ADVERTISEMENT

ಕಸಾಪದಲ್ಲಿ ಪುನರ್ವಸತಿ ಬೇಕಿಲ್ಲ: ಮಹೇಶ್‌ ಜೋಶಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 14:11 IST
Last Updated 1 ಏಪ್ರಿಲ್ 2021, 14:11 IST
ಮಹೇಶ್‌ ಜೋಶಿ
ಮಹೇಶ್‌ ಜೋಶಿ   

‌‌ಕೋಲಾರ: ‘ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್‌ ಆಗಿಸುವ ಗುರಿಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದು ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕ ಹಾಗೂ ಅಭ್ಯರ್ಥಿ ಮಹೇಶ್‌ ಜೋಶಿ ಹೇಳಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನನಗೆ ಅಧಿಕಾರದ ಆಸೆಯಿಲ್ಲ. ದೂರದರ್ಶನದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದು, ಪರಿಷತ್‌ನಲ್ಲಿ ಪುನರ್ವಸತಿ ಬೇಕಿಲ್ಲ. ಕನ್ನಡ ನಾಡು, ನುಡಿ, ಜಲದ ಸೇವಾಕಾಂಕ್ಷಿಯಾಗಿ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆ ಸ್ಪರ್ಧಿಸಿದ್ದೇನೆ’ ಎಂದರು.

‘ಕೋಲಾರ ಜಿಲ್ಲೆಯಲ್ಲಿ 1924ರಲ್ಲಿ 10ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ನಂತರ ಇಲ್ಲಿ ಸಮ್ಮೇಳನ ನಡೆದಿಲ್ಲ. ಚಾಮರಾಜನಗರ, ಯಾದಗಿರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ಬಾರಿಯೂ ಸಮ್ಮೇಳನ ನಡೆದಿಲ್ಲ. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಕೋಲಾರದಲ್ಲಿ ಸಮ್ಮೇಳನ ನಡೆಸುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

‘ನಾನು ರಾಜಕೀಯವಾಗಿ ತಟಸ್ಥ ವ್ಯಕ್ತಿ. ಎಡ- ಬಲ ಪಂಥೀಯ ಅಲ್ಲ. ನಾನು ಮಾನವ ಪಂಥದ, ಕನ್ನಡದ ಪಂಥದವನಾಗಿ ಕೆಲಸ ಮಾಡುತ್ತೇನೆ. ಭಾಷೆಗೆ ಜಾತಿ, ಪ್ರದೇಶದ ಸರಪಳಿ ಹಾಕಿ ಪರಿಷತ್ತನ್ನು ಕಟ್ಟಿ ಹಾಕಬಾರದು. ನಾನು ಭೌಗೋಳಿಕವಾಗಿ ಅಥವಾ ಪ್ರಾದೇಶಿಕವಾಗಿ ಗುರುತಿಸಿಕೊಳ್ಳುವುದಿಲ್ಲ. ಅಖಂಡ ಕರ್ನಾಟಕದ ಪ್ರತಿನಿಧಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದು ತಿಳಿಸಿದರು.

ಹೊಸ ಮನ್ವಂತರ: ‘ಕನ್ನಡ ಅನ್ನದ ಭಾಷೆ ಆಗಬೇಕು. ಕನ್ನಡ ಭಾಷಿಕರಿಗೆ ಖಾಸಗಿ ಕ್ಷೇತ್ರದಲ್ಲೂ ಉದ್ಯೋಗ ಸಿಗಬೇಕು. ನಾನು ಕಸಾಪ ಅಧ್ಯಕ್ಷನಾದರೆ ಕನ್ನಡದ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ. ಹೋಬಳಿ ಮಟ್ಟದಲ್ಲಿ ಕನ್ನಡ ಬೆಳೆಸುವ ಕೆಲಸ ಮಾಡುತ್ತೇನೆ. ಪರಿಷತ್ತಿನಲ್ಲಿ ಹೊಸ ಮನ್ವಂತರ ಸೃಷ್ಟಿಗೆ ಇತಿಹಾಸ ಬರೆಯುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

‘ರಾಜ್ಯದಲ್ಲಿ 3.10 ಲಕ್ಷ ಮಂದಿ ಮತದಾರರಿದ್ದಾರೆ. ಜಿಲ್ಲೆಯಲ್ಲಿ 10,041 ಮತದಾರರಿದ್ದಾರೆ. ಕೋಲಾರ ತಾಲ್ಲೂಕಿನಲ್ಲಿ 3, ಮುಳಬಾಗಿಲು ತಾಲ್ಲೂಕಿನಲ್ಲಿ 2 ಮತ್ತು ಇತರೆ ತಾಲ್ಲೂಕುಗಳಲ್ಲಿ ತಲಾ 1ರಂತೆ ಒಟ್ಟು 9 ಮತದಾನ ಕೇಂದ್ರಗಳಿವೆ. ಮೇ 9ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆಯುತ್ತದೆ’ ಎಂದು ವಿವರಿಸಿದರು.

ವೈದ್ಯ ಡಾ.ಶಿವಣ್ಣ, ಕನ್ನಡ ಸಿರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ಬರಾಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.