ಮುಳಬಾಗಿಲು: ತಾಲ್ಲೂಕಿನಾದ್ಯಂತ ಸೋಮವಾರ ಬೆಳಗ್ಗೆ ವ್ಯಾಪಿಸಿದ ದಟ್ಟ ಮಂಜಿನಿಂದಾಗಿ ಅಕ್ಕಪಕ್ಕದಲ್ಲಿದ್ದವರೇ ಒಬ್ಬರಿಗೊಬ್ಬರು ಕಾಣಿಸದಂಥ ಪರಿಸ್ಥಿತಿ ಎದುರಾಗಿತ್ತು. ಇದರಿಂದಾಗಿ ವಾಹನ ಸವಾರರು ದಾರಿ ಕಾಣದೆ ಪರಿದಾಡುವ ಪರಿಸ್ಥಿತಿ ಉದ್ಭವಿಸಿತ್ತು.
ಸೋಮವಾರ ಬೆಳ್ಳಂಬೆಳಗ್ಗೆ ಐದು ಗಂಟೆಗೆ ಆರಂಭವಾದ ಮಂಜಿನ ಹನಿಯು ಬೆಳಗ್ಗೆ 8.45ರವರೆಗೆ ಸೋನೆ ಅಥವಾ ತುಂತುರು ಮಳೆಯಂತೆ ಸುರಿಯುತ್ತಿತ್ತು. ಇದರಿಂದಾಗಿ ಜನರು ತೀವ್ರ ಚಳಿ ಮತ್ತು ಮಂದ ಬೆಳಕಿನ ಸಮಸ್ಯೆ ಎದುರಿಸಿದರು. ತೀವ್ರ ಚಳಿಯಿಂದಾಗಿ ಜನರು ಹಾಗೂ ರೈತರು ತಮ್ಮ ಪ್ರತಿನಿತ್ಯದ ಚಟುವಟಿಕೆಗಳಿಗಾಗಿ ಹೋಗಿ ಬರಲು ತಲೆ ಮತ್ತು ಮುಖದ ಮೇಲೆ ಟವೆಲ್, ಜರ್ಕಿನ್ ಹಾಕಿಕೊಂಡಿದ್ದ ದೃಶ್ಯ ಕಂಡುಬಂದಿತು. ಇನ್ನು ವಾಹನ ಸವಾರರು ಮಂಜಿನಿಂದ ದಾರಿ ಕಾಣದೆ ಮುಂದೆ ಹೋಗಲು ಪರದಾಡುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ 75 ಮತ್ತು ರಾಜ್ಯ ಹೆದ್ದಾರಿ ಸೇರಿದಂತೆ ಇನ್ನಿತರ ರಸ್ತೆಗಳಲ್ಲಿ ದ್ವಿಚಕ್ರ ಹಾಗೂ ಭಾರಿ ವಾಹನಗಳ ಚಾಲಕರು ದಾರಿ ಕಾಣದೆ ವಾಹನಗಳ ದೀಪಗಳನ್ನು ಹಾಕಿಕೊಂಡು ನಿಧಾನವಾಗಿ ಚಲಿಸುತ್ತಿದ್ದರು. ವಾಹನಗಳ ವೇಗದ ಮಿತಿಯು ಗರಿಷ್ಠ 25 ಕಿ.ಮೀ ಸಹ ಮೀರಿರಲಿಲ್ಲ.
ಮುಳಬಾಗಿಲು, ಕೋಲಾರ ಹಾಗೂ ನಂಗಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ತೀರಾ ನಿಧಾನವಾಗಿ ಚಲಿಸುತ್ತಿದ್ದವು. ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಸವಾರರು ಹೆಲ್ಮೆಟ್ ಗಾಜಿನ ಮೇಲೆ ಬೀಳುತ್ತಿದ್ದ ಇಬ್ಬನಿಯ ಹನಿಗಳನ್ನು ಒರೆಸುತ್ತ ಮುಂದೆ ಸಾಗುವಂತಾಯಿತು.
ಇನ್ನು ಚಹಾ, ಕಾಫಿ ಹಾಗೂ ಹೋಟೆಲ್‌ಗಳ ಬಳಿ ಹಾಕಿದ್ದ ವಿದ್ಯುತ್ ದೀಪಗಳು ದೂರದಲ್ಲಿ ಹಾಕಿದ್ದ ಬುಡ್ದಿ ದೀಪಗಳಂತೆ ಕಾಣಿಸುತ್ತಿದ್ದರೆ, ಪೆಟ್ರೋಲ್ ಬಂಕ್ ಹಾಗೂ ದೀಪಗಳಿಲ್ಲದ ಅಂಗಡಿ ಮುಂಗಟ್ಟುಗಳು ಎಲ್ಲಿವೆ ಎಂದು ಹುಡುಕುವ ಸ್ಥಿತಿ ಇತ್ತು.
ರಾಷ್ಟ್ರೀಯ ಹೆದ್ದಾರಿ 75ರ ಎನ್.ವಡ್ಡಹಳ್ಳಿ ಹೆದ್ದಾರಿಯಲ್ಲಿ ಎರಡು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.