
ಶ್ರೀನಿವಾಸಪುರ: ವಿಧಾನಸಭಾ ಕ್ಷೇತ್ರದಲ್ಲಿ ₹ 35ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಅನುದಾನಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಆದೇಶದ ಬಳಿಕ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭರವಸೆ ನೀಡಿದರು.
ತಾಲ್ಲೂಕಿನ ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ‘ತಾಲ್ಲೂಕು ಆಡಳಿತ ನಡೆ ಗ್ರಾಮದ ಕಡೆ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲ ಗ್ರಾಮಗಳಿಗೆ ದಶಕಗಳಿಂದ ರಸ್ತೆ ಇಲ್ಲ. ಈ ಹಿನ್ನೆಲೆಯಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಬೇಕು ಎಂಬುದು ನನ್ನ ಗುರಿ. ಕ್ಷೇತ್ರದ 400 ಗ್ರಾಮಗಳಲ್ಲಿ ಹೈಮಾಸ್ಟ್ ದೀಪ ಹಾಗೂ ಸೋಲಾರ್ ದೀಪ ಅಳವಡಿಸುವ ಯೋಜನೆ ಇದೆ. ಈಗಾಗಲೇ 150 ದೀಪ ಹಾಕಿಸಿದ್ದೇನೆ ಎಂದರು.
ಕೋಲಾರದಿಂದ ಬಿ.ಕೊತ್ತಕೋಟೆಗೆ ಉತ್ತಮ ರಸ್ತೆ ಕಾಮಗಾರಿ ನಡೆಯುತ್ತಿದೆ. ಬಚ್ಚಿರೆಡ್ಡಿಗಾರಿಪಲ್ಲಿ ಬಳಿ ₹ 3 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು. 15 ದಿನಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ಮರಸನಪಲ್ಲಿ ಪೂಲಕುಂಟ್ಲಪಲ್ಲಿ ಮಾರ್ಗ ಮಧ್ಯೆ ₹ 1 ಕೋಟಿ ವೆಚ್ಚದಲ್ಲಿ ಚೆಕ್‌ಡ್ಯಾಂ ಹಾಕಲಾಗಿದೆ. ಬೀಮಗಾನಪಲ್ಲಿ ಬಳಿ ₹ 3.5 ಕೋಟಿ ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಿಸಲು ಭೂಮಿಪೂಜೆ ಮಾಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರಿಗೆ ಅನೇಕ ಸಮಸ್ಯೆಗಳು ಇದ್ದು, ಎಲ್ಲವನ್ನು ಯುಗಾದಿ ಹಬ್ಬದೊಳಗೆ ಸರಿಪಡಿಸಬೇಕು ಎಂದು ಇಒ, ಆಡಳಿತ ಅಧಿಕಾರಿ, ಪಿಡಿಒಗೆ ಸೂಚಿಸಿದರು.
ಗೌನಿಪಲ್ಲಿ ಗ್ರಾಮಪಂಚಾಯಿತಿಗೆ ಸಂಬಂಧಿಸಿದಂತೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಕೆಲ ಪಡಿತರ ಚೀಟಿಗಳು ಸಮಸ್ಯೆ ಇದ್ದು, ಅದನ್ನ ಸರಿಪಡಿಸುವಂತೆ ನಿರ್ದೇಶನ ನೀಡಿದರು.
ಕೂರಿಗೇಪಲ್ಲಿ 23 ಅರ್ಜಿಗಳು, ಬೈರಗಾನಪಲ್ಲಿ 43 ಅರ್ಜಿಗಳು, ಗೌನಿಪಲ್ಲಿ 10 ಅರ್ಜಿಗಳು, ಕೋಡಿಪಲ್ಲಿ 46 ಅರ್ಜಿಗಳ ಸ್ವೀಕರಿಸಲಾಯಿತು.
ತಾ.ಪಂ ಇಒ ಕೆ.ಸರ್ವೇಶ್, ರಾಮಪ್ಪ, ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ಕುಮಾರ್, ರವಿಕುಮಾರ್, ನಾರಾಯಣಸ್ವಾಮಿ, ಚಲಪತಿ, ಮುಖಂಡರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಕೆ.ಎ.ಸುಧಾಕರ್, ರಘುನಾಥಪುರ, ಸುಬ್ರಮಣ , ಕೆ.ವಿ.ಶ್ರೀನಿವಾಸ್, ಬೈರಗಾನಪಲ್ಲಿ ರಘುನಾಥರೆಡ್ಡಿ, ಕೆ.ವಿ.ಮಂಜುನಾಥ್, ಎಂ.ಜಿ.ಕೃಷ್ಣಾರೆಡ್ಡಿ , ಶೇಷಾದ್ರಿನಾಯಕ್, ವಿ.ಅನಿಲ್‌ಕುಮಾರ್, ಜಿ.ವಿ.ಶ್ರೀನಿವಾಸ್, ಸೀನಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.