ADVERTISEMENT

ಗಣೇಶ ಮೂರ್ತಿಗಳ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 14:52 IST
Last Updated 8 ಸೆಪ್ಟೆಂಬರ್ 2019, 14:52 IST
ಕೋಲಾರದಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾದಿಂದ ಭಾನುವಾರ ಗಣೇಶ ಮೂರ್ತಿಗಳ ಸಾಮೂಹಿಕ ಮೆರವಣಿಗೆ ನಡೆಸಲಾಯಿತು.
ಕೋಲಾರದಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾದಿಂದ ಭಾನುವಾರ ಗಣೇಶ ಮೂರ್ತಿಗಳ ಸಾಮೂಹಿಕ ಮೆರವಣಿಗೆ ನಡೆಸಲಾಯಿತು.   

ಕೋಲಾರ: ಗೌರಿ ಗಣೇಶ ಹಬ್ಬದ ಅಂಗವಾಗಿ ನಗರದ ಎಸ್‌ಎನ್‌ಆರ್‌ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ಸಾಮೂಹಿಕ ಮೆರವಣಿಗೆ ಹಾಗೂ ವಿಸರ್ಜನೆ ಭಾನುವಾರ ನಡೆಯಿತು.

ನಗರದ ಎಸ್‌ಎನ್‌ಆರ್‌ ವೃತ್ತದಲ್ಲಿ ಆರಂಭವಾದ ಗಣೇಶ ಮೂರ್ತಿಗಳ ಮೆರವಣಿಗೆಯು ರಾತ್ರಿ 7ರವರೆಗೆ ನಡೆಯಿತು. ಗಣೇಶ ಮೂರ್ತಿಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಕೂರಿಸಿ ಪ್ರಮುಖ ರಸ್ತೆ ಮತ್ತು ಬಡಾವಣೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕೀಲು ಕುದುರೆ, ಹುಲಿ ನೃತ್ಯ, ಗಾರುಡಿ ಗೊಂಬೆ ಕುಣಿತ ಮತ್ತು ತಮಟೆ ವಾದ್ಯವು ಮೆರವಣಿಗೆಗೆ ಮೆರಗು ನೀಡಿತು. ಯುವಕರು ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ, ಶಿಳ್ಳೆ ಹಾಕುತ್ತಾ ಕುಣಿದು ಕುಪ್ಪಳಿಸಿದರು. ಪರಸ್ಪರ ಮುಖಕ್ಕೆ ಬಣ್ಣ ಹಚ್ಚಿ ಸಂಭ್ರಮಪಟ್ಟರು. ಎಂ.ಜಿ ರಸ್ತೆ, ಅಮ್ಮವಾರಿಪೇಟೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತ, ಎಂ.ಬಿ ರಸ್ತೆ, ಶಾರದಾ ಚಿತ್ರಮಂದಿರ ರಸ್ತೆ, ಬ್ರಾಹ್ಮಣರ ಬೀದಿ, ಇಟಿಸಿಎಂ ವೃತ್ತದಲ್ಲಿ ಮೆರವಣಿಗೆ ಸಾಗಿತು.

ADVERTISEMENT

ಮೆರವಣಿಗೆ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹಲವೆಡೆ ಬ್ಯಾರಿಕೇಡ್‌ ಹಾಕಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಪೊಲೀಸ್‌ ಬಂದೋಬಸ್ತ್‌: ಮುನ್ನೆಚ್ಚರಿಕೆ ಕ್ರಮವಾಗಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು. ನಗರಸಭೆ ವತಿಯಿಂದ ಕೋಲಾರಮ್ಮ ಕೆರೆ ಅಂಗಳದಲ್ಲಿ ಗಣೇಶ ವಿಸರ್ಜನೆಗಾಗಿ ನಿರ್ಮಿಸಿರುವ ಪುಷ್ಕರಣಿಯಲ್ಲಿ ಭಕ್ತರ ಹರ್ಷೋದ್ಗಾರದ ನಡುವೆ ಮೂರ್ತಿಗಳನ್ನು ರಾತ್ರಿ ಸಾಮೂಹಿಕವಾಗಿ ವಿಸರ್ಜಿಸಲಾಯಿತು.

ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಓಂ ಶಕ್ತಿ ಚಲಪತಿ ಮೆರವಣಿಗೆಗೆ ಚಾಲನೆ ನೀಡಿದರು. ಜರಂಗದಳ ಸಂಘಟಕ ಬಾಬು, ನಗರಸಭಾ ಮಾಜಿ ಸದಸ್ಯರಾದ ಸೋಮಶೇಖರ್, ಮಂಜುನಾಥ್, ವಿಜಯಕುಮಾರ್, ನಾರಾಯಣಸ್ವಾಮಿ, ಮುನಿವೆಂಕಟಯಾದವ್, ಡಾ.ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.