ದೃಷ್ಟಿಯಿಂದ ಬಿಟ್ಟು ಬಿಡಬೇಕು. ಎರಡೂ ಕುಟುಂಬಗಳು ಪರಸ್ಪರ ಒಪ್ಪಿಕೊಂಡು ಮದುವೆ ಮಾಡಿರುತ್ತಾರೆ’ ಎಂದು ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯನ್ನು ಉಲ್ಲಂಘನೆ ಮಾಡಲು ಪ್ರಚೋದನೆ ನೀಡಿರುತ್ತಾರೆ. ಈ ವೇದಿಕೆಯಲ್ಲಿ ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಸಹ ಭಾಗಿಯಾಗಿದ್ದು, ಅವರ ವಿರುದ್ದ ಜಿಲ್ಲಾಧಿಕಾರಿ ಪೋಕ್ಸೊ ಕಾಯ್ದೆಯಡಿ ಸುಮೊಟೊ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. 

ADVERTISEMENT

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಹುಳದೇನಹಳ್ಳಿ ವೆಂಕಟೇಶ್, ಕಲಾವಿದ ಯಲ್ಲಪ್ಪ, ಹುಣಸನಹಳ್ಳಿ ಸತೀಶ್, ಸೇಟ್‌ ಕಾಂಪೌಂಡ್ ಮಾರಿ, ಅರವಿಂದ ಮಾರ, ಮಧು, ಗೌತಮ್, ಗೌತಮ್‌‌ ನಗರ ಕಣ್ಣಯ್ಯ, ಲೋಕೇಶ್, ಟೈಲರ್ ಕೃಷ್ಣಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.