ಕೋಲಾರ: ಹಲವಾರು ಆರೋಪ, ವಿವಾದಗಳು ಹಾಗೂ ಜಟಾಪಟಿಯ ಬಳಿಕ ಕೊನೆಗೂ ಕೊಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಕೋಮುಲ್) ಚುನಾವಣೆ ನಿಗದಿಯಾಗಿದ್ದು, ಜೂನ್ 25ರಂದು ಮತದಾನ ನಡೆಯಲಿದೆ.
ಈ ಸಂಬಂಧ ಜಿಲ್ಲಾಧಿಕಾರಿಯೂ ಆಗಿರುವ ಫೆಡರಲ್ ಸಹಕಾರ ಸಂಘಗಳ ಜಿಲ್ಲಾ ಚುನಾವಣಾಧಿಕಾರಿ ಎಂ.ಆರ್.ರವಿ ಅಧಿಸೂಚನೆ ಹೊರಡಿಸಿದ್ದಾರೆ.
ಅಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ನಂತರ ಮತ ಎಣಿಕೆ ನಡೆದು ಫಲಿತಾಂಶ ಘೋಷಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದಾರೆ.
ಇದರಿಂದ ಹಾಲು ಒಕ್ಕೂಟದ ಚುನಾವಣೆಗೆ ಪ್ರಕ್ರಿಯೆಗಳು ಶುರುವಾಗಲಿದ್ದು, ಚಟುವಟಿಕೆಗಳು ಬಿರುಸು ಪಡೆಯಲಿವೆ.
ಒಟ್ಟು 13 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಇಬ್ಬರು ಮಹಿಳಾ ನಿರ್ದೇಶಕರ ಆಯ್ಕೆ ನಡೆಯಲಿದೆ. ಒಟ್ಟು 982 ಅರ್ಹ ಮತದಾರರು ಇದ್ದಾರೆ. ಆಯಾಯ ತಾಲ್ಲೂಕಿನ ನಿರ್ದೇಶಕರ ಆಯ್ಕೆಗೆ ಮತದಾನ ಮಾಡಲಿದ್ದಾರೆ.
ಕಳೆದ ಬಾರಿ ಕೂಡ 13 ನಿರ್ದೇಶಕ ಸ್ಥಾನಗಳಿದ್ದವು. ಆದರೆ, ಆಗ ಚಿಕ್ಕಬಳ್ಳಾಪುರ ಜಿಲ್ಲೆಯನ್ನೂ ಒಳಗೊಂಡಿತ್ತು. ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗೆ ತಲಾ ಒಬ್ಬ ಮಹಿಳಾ ನಿರ್ದೇಶಕರಿದ್ದರು.
ಈ ಬಾರಿ ಕೋಲಾರ ತಾಲ್ಲೂಕಿನಲ್ಲೇ ಮೂವರು ನಿರ್ದೇಶಕರ ಕ್ಷೇತ್ರಗಳಿವೆ. ಹೀಗಾಗಿ, ಚುನಾವಣೆ ಬಾರಿ ಕುತೂಹಲ ಕೆರಳಿಸಿದೆ. ರಾಜಕಾರಣಿಗಳು ಸೇರಿದಂತೆ ಘಟಾನುಘಟಿಗಳು ನಿರ್ದೇಶಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಸದ್ಯದಲ್ಲೇ ನಾಮಪತ್ರ ಸಲ್ಲಿಕೆ ವಿಚಾರವಾಗಿ ದಿನಾಂಕ ನಿಗದಿಪಡಿಸಲಾಗುತ್ತದೆ. ಮತದಾನ ಮಾಡುವ ಡೆಲಿಗೇಟ್‌ಗಳ ಪಟ್ಟಿ ಮಾಡಲಾಗುತ್ತದೆ.
ಸಹಕಾರ ಸಂಘಗಳ ನಿಯಮ 1960ರ ನಿಯಮ 14 –ಎಜಿ ರಂತೆ ಜೂನ್ 25ರಂದು ಚುನಾವಣೆ ಪ್ರಕ್ರಿಯೆ ನಡೆಯಲಿದೆ.
ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಹಾಲು ಒಕ್ಕೂಟದ ಅಡಳಿತಾಧಿಕಾರಿಯು ಕ್ರಮವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಎಂ.ಆರ್.ರವಿ ಹೇಳಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ಕ್ಷೇತ್ರ ಮರುವಿಂಗಡಣೆಗೆ ಅನುಮೋದನೆ ಪಡೆಯಲು ಈಚೆಗೆ ಒಕ್ಕೂಟದ ಆಡಳಿತಾಧಿಕಾರಿ ಡಾ.ಮೈತ್ರಿ ಅಧ್ಯಕ್ಷತೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಉಪಸ್ಥಿತಿಯಲ್ಲಿ ಸರ್ವಸದಸ್ಯರ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಜಟಾಪಟಿ ಹಾಗೂ ಗೊಂದಲದ ನಡುವೆಯೇ ಸಭೆಯಲ್ಲಿ ಮರು ವಿಂಗಡಣೆಗೆ ಬೈಲಾ ತಿದ್ದುಪಡಿಗೆ ಬಹುಮತದ ಒಪ್ಪಿಗೆ ಸಿಕ್ಕಿತ್ತು.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಸಹಕಾರ ಸಂಘಗಳ ಒಕ್ಕೂಟವು (ಕೋಚಿಮುಲ್) ವಿಭಜನೆಯಾಗಿ, ಚಿಕ್ಕಬಳ್ಳಾಪುರ ಒಕ್ಕೂಟವು ಪ್ರತ್ಯೇಕಗೊಂಡಿತು. ಆನಂತರ ಕೋಲಾರ ಒಕ್ಕೂಟದ ನಿರ್ದೇಶಕ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಬೇಕಿತ್ತು. ಈ ಸಂಬಂಧ ಸಹಕಾರ ಇಲಾಖೆಯ ಪ್ರಾದೇಶಿಕ ಆಯುಕ್ತ ಒಕ್ಕೂಟಕ್ಕೆ ಪತ್ರ ಕಳುಹಿಸಿ, ಮತ ಕ್ಷೇತ್ರ ವಿಂಗಡಣೆಗೆ ಸೂಚಿಸಿದ್ದರು.
ಆದರೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಅವರು, ಆರ್‌ಸಿ ಪತ್ರವನ್ನು ಆಡಳಿತಾಧಿಕಾರಿ ಗಮನಕ್ಕೆ ತಾರದೆ ಅನುಮೋದನೆಗೆ ಪ್ರಸ್ತಾವ ಸಲ್ಲಿಸಿದ್ದರು ಎನ್ನಲಾಗಿದೆ. ಇದು ಕೆಲ ಹಾಲು ಸಹಕಾರ ಸಂಘಗಳ ಅಧ್ಯಕ್ಷರ ಅಸಮಾಧಾನಕ್ಕೆ ಕಾರಣವಾಗಿ, ನ್ಯಾಯಾಲಯದ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯವು ನಿಯಮಗಳನ್ನು ಪಾಲನೆ ಮಾಡಿ ಕ್ಷೇತ್ರ ವಿಂಗಡಣೆ ಮಾಡಲು ನಿರ್ದೇಶನ ನೀಡಿತ್ತು.
13 ಚುನಾಯಿತ 5 ಸರ್ಕಾರಿ ಪ್ರತಿನಿಧಿ
ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಮತ ಕ್ಷೇತ್ರಗಳನ್ನು ವಿಂಗಡಿಸಬೇಕಾಗಿತ್ತು. ಆದರಂತೆ ಕಲಂ 12(5)ಕ್ಕೆ ಅನುಮೋದನೆ ಪಡೆದು ಒಟ್ಟು 18 ನಿರ್ದೇಶಕರ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಆ ಪೈಕಿ 13 ಚುನಾಯಿತ ನಿರ್ದೇಶಕರು ಸರ್ಕಾರದ ನಾಮಿನಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಪ್ರತಿನಿಧಿ ಪಶು ಸಂಗೋಪನೆ ಇಲಾಖೆ ಸಹಕಾರ ಸಂಘಗಳ ನಿಬಂಧಕ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿದ ತಲಾ ಒಬ್ಬ ನಿರ್ದೇಶಕರ ಸ್ಥಾನ ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.