ADVERTISEMENT

ಕೋಲಾರ: ಜಿಲ್ಲೆಯಲ್ಲಿ ಈದ್‌ ಉಲ್‌ ಫಿತ್ರ್ ಆಚರಣೆ ಸಂಭ್ರಮ

ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ: ಹಲವು ಗಣ್ಯರು ಭಾಗಿ

​ಪ್ರಜಾವಾಣಿ ವಾರ್ತೆ
Published 3 ಮೇ 2022, 13:58 IST
Last Updated 3 ಮೇ 2022, 13:58 IST
ಈದ್‌ ಉಲ್‌ ಫಿತ್ರ್‌ ಅಂಗವಾಗಿ ಮುಸ್ಲಿಂ ಬಾಂಧವರು ಕೋಲಾರದ ಈದ್ಗಾ ಮೈದಾನದಲ್ಲಿ ಮಂಗಳವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಈದ್‌ ಉಲ್‌ ಫಿತ್ರ್‌ ಅಂಗವಾಗಿ ಮುಸ್ಲಿಂ ಬಾಂಧವರು ಕೋಲಾರದ ಈದ್ಗಾ ಮೈದಾನದಲ್ಲಿ ಮಂಗಳವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಕೋಲಾರ: ಭಾವೈಕ್ಯದ ಸಂಕೇತ ಹಾಗೂ ಹಸಿವಿನ ಮಹತ್ವ ಸಾರುವ ಈದ್‌ ಉಲ್‌ ಫಿತ್ರ್‌ ಹಬ್ಬದ ಆಚರಣೆಯು ಜಿಲ್ಲೆಯಾದ್ಯಂತ ಮಂಗಳವಾರ ಕಳೆಗಟ್ಟಿತು. ರಂಜಾನ್ ಮಾಸದ ಹಿನ್ನೆಲೆಯಲ್ಲಿ ತಿಂಗಳಿಂದ ಉಪವಾಸ ವ್ರತದಲ್ಲಿದ್ದ ಮುಸ್ಲಿಂ ಬಾಂಧವರು ಸಂಭ್ರಮದಿಂದ ಹಬ್ಬ ಆಚರಿಸಿದರು.

ಶ್ವೇತ ವರ್ಣದ ಹೊಸ ಬಟ್ಟೆ ತೊಟ್ಟಿದ್ದ ಮುಸ್ಲಿಂ ಬಾಂಧವರು ನಗರದ ಹೊರವಲಯದ ಸಂಗೊಂಡಹಳ್ಳಿ ಮೈದಾನ ಹಾಗೂ ಕ್ಲಾಕ್ ಟವರ್ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಅಂಗವಾಗಿ ಮಸೀದಿಗಳ ಮಿನಾರುಗಳಲ್ಲಿ ಪ್ರಾರ್ಥನೆಯ ದನಿ ಮೊಳಗಿತು.

ಧಾರ್ಮಿಕ ಮುಖಂಡರು, ಸಮುದಾಯದ ಹಿರಿಯರು ಮತ್ತು ಮಕ್ಕಳು ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಪುಟ್ಟ ಮಕ್ಕಳು ಪರಸ್ಪರ ಆಲಂಗಿಸಿ ಶುಭಾಶಯ ಕೋರಿದರು. ಮಹಿಳೆಯರು ಮನೆಗಳಲ್ಲೇ ಪ್ರಾರ್ಥನೆ ಮಾಡಿ ಅಲ್ಲಾಹುವನ್ನು ಸ್ಮರಿಸಿದರು.

ADVERTISEMENT

ಹಬ್ಬದ ಹಿನ್ನೆಲೆಯಲ್ಲಿ ಮಸೀದಿಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ದರ್ಗಾ ಶಾಹಿ ಮೊಹಲ್ಲಾ ಹಿಂಭಾಗದ ಕುತುಬ್‌ ಗೋರಿ ಮಸೀದಿ, ಸೈಯದಾನ ಬಿ ದರ್ಗಾ, ಶಾಹಿ ಲತೀಫಾ ಭಾನು ಮಸೀದಿ, ನ್ಯಾಮತ್ ಬಿ ಮಸೀದಿ, ಮಹಮ್ಮದ್‌ ನೂರಿ ಮಸೀದಿ, ಶಾಬಾ ಷಾ ಖಲಂದರ್‌ ಮಸೀದಿ, ಷರಿಯಾ ಮಸೀದಿ, ಬಾರ್ಲೈನ್‌ ಮಸೀದಿ, ಬಿಲಾಲ್ ಮಸೀದಿ, ಖಾನ್‌ ಸಾಬ್‌ ಮಸೀದಿಯಲ್ಲಿ ಬೆಳ್ಳಿಗೆ ಮತ್ತು ಸಂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ಸಂಚಾರ ನಿರ್ಬಂಧ: ನಗರದ ಎಂ.ಬಿ ರಸ್ತೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಿದ್ದ ಹಿನ್ನೆಲೆಯಲ್ಲಿ ಕೋಲಾರ–ಬೆಂಗಳೂರು ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಮೈದಾನದೊಳಗೆ ಜಾಗ ಸಾಲದ ಕಾರಣ ಮುಸ್ಲಿಂ ಬಾಂಧವರು ಮೈದಾನದ ಹೊರಗಿನ ರಸ್ತೆ, ಕ್ಲಾಕ್‌ ಟವರ್‌ ಮೇಲ್ಸೇತುವೆಯಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯದವರ ಅಂಗಡಿಗಳು ಮುಚ್ಚಿದ್ದವು. ಆಟೊ ಸಂಚಾರ ವಿರಳವಾಗಿತ್ತು. ಬಸ್‌ ನಿಲ್ದಾಣ ಹಾಗೂ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ದರ್ಗಾಗಳು, ಮುಸ್ಲಿಂ ಜನವಸತಿ ಇರುವ ಬಡಾವಣೆಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಧಾರ್ಮಿಕ ಸಂದೇಶ: ಸಾಮೂಹಿಕ ಪ್ರಾರ್ಥನೆ ಬಳಿಕ ಧಾರ್ಮಿಕ ಸಂದೇಶ ನೀಡಿದ ಮೌಲ್ವಿಗಳು, ‘ಬಡತನ ಯಾವುದೇ ಧರ್ಮ ಅಥವಾ ಜಾತಿಗೆ ಸಿಮೀತವಾಗಿಲ್ಲ. ಆಯಾ ಧರ್ಮದಲ್ಲಿನ ಸ್ಥಿತಿವಂತರು ಬಡವರಿಗೆ ನೆರವು ನೀಡಿದಾಗ ಸಮಾಜದಲ್ಲಿ ಸಮಾನತೆ ಬರುತ್ತದೆ. ಶಾಂತಿ ಸೌರ್ಹಾದತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಸಹೋದರರಂತೆ ಬಾಳಬೇಕು’ ಎಂದು ಕಿವಿಮಾತು ಹೇಳಿದರು.

‘ಕೋವಿಡ್‌ ಸಂಕಷ್ಟದಿಂದ ಜಗತ್ತಿಗೆ ಮುಕ್ತಿ ಸಿಗಲಿ. ದೇವರು ಆದಷ್ಟು ಬೇಗ ಕೊರೊನಾ ಸೋಂಕು ತೊಲಗಿಸಲಿ. ಸೋಂಕಿನ ವಿರುದ್ಧ ಹೋರಾಡಲು ದೇವರು ಜನರಿಗೆ ಶಕ್ತಿ ಕರುಣಿಸಲಿ’ ಎಂದು ಪ್ರಾರ್ಥಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌, ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ಜಿಲ್ಲಾ ಅಂಜುಮಾನ್‌ ಇಸ್ಲಾಮಿಯಾ ಸಮಿತಿ ಅಧ್ಯಕ್ಷ ಜಮೀರ್ ಅಹಮ್ಮದ್‌, ನಗರಸಭೆ ಸದಸ್ಯ ಪ್ರಸಾದ್‌ಬಾಬು, ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ವಿಶೇಷ ತಿಂಡಿ ತಿನಿಸು: ಹಬ್ಬದ ಅಂಗವಾಗಿ ಮನೆಗಳಲ್ಲಿ ಕೋಳಿ ಹಾಗೂ ಕುರಿ ಮಾಂಸದ ವಿಶೇಷ ತಿಂಡಿ ತಿನಿಸು ತಯಾರಿಸಲಾಗಿತ್ತು. ಬಿರಿಯಾನಿ, ಕುಷ್ಕಾ, ಕಬಾಬ್‌, ರೋಟಿ ಮಾಂಸದ ಘಮಲು ಎಲ್ಲೆಲ್ಲೂ ಹರಡಿತ್ತು. ಕೋಳಿ ಹಾಗೂ ಕುರಿ ಮಾಂಸದ ಅಂಗಡಿಗಳ ಬಳಿ ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

ಸಾಮೂಹಿಕ ಪ್ರಾರ್ಥನೆ ಬಳಿಕ ಕುಟುಂಬ ಸದಸ್ಯರೆಲ್ಲಾ ಒಟ್ಟಾಗಿ ಹಬ್ಬದೂಟ ಸವಿದರು. ಬಡ ಜನರಿಗೆ ದಿನಸಿ, ಹೊಸ ಬಟ್ಟೆ ಹಾಗೂ ತಿಂಡಿ ತಿನಿಸುಗಳನ್ನು ದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.