ADVERTISEMENT

ಅಂಗವೈಕಲ್ಯ ಶಾಪವಲ್ಲ: ಆತ್ಮಸ್ಥೈರ್ಯ ತುಂಬಿ; ಸಿ.ಎಚ್.ಗಂಗಾಧರ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 11:47 IST
Last Updated 18 ಅಕ್ಟೋಬರ್ 2021, 11:47 IST
ಕೋಲಾರದಲ್ಲಿ ಸೋಮವಾರ ನಡೆದ ಕಾನೂನು ನೆರವು- ಅರಿವು ಶಿಬಿರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಉದ್ಘಾಟಿಸಿದರು
ಕೋಲಾರದಲ್ಲಿ ಸೋಮವಾರ ನಡೆದ ಕಾನೂನು ನೆರವು- ಅರಿವು ಶಿಬಿರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಉದ್ಘಾಟಿಸಿದರು   

ಕೋಲಾರ: ‘ಅಂಗವೈಕಲ್ಯ ಶಾಪವಲ್ಲ. ಅಂಗವಿಕಲರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಅವರನ್ನು ಸಾಧಕರಾಗಿ ಮಾಡಿ ಮುಖ್ಯವಾಹಿನಿಗೆ ತರಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅಂಗವಿಕಲರು ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ನೆರವು- ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಅಂಗವಿಕಲರು ದೇವರಿಗೆ ಸಮಾನ. ಅಂಗವಿಕಲರು ಇತ್ತೀಚಿನ ಪ್ಯಾರಾ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮಾಡಿದ ಸಾಧನೆಯಿಂದ ದೇಶದ ಘನತೆ ಹೆಚ್ಚಿದೆ. ಅವರಲ್ಲೂ ವಿಶಿಷ್ಟ ಪ್ರತಿಭೆಗಳಿದ್ದು, ಅದಕ್ಕೆ ಉತ್ತೇಜನ ನೀಡುವ ಅಗತ್ಯವಿದೆ’ ಎಂದು ತಿಳಿಸಿದರು.

ADVERTISEMENT

‘ಅಂತರಗಂಗಾ ಬುದ್ಧಿಮಾಂದ್ಯ ವಸತಿ ಶಾಲೆ ಮಕ್ಕಳಿಗೆ ಅಗತ್ಯವಾದ ಊಟ, ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರದ ಜತೆಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಆರ್ಥಿಕ ಸ್ಥಿತಿವಂತರು ಈ ಮಕ್ಕಳ ನೆರವಿಗೆ ಧಾವಿಸಿ ಮಾನವೀಯತೆ ಮೆರೆಯಬೇಕು’ ಎಂದು ಮನವಿ ಮಾಡಿದರು.

‘ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸದ್ಬಳಕೆಯಾಗಬೇಕು. ಸರ್ಕಾರದ ಸವಲತ್ತುಗಳು ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಇದರಲ್ಲಿ ಲೋಪ ಆಗಬಾರದು’ ಎಂದು ಜಿಲ್ಲಾ ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ಅಧಿಕಾರಿ ಮುನಿರಾಜು ಕಿವಿಮಾತು ಹೇಳಿದರು.

‘ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ತ್ರಿಚಕ್ರವಾಹನ, ಸೈಕಲ್, ವೀಲ್ ಚೇರ್, ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಸ್ಥೆ ಮುಖ್ಯಸ್ಥರು ಕ್ರಮ ವಹಿಸಬೇಕು’ ಎಂದರು.

ಕಾನೂನು ನೆರವು: ‘ಕೆಲ ಪೋಷಕರು ಅಂಗವಿಕಲರು ಎಂಬ ಕಾರಣಕ್ಕೆ ಮಕ್ಕಳನ್ನು ದೂರ ಮಾಡಿರುವ ನಿದರ್ಶನಗಳಿವೆ. ಇಂತಹ ಸಂದರ್ಭದಲ್ಲಿ ಆ ಮಕ್ಕಳಿಗೆ ಉಚಿತವಾಗಿ ಕಾನೂನು ನೆರವು ನೀಡಲು ಸಿದ್ಧವಿದ್ದೇವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ವಕೀಲ ಶ್ರೀಕಾಂತ್ ಮನವಿ ಮಾಡಿದರು.

ಅಂತರಗಂಗಾ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಕಾರ್ಯದರ್ಶಿ ಕೆ.ಎಸ್.ಶಂಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.