ADVERTISEMENT

ಶೋಭಾ ಯಾತ್ರೆಗೆ ಅನುಮತಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 15:16 IST
Last Updated 9 ಏಪ್ರಿಲ್ 2022, 15:16 IST

ಕೋಲಾರ: ಶ್ರೀರಾಮನವಮಿ ಅಂಗವಾಗಿ ಶ್ರೀರಾಮಸೇನೆ ಸಂಘಟನೆಯು ಜಿಲ್ಲಾ ಕೇಂದ್ರದಲ್ಲಿ ಭಾನುವಾರ (ಏ.10) ನಡೆಸಲು ಉದ್ದೇಶಿಸಿದ್ದ ಶೋಭಾ ಯಾತ್ರೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ರಾಮನವಮಿ ಪ್ರಯುಕ್ತ ಜಿಲ್ಲಾ ಕೇಂದ್ರದ ಗಾಂಧಿವನದ ಬಳಿ ಏ.8 ಮತ್ತು ಏ.9ರಂದು ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ, ಹೋಮ, ಮಂಗಳಾರತಿ, ಪ್ರಸಾದ ವಿನಿಯೋಗಕ್ಕೆ ಹಾಗೂ ಏ.10ರಂದು ಬೃಹತ್‌ ಸಭಾ ಕಾರ್ಯಕ್ರಮ, ಸಂಕೀರ್ತನಾ ಯಾತ್ರೆ, ಬೃಹತ್‌ ಶೋಭಾ ಯಾತ್ರೆ ನಡೆಸಲು ಅನುಮತಿ ಕೋರಿ ಶ್ರೀರಾಮಸೇನೆ ಸಂಘಟನೆಯ ವಿಭಾಗೀಯ ಅಧ್ಯಕ್ಷ ರಮೇಶ್‌ರಾಜ್‌ ಅರಸ್‌ ಅವರು ನಗರ ಪೊಲೀಸ್‌ ಠಾಣೆಗೆ ಅರ್ಜಿ ಸಲ್ಲಿಸಿದ್ದರು.

ಆಯೋಜಕರು ಕಾರ್ಯಕ್ರಮಗಳಿಗೆ ಪೊಲೀಸ್‌ ಭದ್ರತೆ ಕೋರಿದ್ದರು. ಅರ್ಜಿ ಪರಿಶೀಲಿಸಿದ್ದ ಪೊಲೀಸರು ಶೋಭಾ ಯಾತ್ರೆ ಸೇರಿದಂತೆ ಸಂಘಟನೆಯ ಕಾರ್ಯಕ್ರಮಗಳ ಆಯೋಜನೆಗೆ ಅನುಮತಿ ನೀಡಿದ್ದರು. ಆದರೆ, ಮುಳಬಾಗಿಲಿನಲ್ಲಿ ಶುಕ್ರವಾರ ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಭಾನುವಾರ ನಡೆಯಬೇಕಿದ್ದ ಶೋಭಾ ಯಾತ್ರೆಗೆ ಅನುಮತಿ ನಿರಾಕರಿಸಿ ಆಯೋಜಕರಿಗೆ ಹಿಂಬರಹ ನೀಡಿದ್ದಾರೆ.

ADVERTISEMENT

ಮುಳಬಾಗಿಲಿನಲ್ಲಿ ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಜಿಲ್ಲಾ ಕೇಂದ್ರದಲ್ಲಿ ಶೋಭಾ ಯಾತ್ರೆ ನಡೆಸಿದರೆ ಕೋಮುಗಲಭೆ ಸೃಷ್ಟಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ, ಕೋಲಾರ ನಗರ ಅತಿ ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಶೋಭಾ ಯಾತ್ರೆ ನಡೆಸುವಂತಿಲ್ಲ ಎಂದು ನಗರ ಠಾಣೆ ಇನ್‌ಸ್ಪೆಕ್ಟರ್‌ ಕಾರ್ಯಕ್ರಮದ ಆಯೋಜಕರಿಗೆ ತಿಳಿಸಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಕೋಮುಗಲಭೆ ಪ್ರಚೋದಿಸುವಂತಹ ಭಾಷಣ ಮಾಡುವಂತಿಲ್ಲ ಮತ್ತು ಘೋಷಣೆ ಕೂಗುವಂತಿಲ್ಲ. ಸಭಾ ಕಾರ್ಯಕ್ರಮದಲ್ಲಿ ಪೊಲೀಸ್‌ ಇಲಾಖೆಯ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲಾಖೆಯ ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಇನ್‌ಸ್ಪೆಕ್ಟರ್‌ ಆಯೋಜಕರಿಗೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.