ADVERTISEMENT

ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 5:07 IST
Last Updated 28 ಜುಲೈ 2022, 5:07 IST
ಕೋಲಾರ ತಾಲ್ಲೂಕು ವೇಮಗಲ್ ಹೋಬಳಿ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟವನ್ನು ಕ್ಯಾಲನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಸಕ ಕೆ. ಶ್ರೀನಿವಾಸಗೌಡ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್ ಉದ್ಘಾಟಿಸಿದರು
ಕೋಲಾರ ತಾಲ್ಲೂಕು ವೇಮಗಲ್ ಹೋಬಳಿ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟವನ್ನು ಕ್ಯಾಲನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಸಕ ಕೆ. ಶ್ರೀನಿವಾಸಗೌಡ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್ ಉದ್ಘಾಟಿಸಿದರು   

ಕ್ಯಾಲನೂರು(ಕೋಲಾರ): ‘ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಖುಷಿಯಿಂದ ಆಟವಾಡಿ, ದ್ವೇಷ ಬಿಡಿ’ ಎಂದು ಶಾಸಕ ಕೆ. ಶ್ರೀನಿವಾಸಗೌಡ ಕರೆ
ನೀಡಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ವೇಮಗಲ್ ಹೋಬಳಿ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗೆಲುವು ಜವಾಬ್ದಾರಿ ಹೆಚ್ಚಿಸುತ್ತದೆ, ಸೋಲು ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಮಕ್ಕಳು ಸ್ನೇಹಪೂರ್ವಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಮಾತನಾಡಿ, ‘ಶಿಕ್ಷಣದ ಜತೆಗೆ ಕ್ರೀಡೆ ಅಗತ್ಯ. ಉತ್ತಮ ಆರೋಗ್ಯವಿರುವ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ’ ಎಂದರು.

‘ಕ್ರೀಡೆಯನ್ನು ಕ್ರೀಡೆಯಾಗಿ ಸ್ವೀಕರಿಸಿ. ತೀರ್ಪುಗಾರರು ನೀಡುವ ತೀರ್ಪು ಗೌರವಿಸಿ. ಎರಡು ದಿನ ಸಂಭ್ರಮದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧಕರಾಗಿ ಶಾಲೆಗಳಿಗೆ ತೆರಳಿ’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಂ. ಚಂದ್ರಪ್ಪ, ‘ಕೋವಿಡ್‍ನಿಂದಾಗಿ ಎರಡು ವರ್ಷಗಳಿಂದ ಕ್ರೀಡೆಗಳಿಗೆ ಅವಕಾಶ ತಪ್ಪಿ ಹೋಗಿತ್ತು. ಈಗ ಪುನರಾರಂಭವಾಗಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಾರೆ’ ಎಂದರು.

ಮುಖ್ಯಶಿಕ್ಷಕ ಓ. ಮಲ್ಲಿಕಾರ್ಜುನ್, ವೇಮಗಲ್ ವೃತ್ತ ನಿರೀಕ್ಷಕ ಶಿವರಾಜ್, ಮುಖಂಡ ಸಿ.ಡಿ. ರಾಮಚಂದ್ರೇಗೌಡ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಚೌಡಪ್ಪ, ಜಿಲ್ಲಾ ಅಧ್ಯಕ್ಷ ವಿ. ಮುರಳಿಮೋಹನ್, ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.