
ಕೋಲಾರ: ವಿದ್ಯಾರ್ಥಿಗಳ ಭವಿಷ್ಯವನ್ನು ಮತ್ತೊಬ್ಬರು ತಿದ್ದಲು ಬರುವುದಿಲ್ಲ. ತಮ್ಮ ಭವಿಷ್ಯವನ್ನು ತಾವೇ ನಿರ್ಮಿಸಿಕೊಳ್ಳಬೇಕು. ಅದು ತಾವು ಪಡೆಯುವ ಶಿಕ್ಷಣದ ಮೇಲೆ ನಿಂತಿದೆ ಎಂದು ಕೋಲಾರದವರೇ ಆದ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
ಶನಿವಾರ ನಗರದ ಹೊರವಲಯದ ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಉತ್ತಮ ಆಲೋಚನೆ ಮತ್ತು ಯೋಜನೆ ಮಾಡದೆ ಹೋದರೆ ಮುಂದೆ ಕಷ್ಟದ ದಿನ ಎದುರಾಗುತ್ತವೆ ಎಂದರು.
ಡಿಡಿಪಿಯು ರಾಜಶೇಖರ್ ಪಟ್ಟಣಶೆಟ್ಟಿ ಮಾತನಾಡಿ, ‘ಗುರಿ ಇದ್ದಾಗ ಮಾತ್ರವೇ ಸಾಧನೆ ಮಾಡಲು ಸಾಧ್ಯ. ಬದುಕಿಗೆ ಮಾದರಿಯಾಗುವ ವ್ಯಕ್ತಿಗಳನ್ನು ಆದರ್ಶವಾಗಿ ಇಟ್ಟುಕೊಂಡು ಶಿಕ್ಷಣದ ಕಡೆ ಗಮನ ಕೊಡಿ. ಪೋಷಕರು ಸಾಲ ಮಾಡಿ ತಮ್ಮನ್ನು ಓದಿಸಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಗಾಯಕ ಅಕ್ಬರ್ ಹಾಡು ಹಾಡಿದರು. ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಂ.ಉದಯಕುಮಾರ್ ವಹಿಸಿದ್ದರು. ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಕೆ.ನಟರಾಜ್, ಕಾಲೇಜಿನ ಪ್ರಾಂಶುಪಾಲ ಗಂಗಾಪುರ ಜಿ.ವಿ.ವಿನಯ್ ಇದ್ದರು.