ADVERTISEMENT

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

18 ಶಿಕ್ಷಕರು ಆಯ್ಕೆ: ಇಂದು ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 14:09 IST
Last Updated 4 ಸೆಪ್ಟೆಂಬರ್ 2019, 14:09 IST

ಕೋಲಾರ: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯ ವಿವಿಧ ತಾಲ್ಲೂಕುಗಳ 6 ಮಂದಿ ಪ್ರೌಢ ಶಾಲಾ ಶಿಕ್ಷಕರು, 6 ಮಂದಿ ಹಿರಿಯ ಪ್ರಾಥಮಿಕ ಮತ್ತು 6 ಮಂದಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

‘ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಶಿಕ್ಷಕರಿಂದ ಬಂದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡಲಾಗಿದೆ’ ಎಂದು ಆಯ್ಕೆ ಸಮಿತಿ ಅಧ್ಯಕ್ಷರಾದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ತಿಳಿಸಿದ್ದಾರೆ.

‘ಅಬಕಾರಿ ಸಚಿವ ಎಚ್.ನಾಗೇಶ್ ಅವರು ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ (ಸೆ.5) ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಬಹುಮಾನ ವಿತರಿಸಿ ಪುರಸ್ಕರಿಸುತ್ತಾರೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರೌಢ ಶಾಲಾ ವಿಭಾಗದಲ್ಲಿ ಬಂಗಾರಪೇಟೆ ತಾಲ್ಲೂಕು ಬಲಮಂದೆ ಶಾಲೆ ಸಹ ಶಿಕ್ಷಕ ನಂಜುಂಡಪ್ಪ, ಕೆಜಿಎಫ್‌ನ ಸೆಂಟ್ ಮೇರಿಸ್‌ ಅನುದಾನಿತ ಶಾಲೆಯ ಎಂ.ಮನೋಹರನ್, ಕೋಲಾರ ತಾಲ್ಲೂಕು ಸೂಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ರಾಜಣ್ಣ, ಮಾಲೂರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೇರಿ ಸುಮತಿ, ಮುಳಬಾಗಿಲು ತಾಲ್ಲೂಕು ಉತ್ತನೂರಿನ ಎಂ.ವಿ.ಕೃಷ್ಣಪ್ಪ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಎಂ.ಎ.ಮಂಜುನಾಥ್, ಶ್ರೀನಿವಾಸಪುರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕೆ.ವಿ.ಶಾರದಮ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಂಗಾರಪೇಟೆ ತಾಲ್ಲೂಕಿನ ಎನ್‌ಟಿಜಿಎಂ ಹಿರಿಯ ಪ್ರಾಥಮಿಕ ಶಾಲೆಯ ಸುಜಾತಾ, ಕೆಜಿಎಫ್‌ನ ಬೆಮಲ್‌ ನಗರದ ಮಾದರಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಆರ್.ವೀಣಾ, ಕೋಲಾರ ತಾಲ್ಲೂಕಿನ ವೇಮಗಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಆರ್.ಸದಾನಂದ, ಮಾಲೂರು ತಾಲ್ಲೂಕು ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಂ.ಮಂಜುನಾಥ್, ಮುಳಬಾಗಿಲು ತಾಲ್ಲೂಕಿನ ನೇತಾಜಿ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸರೋಜಮ್ಮ, ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಪ್ರಮೀಳಾ ಅವರಿಗೆ ಪ್ರಶಸ್ತಿ ಲಭಿಸಿದೆ.

ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಬಂಗಾರಪೇಟೆ ತಾಲ್ಲೂಕು ದೊಡ್ಡ ಅಂಕಂಡಹಳ್ಳಿ ಶಾಲೆ ಶಿಕ್ಷಕ ಎಂ.ಕೃಷ್ಣಪ್ಪ, ಕೆಜಿಎಫ್ ತಾಲ್ಲೂಕಿನ ತಮ್ಮೇನಹಳ್ಳಿ ಶಾಲೆಯ ರುಕ್ಮಿಣಿ, ಕೋಲಾರ ತಾಲ್ಲೂಕಿನ ಮತ್ತಿಕುಂಟೆ ಶಾಲೆಯ ಎಂ.ನಾರಾಯಣಸ್ವಾಮಿ, ಮಾಲೂರು ತಾಲ್ಲೂಕಿನ ಚೂಡಗೊಂಡನಹಳ್ಳಿ ಶಾಲೆ ಶಿಕ್ಷಕ ಎನ್.ರಾಜಣ್ಣ, ಮುಳಬಾಗಿಲು ತಾಲ್ಲೂಕಿನ ಇಂದಿರಾ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಜಿ.ರಾಜಶೇಖರ್, ಶ್ರೀನಿವಾಸಪುರ ಸರ್ಕಾರಿ ಮಾದರಿ ಹಿರಿಯ ಮಾಧ್ಯಮಿಕ ಶಾಲೆ ಶಿಕ್ಷಕ ಎಸ್.ಆರ್.ನಾರಾಯಣಸ್ವಾಮಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.