ADVERTISEMENT

ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ನಿಲ್ಲಲಿ–ಆಗ್ರಹ

ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಬೃಹತ್‌ ಪ್ರತಿಭಟನೆ–ಕಾನೂನು ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 17:30 IST
Last Updated 14 ಆಗಸ್ಟ್ 2025, 17:30 IST
ಧರ್ಮಸ್ಥಳಕ್ಕೆ ಕಳಂಕ ತರುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಕೋಲಾರದ ಜಿಲ್ಲಾಡಳಿತ ಭವನ ಎದುರು ಗುರುವಾರ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಬೃಹತ್‌ ಪ್ರತಿಭಟನೆ ನಡೆಯಿತು
ಧರ್ಮಸ್ಥಳಕ್ಕೆ ಕಳಂಕ ತರುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಕೋಲಾರದ ಜಿಲ್ಲಾಡಳಿತ ಭವನ ಎದುರು ಗುರುವಾರ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಬೃಹತ್‌ ಪ್ರತಿಭಟನೆ ನಡೆಯಿತು    

ಕೋಲಾರ: ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಾಲಯ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಜಿಲ್ಲಾಡಳಿತ ಭವನದ ಎದುರು ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸಾವಿರಾರು ಜನ ಭಿತ್ತಿಪತ್ರ ಹಿಡಿದು ಧಿಕ್ಕಾರ ಕೂಗಿದರು. ಧರ್ಮಸ್ಥಳದ ರಕ್ಷಣೆ ನಮ್ಮ ಹೊಣೆ, ನಮ್ಮ ನಡಿಗೆ ಧರ್ಮಸ್ಥಳದ ಕಡೆಗೆ, ಉಳಿಸಿ ಉಳಿಸಿ ಧರ್ಮಕ್ಷೇತ್ರ ಉಳಿಸಿ, ಧಿಕ್ಕಾರ ಧಿಕ್ಕಾರ ದುಷ್ಟಶಕ್ತಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರೇ ಇದ್ದರು. ಮುಸ್ಲಿಂ ಮಹಿಳೆಯರೂ ಪಾಲ್ಗೊಂಡಿದ್ದರು.

ಸತ್ಯ ಮತ್ತು ಧರ್ಮದ ಪರ ನ್ಯಾಯ ನೀಡುವ ಧರ್ಮಸ್ಥಳದ ಬಗೆಗಿನ ಅವಹೇಳನ ನಿಲ್ಲಿಸಬೇಕು. ಅಪಪ್ರಚಾರ ಮಾಡುವವರಿಗೆ ಮಂಜುನಾಥ ಸ್ವಾಮಿಯಿಂದ ಶಿಕ್ಷೆಯಾಗಲಿ ಎಂದರು. ಕಿಡಿಗೇಡಿಗಳ ಸಂಚು ಬಯಲಿಗೆ ಸತ್ಯಶೋಧನಾ ಸಮಿತಿ ರಚಿಸಬೇಕು, ಅನಾಮಿಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ADVERTISEMENT

ಸಂಸದ ಎಂ.ಮಲ್ಲೇಶ್‍ ಬಾಬು ಮಾತನಾಡಿ, ‘ಎಸ್‍ಐಟಿಗೆ ನಮ್ಮ ವಿರೋಧವಿಲ್ಲ. ಆದರೆ, ಅನಾಮಿಕ ಹೇಳಿದ ಕಡೆಗಳಲ್ಲಿ ಅಗೆಯುತ್ತಿದ್ದು, ಯಾವುದೇ ಕುರುಹುಗಳು ಪತ್ತೆಯಾಗುತ್ತಿಲ್ಲ. ಸರ್ಕಾರದ ಪಿತೂರಿಯೂ ಇದ್ದಂತಿದೆ. ಹೀಗಾಗಿ, 13 ಜಾಗಗಳಲ್ಲಿ ಅಗೆಯುವ ಕಾರ್ಯಾಚರಣೆ ಮುಗಿದ ಕೂಡಲೇ ಅನಾಮಿಕ ವ್ಯಕ್ತಿಯನ್ನು ಜನತೆ ಮುಂದೆ ತೋರಿಸಲೇಬೇಕು. ಅಲ್ಲದೆ, ಶನಿವಾರದಂದು ಬೆಂಗಳೂರಿನ ಯಲಹಂಕದಿಂದ ಸುಮಾರು 200ಕ್ಕೂ ಹೆಚ್ಚು ವಾಹನಗಳಲ್ಲಿ ಭಕ್ತರು ತೆರಳುತ್ತಿದ್ದು, ನಾವೂ ಕೈಜೋಡಿಸಿ ಧರ್ಮಸ್ಥಳದ ಪರ ನಿಲ್ಲೋಣ’ ಎಂದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ, ‘ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಗೆ ಕೆಟ್ಟ ಹೆಸರು ತರುವ ಸಲುವಾಗಿ ಷಡ್ಯಂತ್ರ ರೂಪಿಸಿರುವ ಕೆಲವರು ಸರ್ಕಾರ ಹಾಗೂ ಎಸ್‍ಐಟಿಯನ್ನು ಆಟ ಆಡಿಸಲು ಮುಂದಾಗಿದ್ದಾರೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅನಾಮಿಕನಿಗೇ ಚನಿಕೆ, ಗಡಾರಿ ಕೊಟ್ಟು ಅಗೆಯಿಸಲಿ. ಸಮೀರ್ ಎಂಬಾತ ಯೂಟ್ಯೂಬ್‌ನಲ್ಲಿ ವಿಡಿಯೊ ಹಾಕಿದ್ದಕ್ಕೆ ಹಾಗೂ ಅನಾಮಿಕ ಹೇಳಿದ ಸುಳ್ಳಿಗೆ ಕುಣಿಯುತ್ತಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಧರ್ಮಸ್ಥಳ ಉಳಿವಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಜಾತ್ಯತೀತ, ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು. ಸರ್ಕಾರವು ಸತ್ಯ ಸಂಶೋಧನಾ ಸಂಸ್ಥೆಯಿಂದ ತನಿಖೆ ನಡೆಸಿ ನಿಜಾಂಶವನ್ನು ಜನರ ಮುಂದೆ ಇಡಬೇಕು’ ಎಂದು ಆಗ್ರಹಿಸಿದರು.

‘ಅನಾಮಿಕ ವ್ಯಕ್ತಿ ಹೇಳಿದ್ದಕ್ಕೆ ಕೋಟ್ಯಂತರ ಖರ್ಚು ಮಾಡಿ ಗುಂಡಿ ತೆಗೆಯುತ್ತಿದ್ದಾರೆ‌. 13 ಕಡೆ ಗುಂಡಿ ತೆಗೆದರೂ ಏನೂ ಸಿಕ್ಕಿಲ್ಲ. ದುಷ್ಟ ಮನಸ್ಥಿತಿಯವರು ಕೈಜೋಡಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಎಸ್‌ಐಟಿ ಮಧ್ಯಂತರ ವರದಿ ಕೊಡಬೇಕು’ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ಉದ್ದೇಶ ಪೂರ್ವಕವಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯಲು ಯತ್ನ ನಡೆಯುತ್ತಿದ್ದು, ಇಂದಿನ ಘಟನೆಗೆ ರಾಜ್ಯ ಸರ್ಕಾರ ನೇರ ಕಾರಣ. ಹೆಸರು ಹಾಳು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ವಂಶಗಳು ನಾಶವಾಗುತ್ತವೆ’ ಎಂದು ಎಚ್ಚರಿಸಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ‘ಸನಾತನ ಹಿಂದೂ ಧರ್ಮ ತುಳಿಯಲು ಯತ್ನಿಸಿರುವ ಮೂವರು ರೋಲ್ ಕಾಲ್ ಗಿರಾಕಿಗಳ ಮಾತು ಕೇಳಿ ಎಸ್‍ಐಟಿ ಕಾರ್ಯಾಚರಣೆ ನಡೆಸುತ್ತಿರುವುದು ಖಡನೀಯ’ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ‘ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಆದರೆ, ಈ ವರೆಗೆ ಏನೂ ಮಾಡಲು ಆಗಿಲ್ಲ. ಹಿಂದೂಗಳು ಶಾಂತಿಪ್ರಿಯರು, ಅವರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಅದನ್ನೇ ದೌರ್ಬಲ್ಯ ಎಂದು ಭಾವಿಸಲಾಗಿದೆ’ ಎಂದು ಹೇಳಿದರು.

‘ಹೆಣ ಹಾಕಲು ಆರಡಿ ಮೂರಡಿ ಜಾಗ ಸಾಕು. ಆದರೆ, ಅನಾಮಿಕನ ಮಾತು ಕೇಳಿ 20 ಅಡಿ ಗುಂಡಿ ತೋಡಲಾಗುತ್ತಿದೆ. ಅನಾಮಿಕ ಸಂಜೆ ಎಲ್ಲಿ ಹೋಗುತ್ತಿದ್ದಾನೆ ಗೊತ್ತಿಲ್ಲ. ಎಸ್‌ಐಟಿಯನ್ನು ಕೈಗೊಂಬೆ‌ ಮಾಡಿಕೊಂಡಿದ್ದಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ವೈ.ಸಂಪಂಗಿ ಮಾತ‌ನಾಡಿ, ‘ಹಿಂದೂ ಧರ್ಮಕ್ಕೆ ಘಾಸಿಯಾದಾಗ ಎಲ್ಲರೂ ಒಗ್ಗಟ್ಟಾಗಬೇಕು. ದೇವರ ಹೆಸರಿಗೆ ಸಮಾಜ ಘಾತುಕ ಶಕ್ತಿಗಳು ಧಕ್ಕೆ ತಂದಾಗ ಸಿಡಿದೇಳಬೇಕು. ಹಿಂದೂಗಳ ನಿರ್ನಾಮಕ್ಕೆ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡಬಾರದು’ ಎಂದರು.

ಬಿಜೆಪಿ ಮಹಿಳಾ ಘಟಕದ ಅರುಣಮ್ಮ ಮಾತನಾಡಿ, ಸಮೀರ್, ಅನಾಮಿಕ, ತಿಮರೋಡಿ ಹಾಗೂ ಮಟ್ಟಣ್ಣನವರ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು

ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಆರ್‌.ರವಿ, ‘ಸರ್ಕಾರದ ಗಮನ ಸೆಳೆಯಲು ಮನವಿ ಪತ್ರ ಕೊಟ್ಟಿದ್ದೀರಿ. ಇದನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುತ್ತೇನೆ’ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ ಜೊತೆಗಿದ್ದರು.

ಹೋರಾಟದಲ್ಲಿ ಕೋಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್, ‌ಮುಖಂಡರಾದ ಡಾ.ಕೆ.ಎನ್.ವೇಣುಗೋಪಾಲ್, ಬಣಕನಹಳ್ಳಿ ನಟರಾಜ್, ವಾಸು, ವಿಜಯ್ ಕುಮಾರ್, ಪ್ರವೀಣ್ ಗೌಡ, ಮಾಗೇರಿ ನಾರಾಯಣಸ್ವಾಮಿ, ಮಾವು ಮಂಡಳಿ ಮಾಜಿ ಅಧ್ಯಕ್ಷ ವಾಸುದೇವ್‌, ಕಾಡಹಳ್ಳಿ ಶಶಿ, ಅರುಣಮ್ಮ, ಬಜರಗದಳ ಬಾಲಾಜಿ, ಅಪ್ಪಿ, ಶ್ರೀರಾಮಸೇನೆ ರಮೇಶ್ ರಾಜ್, ವಿವಿಧ ಸಂಘಟನೆಗಳ ಮುಂಖಂಡರು ಹಾಗೂ ಧರ್ಮಸ್ಥಳದ ಭಕ್ತರು ಇದ್ದರು.

ಜಿಲ್ಲಾಧಿಕಾರಿ ಎಂ.ಆರ್.ರವಿಗೆ ಅವರಿಗೆ ಮುಖಂಡರು ಮನವಿ ಪತ್ರ ನೀಡಿದರು
ಧರ್ಮಸ್ಥಳಕ್ಕೆ ಕಳಂಕ ತರುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಕೋಲಾರದ ಜಿಲ್ಲಾಡಳಿತ ಭವನ ಎದುರು ಗುರುವಾರ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಬೃಹತ್‌ ಪ್ರತಿಭಟನೆ ನಡೆಯಿತು

ದೇಶ ನಾಶಮಾಡಬೇಕೆಂದರೆ ಅದರ ಸಂಸ್ಕೃತಿ ನಾಶ ಮಾಡಬೇಕೆಂಬ ಮಾತಿದೆ. ಭಾರತ ಹಿಂದೂಗಳಿಗೆ ಸೇರಿದ ದೇಶ. ಬೇರೆಯವರು ಎಲ್ಲಿಂದಲೋ ಬಂದಿದ್ದಾರೆ‌. ಧರ್ಮಸ್ಥಳಕ್ಕೆ ಬಲ ತುಂಬಬೇಕು

ಎಂ.ಮಲ್ಲೇಶ್‌ ಬಾಬು ಸಂಸದ

ನಮ್ಮ ಸನಾತನ ಧರ್ಮ ಹಿಂದೂ ಧರ್ಮಕ್ಕೆ ಅಪಪ್ರಚಾರ ಮಾಡಲಾಗುತ್ತಿದೆ. ಧರ್ಮಸ್ಥಳದಂಥ ಪವಿತ್ರ ದೇಗುಲ ಕಾಪಾಡುವುದು ನಮ್ಮ ಧರ್ಮ. ಧರ್ಮಸ್ಥಳ ಕಿರು ಸರ್ಕಾರದ ರೀತಿಯಲ್ಲಿ ಕೆಲಸ ಮಾಡುತ್ತಿದೆ

ಸಿಎಂಆರ್‌ ಶ್ರೀನಾಥ್‌ ಜೆಡಿಎಸ್‌ ಮುಖಂಡ

ಮತಾಂಧ ಶಕ್ತಿಗಳು ಧರ್ಮ ಕ್ಷೇತ್ರವನ್ನು ಟಾರ್ಗೆಟ್ ಮಾಡುತ್ತಿವೆ. ಹೆಸರು ಕೆಡಿಸಲು ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆ. ಇಡೀ ಹಿಂದೂ ಸಮಾಜ ಎದ್ದಿದೆ. ಇನ್ನು ಆಟ ನಡೆಯಲ್ಲ

ಓಂಶಕ್ತಿ ಚಲಪತಿ ಬಿಜೆಪಿ ಜಿಲ್ಲಾ ಅಧ್ಯಕ್ಷ

ತಿಮರೋಡಿ ಮಟ್ಟಣ್ಣನವರ್‌ಗೆ ಉಗ್ರಗಾಮಿಗಳು ಕ್ರೈಸ್ತ ಮಿಷನರಿಗಳಿದ ಹಣ ಬಂದಿದೆ. ಕೂಡಲೇ ಅವರ ಖಾತೆ ಮುಟ್ಟುಗೋಲು ಹಾಕಬೇಕು. ಜೊತೆಗೆ ತನಿಖೆ ನಡೆಸಬೇಕು

ಎಸ್‌.ಮುನಿಸ್ವಾಮಿ ಮಾಜಿ ಸಂಸದ

ಸತ್ಯ ಶೋಧನಾ ಸಮಿತಿ ರಚಿಸಲು ಆಗ್ರಹ

‘ಸಿದ್ದರಾಮಯ್ಯ ಮಾಂಸ ತಿಂದು ದೇವಾಲಯಕ್ಕೆ ಹೋಗಿ ಈಗಾಗಲೇ ಸಾಕಷ್ಟು ಅನುಭವಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಹಾಗೂ ಮಂಜುನಾಥ ಸ್ವಾಮಿ ವಿರೋಧಿ ಎನ್ನುವುದು ಗೊತ್ತಿದೆ. ಎಸ್‍ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಸತ್ಯ ಶೋಧನಾ ಸಮಿತಿ ಬರಬೇಕು ತನಿಖೆ ಮಾಡಬೇಕು’ ಎಂದು ಮಾಜಿ ಸಂಸದ ಎಸ್‌.ಮುನಿಸ್ವಾಮಿ ಒತ್ತಾಯಿಸಿದರು. ‘ಇಂದು ಧರ್ಮಸ್ಥಳಕ್ಕೆ ಬಂದಿರುವ ಪರಿಸ್ಥಿತಿ ಮುಂದೆ ಕೋಲಾರದ ದೇವಾಲಯಗಳಿಗೂ ಬರಬಹುದು. ಅನಾಥ ಶವಗಳನ್ನು ಸಂಸ್ಕಾರ ಮಾಡಿ ಕೊಲೆ ಆರೋಪ ಮಾಡುತ್ತಿದ್ದು ಯಾವುದಕ್ಕೂ ಆಸ್ಪದ ನೀಡದೇ ಸರ್ಕಾರ ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸಬೇಕು. ತಿಮರೋಡಿ ಮಟ್ಟಣ್ಣನವರ್‌ಗೆ ಪೊರಕೆ ಚಪ್ಪಲಿ ಸೇವೆ ಮಾಡಲು ಹೆಣ್ಣುಮಕ್ಕಳು ಸಿದ್ಧವಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.