ADVERTISEMENT

ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 14:16 IST
Last Updated 16 ಸೆಪ್ಟೆಂಬರ್ 2019, 14:16 IST

ಕೋಲಾರ: ‘ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಪರಿಸರದ ಕುರಿತು ಆಸಕ್ತಿ ಮೂಡಿಸಲು ಜಿಲ್ಲೆಯ 200 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸೆ.12ರಿಂದ 15ರವರೆಗೆ ಶೈಕ್ಷಣಿಕ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಕೆ.ಸಿ.ರೆಡ್ಡಿ ಸರೋಜಮ್ಮ ಪ್ರತಿಷ್ಠಾನದ ಕಾರ್ಯದರ್ಶಿ ವಸಂತ ಕವಿತಾ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಕೋಲಾರ ಮತ್ತು ಮುಳಬಾಗಿಲು ತಾಲ್ಲೂಕಿನ ವಿದ್ಯಾರ್ಥಿಗಳನ್ನು ಬೆಂಗಳೂರು ಹಾಗೂ ಮೈಸೂರಿಗೆ ಪ್ರವಾಸ ಕರೆದುಕೊಂಡು ಹೋಗಲಾಗುವುದು’ ಎಂದು ಹೇಳಿದರು.

‘ಪರಿಸರ, ಸೌರವ್ಯೂಹ, ರಾಸಾಯನಿಕ ಪ್ರಕ್ರಿಯೆಯಂತಹ ಚಟುವಟಿಕೆ ಬಗ್ಗೆ ಮಕ್ಕಳಿಗೆ ಆಸಕ್ತಿ ಹೆಚ್ಚುವಂತೆ ಮಾಡುತ್ತೇವೆ. ಜತೆಗೆ ವಿವಿಧ ಕ್ಷೇತ್ರದಲ್ಲಿನ ವಿಪುಲ ಅವಕಾಶ ಕುರಿತು ತಿಳಿವಳಿಕೆ ಮೂಡಿಸುತ್ತೇವೆ. ದೇಶದ ಸೈನಿಕರಿಗೆ ಒದಗಿಸುವ ಆಹಾರದ ಬಗ್ಗೆ ಮಕ್ಕಳಿಗೆ ಕುತೂಹಲ ಇರುತ್ತದೆ. ಈ ಎಲ್ಲಾ ಅಂಶಗಳನ್ನು ಮಕ್ಕಳಿಗೆ ತಿಳಿಸುವುದು ಪ್ರವಾಸದ ಮುಖ್ಯ ಉದ್ದೇಶ’ ಎಂದು ವಿವರಿಸಿದರು.

ADVERTISEMENT

‘ಎರಡೂ ತಾಲ್ಲೂಕುಗಳ ಪ್ರೌಢ ಶಾಲೆಗಳಿಗೆ ತೆರಳಿ ಮಕ್ಕಳೊಂದಿಗೆ ಚರ್ಚಿಸಿ ಅವರಿಂದ ಪರಿಸರ, ವಿಜ್ಞಾನ ಕುರಿತ ಬರಹ ಬರೆಸಲಾಗುವುದು. ವಿಜ್ಞಾನ, ಪರಿಸರ ಕುರಿತಂತೆ ತಮ್ಮ ಕಲ್ಪನೆಯ ಚಿತ್ರ ಬಿಡಿಸಲು ಹೇಳಿ ಕ್ರಿಯಾಶೀಲ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರವಾಸಕ್ಕೆ ಆಯ್ಕೆ ಮಾಡುತ್ತೇವೆ. ಇದಕ್ಕೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಪ್ರವಾಸಕ್ಕೆ ಆಯ್ಕೆಯಾದ 200 ವಿದ್ಯಾರ್ಥಿಗಳನ್ನು ಬೆಂಗಳೂರಿನ ಜಿಕೆವಿಕೆ, ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (ಸಿಎಫ್‌ಟಿಆರ್‌ಐ) ಕರೆದೊಯ್ಯಲಾಗುವುದು. ಜತೆಗೆ ಮೂರ್ನಾಲ್ಕು ವಿದ್ಯಾರ್ಥಿಗಳನ್ನು ದೆಹಲಿ ಪ್ರವಾಸಕ್ಕೆ ಕಳುಹಿಸಿ ಸಂಸತ್ತು ಸೇರಿದಂತೆ ಹಲವು ಸ್ಥಳಗಳನ್ನು ತೋರಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.

ಮರ್ಸಿ ಸಂಸ್ಥೆಯ ಟ್ರಸ್ಟಿ ಮುಸ್ತಾನ್, ಕಾಂಗ್ರೆಸ್ ಮುಖಂಡ ಜೋಗಮುಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.