ADVERTISEMENT

ಟೀಕೆಗೆ ಕಿವಿಗೂಡಬೇಡಿ: ಬದ್ಧತೆಯಿಂದ ಕೆಲಸ ಮಾಡಿ; ಎಂ.ಗೋವಿಂದಗೌಡ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 14:18 IST
Last Updated 20 ಸೆಪ್ಟೆಂಬರ್ 2021, 14:18 IST
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಸೋಮವಾರ ಆನ್‌ಲೈನ್‌ ಮೂಲಕ ಬ್ಯಾಂಕ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು. ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಹುಸೇನ್ ದೊಡ್ಡಮನಿ, ಖಲೀಮ್‌ ಉಲ್ಲಾ, ಬೈರೇಗೌಡ, ಶಿವಕುಮಾರ್, ನಿರ್ದೇಶಕ ಸೋಮಣ್ಣ, ಸಿಬ್ಬಂದಿ ಬೇಬಿ ಶಾಮಿಲಿ ಇದ್ದಾರೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಸೋಮವಾರ ಆನ್‌ಲೈನ್‌ ಮೂಲಕ ಬ್ಯಾಂಕ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು. ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಹುಸೇನ್ ದೊಡ್ಡಮನಿ, ಖಲೀಮ್‌ ಉಲ್ಲಾ, ಬೈರೇಗೌಡ, ಶಿವಕುಮಾರ್, ನಿರ್ದೇಶಕ ಸೋಮಣ್ಣ, ಸಿಬ್ಬಂದಿ ಬೇಬಿ ಶಾಮಿಲಿ ಇದ್ದಾರೆ   

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯ ರೈತರು, ಮಹಿಳೆಯರು ಮತ್ತು ಕೂಲಿ ಕಾರ್ಮಿಕರಿಗೆ ಆಸರೆಯಾಗಿರುವ ಬ್ಯಾಂಕ್ ವಿರುದ್ಧದ ಟೀಕೆಗೆ ಕಿವಿಗೂಡದೆ ಬದ್ಧತೆಯಿಂದ ಕೆಲಸ ಮಾಡಿ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸಿಬ್ಬಂದಿಗೆ ಸೂಚಿಸಿದರು.

ಇಲ್ಲಿ ಸೋಮವಾರ ಅವಿಭಜಿತ ಜಿಲ್ಲೆಯ ಬ್ಯಾಂಕ್‌ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಆನ್‌ಲೈನ್‌ ಮೂಲಕ ನಡೆದ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕ್ ಸಾರ್ವಜನಿಕ ಸಂಸ್ಥೆ ಆಗಿರುವುದರಿಂದ ಟೀಕೆ ಸಾಮಾನ್ಯ. ಟೀಕಿಸಿದಷ್ಟು ಕೆಲಸ ಮಾಡುವ ಶಕ್ತಿ ಹೆಚ್ಚುತ್ತದೆ’ ಎಂದರು.

‘ಬ್ಯಾಂಕ್‌ನಲ್ಲಿ ಜಾತಿ, ಧರ್ಮ, ಮತ, ಪಕ್ಷ ಬೇಧಕ್ಕೆ ಅವಕಾಶವಿಲ್ಲ. ಬ್ಯಾಂಕ್‌ ವಿರುದ್ಧ ಕೇಳಿಬರುತ್ತಿವೆ ಟೀಕೆಗೆ ಮೌನವೇ ಉತ್ತರ. ಬ್ಯಾಂಕ್ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಇದು ನಿಮ್ಮ ಬದುಕಿನ ಪ್ರಶ್ನೆಯೂ ಆಗಿದ್ದು, ನಿಷ್ಠೆಯಿಂದ ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದರು.

ADVERTISEMENT

ಠೇವಣಿ ಸಂಗ್ರಹದ ನಿರೀಕ್ಷಿತ ಗುರಿ ಸಾಧಿಸದ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ಅಧ್ಯಕ್ಷರು, ‘ನಿಮಗೆ ಅನ್ನ ನೀಡುವ ಸಂಸ್ಥೆಗೆ ದ್ರೋಹ ಮಾಡದೆ ಹಗಲಿರುಳು ಕೆಲಸ ಮಾಡಿ. ಭಾನುವಾರ ಬ್ಯಾಂಕ್‌ನ ಕೆಲಸ ಮಾಡಬಾರದೆಂಬ ನಿಯಮವಿಲ್ಲ. ಠೇವಣಿ ಸಂಗ್ರಹಕ್ಕೆ ಒತ್ತು ಕೊಡಿ. ಉಳಿತಾಯ ಮಾಡುವವರ ಮನವೊಲಿಸಿ ಠೇವಣಿ ಸಂಗ್ರಹಿಸಿ’ ಎಂದು ತಾಕೀತು ಮಾಡಿದರು.

‘ಕೆಲ ಶಾಖೆಗಳಲ್ಲಿ ಸಾಲ ವಸೂಲಾತಿಯಲ್ಲಿ ನಿಷ್ಕ್ರೀಯ ಆಸ್ತಿ ಮೌಲ್ಯ (ಎನ್‌ಪಿಎ) ಹೆಚ್ಚಿದೆ. ಸಾಲ ಪಡೆದವರ ಮನೆ ಬಾಗಿಲಿಗೆ ಹೋಗಿ ತಿಂಗಳ ಅಂತ್ಯದೊಳಗೆ ವಸೂಲಿ ಮಾಡಿ. ಸಾಲ ವಸೂಲಿಯಲ್ಲಿ ವಿಫಲವಾದರೆ ಶಿಸ್ತುಕ್ರಮ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

ಬ್ಯಾಂಕ್‌ನ ನಿರ್ದೇಶಕ ಸೋಮಣ್ಣ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಬೈರೇಗೌಡ, ಖಲೀಮ್‌ ಉಲ್ಲಾ, ಶಿವಕುಮಾರ್, ಹುಸೇನ್ ದೊಡ್ಡಮನಿ, ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.