ADVERTISEMENT

ಹಿಂದುಳಿದ ವರ್ಗಗಳಿಗೆ ಆರ್ಥಿಕ ಸೌಲಭ್ಯ: ನೆ.ಲ.ನರೇಂದ್ರಬಾಬು

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 16:47 IST
Last Updated 11 ಜನವರಿ 2021, 16:47 IST

ಕೋಲಾರ: ‘ಪಕ್ಷದ ಎಲ್ಲಾ ಮೋರ್ಚಾಗಳು ಸರ್ಕಾರದ ಸೇತುವೆಯಾಗಿ ಕೆಲಸ ಮಾಡಲಿದ್ದು, ವ್ಯವಸ್ಥೆಯನ್ನು ಪಕ್ಷದ ಚೌಕಟ್ಟಿನಲ್ಲಿ ಬಲಪಡಿಸುತ್ತೇವೆ’ ಎಂದು ಬಿಜೆಪಿ ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ನೆ.ಲ.ನರೇಂದ್ರಬಾಬು ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಿಗಮ, ಮಂಡಳಿಗಳನ್ನು ರಚಿಸುವುದರ ಜತೆಗೆ ಬಜೆಟ್‌ನಲ್ಲಿ ಅಗತ್ಯ ಆರ್ಥಿಕ ಸೌಲಭ್ಯ ಕಲ್ಪಿಸಲಿದೆ’ ಎಂದರು.

‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಹಿಂದುಳಿದ ವರ್ಗಗಳನ್ನು ಸಂಘಟಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಿಜೆಪಿ ಕಾರ್ಯಕರ್ತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಹಿಂದುಳಿದ ಮೋರ್ಚಾ ಸಂಘಟನೆಯನ್ನು ಮಹಾನ್‌ ಶಕ್ತಿ ಕೇಂದ್ರದಿಂದ ಬೂತ್ ಮಟ್ಟದವರೆಗೆ ಸಂಘಟಿಸುತ್ತಾ ಕಾರ್ಯಕರ್ತರಿಗೆ ತರಬೇತಿ ನೀಡಿ ಪಕ್ಷದ ಜತೆಗೆ ಕೈಜೋಡಿಸುವಂತೆ ಮಾಡುತ್ತೇವೆ’ ಎಂದು ವಿವರಿಸಿದರು.

ADVERTISEMENT

‘ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಸಂಘಟಿಸಿ ಜಾಗೃತಿ ಮೂಡಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಮಾಡುವುದು ಸಂಘಟನೆಯ ಮೂಲ ಉದ್ದೇಶ’ ಎಂದು ಮಾಹಿತಿ ನೀಡಿದರು.

‘ಹಿಂದುಳಿದ ವರ್ಗಗಳನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಧೃಡಗೊಳಿಸಲು ತರಬೇತಿ ಆಯೋಜಿಸಲಾಗುವುದು. ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುವು ಮಾಡಿ ಕೊಡುವುದು, ಶೈಕ್ಷಣಿಕ ತರಬೇತಿ. ವಿದ್ಯಾರ್ಥಿನಿಲಯಗಳ ಸೌಲಭ್ಯಕ್ಕೆ ಒತ್ತು ನೀಡಲಾಗುವುದು’ ಎಂದು ಹೇಳಿದರು.

ಸಾಮಾಜಿಕ ನ್ಯಾಯ: ‘ಎಲ್ಲಾ ವರ್ಗಗಳಿಗೂ ಮೀಸಲಾತಿ ಮೂಲಕ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಹಲವು ಅಭಿವೃದ್ಧಿ ಮಂಡಳಿಗಳನ್ನು ದೇವರಾಜ ಅರಸು ಅವರ ಆಡಳಿತದ ಸರ್ಕಾರದಿಂದಲೂ ರಚಿಸುತ್ತಾ ಬರಲಾಗುತ್ತಿದೆ. ಬಿಜೆಪಿ ಸರ್ಕಾರ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತ ವರ್ಗಗಳ ಜತೆಗೆ ಮುಂದುವರಿದ ಸಮುದಾಯದವರಿಗೂ ಶೇ 10 ಮೀಸಲಾತಿ ನಿಗದಿಪಡಿಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಸುರೇಶ್‌ಬಾಬು, ಜಿಲ್ಲಾ ಅಧ್ಯಕ್ಷ ನಾಗರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.