ADVERTISEMENT

ಮಾದಕ ವ್ಯಸನದಿಂದ ಭವಿಷ್ಯ ಸರ್ವ ನಾಶ: ನ್ಯಾಯಾಧೀಶೆ ಅನಿತಾ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 13:35 IST
Last Updated 29 ಜೂನ್ 2021, 13:35 IST
ಕೋಲಾರದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಮಾನವ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆಯಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಅನಿತಾ ಮಾತನಾಡಿದರು
ಕೋಲಾರದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಮಾನವ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆಯಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಅನಿತಾ ಮಾತನಾಡಿದರು   

ಕೋಲಾರ: ‘ದೇಶದ ಯುವ ಪೀಳಿಗೆಯು ಮಾದಕ ವಸ್ತುಗಳಿಗೆ ದಾಸರಾಗಿ ತಪ್ಪು ಹಾದಿ ಹಿಡಿಯದಂತೆ ಎಚ್ಚರ ವಹಿಸಬೇಕು. ಮಾದಕ ವಸ್ತುಗಳ ಬಳಕೆ, ಮಾರಾಟ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ’ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಅನಿತಾ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಮಾನವ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ದೇಶದಲ್ಲಿ ಮಾದಕ ವಸ್ತುಗಳನ್ನು ಬಳಸುತ್ತಿರುವವರಲ್ಲಿ ಯುವಕ ಯುವತಿಯರ ಸಂಖ್ಯೆ ಹೆಚ್ಚು ಎಂಬುದು ಆತಂಕಕಾರಿ. ಮಾದಕ ವಸ್ತು ಸೇವನೆಯಿಂದ ಯುವಶಕ್ತಿ ವಿನಾಶದೆಡೆಗೆ ಸಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು, ಸಾರ್ವಜನಿಕರು ಪ್ರಮುಖ ಪಾತ್ರ ವಹಿಸಬೇಕು’ ಎಂದರು.

ADVERTISEMENT

‘ಮಾದಕ ವ್ಯಸನದಿಂದ ಭವಿಷ್ಯವೇ ಸರ್ವ ನಾಶವಾಗುತ್ತದೆ. ಮಾದಕ ವಸ್ತುಗಳ ಸೇವನೆಯು ಜೀವಕ್ಕೆ ಅಪಾಯಕಾರಿ. ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಬೇಕು. ಮಾದಕ ವಸ್ತು ಮಾರಾಟ ಜಾಲ ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಕೆಲಸ ಆಗಬೇಕು. ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಯುವಕ ಯುವತಿಯರು ಬಹುಬೇಗನೆ ಮಾದಕ ವಸ್ತುಗಳಿಗೆ ಆಕರ್ಷಿತರಾಗಿ ಆರೋಗ್ಯ, ಜೀನವ ಹಾಳು ಮಾಡಿಕೊಳ್ಳುತ್ತಾರೆ. ಮಾದಕ ವ್ಯಸನಿಗಳು ತಮ್ಮ ಕುಟುಂಬದ ನೆಮ್ಮದಿ ಕೆಡಿಸುತ್ತಾರೆ. ಜತೆಗೆ ಸಮಾಜಕ್ಕೂ ಕಂಟಕ ಪ್ರಾಯರಾಗುತ್ತಾರೆ. ಯುವಕ ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ’ ಎಂದು ವಿಷಾದಿಸಿದರು.

ಕಳವಳಕಾರಿ: ‘ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೂ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವುದು ಕಳವಳಕಾರಿ. ಇದರ ತಡೆಗೆ ಜನರ ಸಹಕಾರ ಅಗತ್ಯ. ಸಮಾಜದಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಇಲ್ಲದಿರುವುದರಿಂದ ತಂದೆ, ತಾಯಿ ಉದ್ಯೋಗದತ್ತ ಸಾಗಿದ ಕೂಡಲೇ ಮಕ್ಕಳು ದಾರಿ ತಪ್ಪುವಂತಾಗಿದೆ. ಪೋಷಕರು ಮಕ್ಕಳ ಖರ್ಚಿಗೆ ಹೇರಳವಾಗಿ ಹಣ ನೀಡುವುದು ಇದಕ್ಕೆ ಕಾರಣ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್‌ ಅಭಿಪ್ರಾಯಪಟ್ಟರು.

‘ಮಾದಕ ವ್ಯಸನವು ಮಾರಕ ಪಿಡುಗು. ಸುತ್ತಮುತ್ತಲಿನವರೇ ಈ ವ್ಯಸನಕ್ಕೆ ಒಳಗಾಗಿರಬಹುದು. ಅವರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಮಾದಕ ವಸ್ತು ಸೇವನೆ, ಮಾರಾಟ ಮತ್ತು ಸಾಗಣೆ ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಕೋರಿದರು.

‘ಕೇಂದ್ರ ಸರ್ಕಾರವು 2020ರ ಆಗಸ್ಟ್ 15ರಂದು 272 ಜಿಲ್ಲೆಗಳಲ್ಲಿ ನಶೆ ಮುಕ್ತ ಭಾರತ ಅಭಿಯಾನ ಆರಂಭಿಸಿದೆ. ಈ ಗುರಿ ತಲುಪಬೇಕಾದರೆ ಪ್ರತಿ ಕುಟುಂಬವೂ ನಶೆ ಮುಕ್ತವಾಗಬೇಕು. ಪ್ರತಿ ಗ್ರಾಮ, ವಾರ್ಡ್‌ನಿಂದಲೂ ಮಾದಕ ವಸ್ತುಗಳಿಗೆ ದಾಸರಾಗದಂತೆ ಅರಿವು ಮೂಡಿಸಬೇಕು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ವಕೀಲ ಕೆ.ವಿ.ಶಂಕರಪ್ಪ, ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.