ADVERTISEMENT

ಹೈನೋದ್ಯಮ ರೈತರ ಆರ್ಥಿಕತೆಗೆ ಆಸರೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 15:41 IST
Last Updated 2 ನವೆಂಬರ್ 2021, 15:41 IST
ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಕೋಲಾರದಲ್ಲಿ ಮಂಗಳವಾರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರಶಸ್ತಿ ವಿತರಿಸಿದರು
ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಕೋಲಾರದಲ್ಲಿ ಮಂಗಳವಾರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರಶಸ್ತಿ ವಿತರಿಸಿದರು   

ಕೋಲಾರ: ‘ಕೋವಿಡ್ ಸಂಕಷ್ಟ ಹಾಗೂ ಬರಗಾಲದಲ್ಲೂ ಹೈನೋದ್ಯಮವು ಜಿಲ್ಲೆಯ ರೈತರ ಆರ್ಥಿಕತೆಗೆ ಆಸರೆಯಾಗಿದೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಅಭಿಪ್ರಾಯಪಟ್ಟರು.

ಇಲ್ಲಿ ಮಂಗಳವಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿ, ‘ಕೋಚಿಮುಲ್ ರೈತರ ಹಿತ ರಕ್ಷಣೆಗೆ ಬದ್ಧವಾಗಿದೆ. ಹಸು ವಿಮೆ ಮೂಲಕ ಹೈನುಗಾರರನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. ಸಂಕಷ್ಟದಲ್ಲಿರುವವರಿಗೆ ಒಕ್ಕೂಟ ನೆರವಾಗಲಿದೆ’ ಎಂದು ಭರವಸೆ ನೀಡಿದರು.

‘ತಾಲ್ಲೂಕನ್ನು ಕ್ಯಾನ್‌ರಹಿತ ಹಾಲು ಸಂಗ್ರಹ ತಾಲ್ಲೂಕಾಗಿ ಮಾಡುತ್ತೇವೆ. ಎಲ್ಲಾ ಎಂಪಿಸಿಎಸ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಒಕ್ಕೂಟದಿಂದ ಹಣಕಾಸು ನೆರವು ನೀಡಲಾಗುತ್ತದೆ. ₹ 567 ಪಾವತಿಸಿ ರಾಸುಗಳಿಗೆ ವಿಮೆ ಮಾಡಿಸಬೇಕು. ರಾಸುಗಳಿಗೆ ಆಕಸ್ಮಿಕವಾಗಿ ಮೃತಪಟ್ಟರೆ ಪ್ರತಿ ರಾಸಿಗೆ ₹ 70 ಸಾವಿರ ಪರಿಹಾರ ಸಿಗಲಿದೆ. ಹಾಲು ಉತ್ಪಾದಕರು ಇದರ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಕೋವಿಡ್ ಕಾರಣಕ್ಕೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ. ಇದರಿಂದ ತಾತ್ಕಾಲಿಕವಾಗಿ ಹಾಲು ಖರೀದಿ ದರ ಕಡಿಮೆ ಮಾಡಲಾಗಿದೆ. ಮುಂದೆ ವಹಿವಾಟು ಸುಧಾರಿಸಿದಾಗ ಹಾಲು ಖರೀದಿ ದರ ಹೆಚ್ಚಿಸುತ್ತೇವೆ. ಈಗ ದರ ಕಡಿಮೆ ಮಾಡಿರುವುದಕ್ಕೆ ರೈತಾಪಿ ವರ್ಗ ಧೃತಿಗೆಡಬಾರದು’ ಎಂದು ಸಲಹೆ ನೀಡಿದರು.

ನೂತನ ಕಟ್ಟಡದ ಅನುದಾನ, ಸಮೂಹ ಹಾಲು ಕರೆಯುವ ಯಂತ್ರ ಅಳವಡಿಸಲು ಪ್ರೋತ್ಸಾಹಧನದ ಚೆಕ್‌ ವಿತರಿಸಲಾಯಿತು. ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಶ್ರೀಧರಮೂರ್ತಿ, ಸಹಾಯಕ ವ್ಯವಸ್ಥಾಪಕ ಡಾ.ಮಹೇಶ್‌ರೆಡ್ಡಿ, ಶಿಬಿರ ವಿಸ್ತರಣಾಧಿಕಾರಿಗಳು, ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.