ADVERTISEMENT

ಕಾಡಾನೆ ದಾಳಿ ಜಮೀನುಗಳಲ್ಲಿ ಪರಿಶೀಲನೆ: ಆನೆ ಕಾರಿಡಾರ್‌ ಪ್ರಸ್ತಾವ ಸಲ್ಲಿಸುತ್ತೇವೆ

ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:45 IST
Last Updated 18 ಫೆಬ್ರುವರಿ 2020, 19:45 IST
ಬಂಗಾರಪೇಟೆ ತಾಲ್ಲೂಕಿನ ಮೂತನೂರು ಗ್ರಾಮದಲ್ಲಿ ಆನೆ ದಾಳಿಯಿಂದ ಬೆಳೆ ನಷ್ಟವಾದ ರೈತರ ಜಮೀನುಗಳಿಗೆ ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಹಾಗೂ ಸದಸ್ಯರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಂಗಾರಪೇಟೆ ತಾಲ್ಲೂಕಿನ ಮೂತನೂರು ಗ್ರಾಮದಲ್ಲಿ ಆನೆ ದಾಳಿಯಿಂದ ಬೆಳೆ ನಷ್ಟವಾದ ರೈತರ ಜಮೀನುಗಳಿಗೆ ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಹಾಗೂ ಸದಸ್ಯರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಕೋಲಾರ: ‘ಜಿಲ್ಲೆಯ ಮಾಸ್ತಿ ಮತ್ತು ಬೂದಿಕೋಟೆ ಭಾಗದಲ್ಲಿ ಹಲವು ವರ್ಷಗಳಿಂದ ಕಾಡಾನೆ ಸಮಸ್ಯೆಯಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆನೆ ಕಾರಿಡಾರ್ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ತಿಳಿಸಿದರು.

ಅಧ್ಯಕ್ಷರು ಜಿ.ಪಂ ಸದಸ್ಯರೊಂದಿಗೆ ಜಿಲ್ಲೆಯ ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕಿನ ವಿವಿಧೆಡೆ ಆನೆ ದಾಳಿಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿ ಮಾತನಾಡಿದರು.

‘ತಾಲ್ಲೂಕಿನ ಹಲವು ಗ್ರಾಮಗಳು ತಮಿಳುನಾಡಿನ ಗಡಿಯಲ್ಲಿದ್ದು, ಆ ಭಾಗದಲ್ಲಿ ಅರಣ್ಯ ಪ್ರದೇಶವಿದೆ. ಪ್ರತಿನಿತ್ಯ ಕಾಡಾನೆಗಳ ಹಿಂಡು ಮೇವು, ನೀರಿಗಾಗಿ ಗ್ರಾಮಗಳತ್ತ ಬಂದು ಬೆಳೆ ಹಾನಿ ಮಾಡುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಎಂದು ರೈತರು ಎದುರು ಅಳಲು ತೋಡಿಕೊಂಡರು.

ADVERTISEMENT

‘ಆನೆಗಳ ದಾಳಿಯಿಂದ ರಾಗಿ, ಹಿಪ್ಪುನೇರಳೆ, ಕೋಸು, ಬೀನ್ಸ್, ಟೊಮೆಟೊ, ಆಲೂಗಡ್ಡೆ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ನೀಡಲು ವಿಫಲರಾಗಿದ್ದಾರೆ. ಆನೆ ಹಾವಳಿ ತಪ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೆ ಬಂಗಾರಪೇಟೆ ವಲಯ ಅರಣ್ಯಾಧಿಕಾರಿಯು ಹೊಗೆ ಸೊಪ್ಪು ಬೆಳೆಯಿರಿ ಆನೆ ಬರುವುದಿಲ್ಲ ಎಂದು ಉಡಾಫೆಯಾಗಿ ಮಾತನಾಡುತ್ತಾರೆ’ ಎಂದು ಮೂತನೂರು ಗ್ರಾಮದ ರೈತ ಮುನಿಯಪ್ಪ ದೂರಿದರು.

‘ಆನೆಗಳು ಬಂದ ದಿನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೆ ಸಮಸ್ಯೆಗೆ ಸ್ಪಂದಿಸುವುದಿಲ್ಲ. ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಅಧ್ಯಕ್ಷ ವೆಂಕಟೇಶ್‌, ‘ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬದಲಾಗಬೇಕು. ಅಧಿಕಾರಿಗಳೇ ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಬೇರೆ ಯಾರು ಸಮಸ್ಯೆ ಪರಿಹರಿಸುತ್ತಾರೆ’ ಎಂದು ತರಾಟೆಗೆ ತೆಗೆದುಕೊಂಡರು.

ಸಮೀಕ್ಷೆ ನಡೆಸಿ: ‘ಅರಣ್ಯ ಇರುವ ಕಡೆ ಆನೆ ದಾಳಿ ಸಾಮಾನ್ಯ. ಆನೆಗಳ ಹಿಂಡು ಗ್ರಾಮಗಳಿಗೆ ಪ್ರವೇಶಿಸದಂತೆ ಅಲ್ಲಲ್ಲಿ ಮೇವು, ನೀರಿನ ವ್ಯವಸ್ಥೆ ಮಾಡಬೇಕು. ಇಲಾಖೆ ಪ್ರಗತಿಯಲ್ಲಿ ಕೋಟಿಗಟ್ಟಲೇ ಹಣ ವೆಚ್ಚ ಮಾಡಿರುವುದಾಗಿ ಲೆಕ್ಕ ತೋರಿಸುತ್ತೀರಿ. ಸಭೆಯಲ್ಲಿ ತಪ್ಪು ಮಾಹಿತಿ ನೀಡಲು ಹೇಗೆ ಮನಸ್ಸು ಬರುತ್ತದೆ? ಶೀಘ್ರವೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಒಂದು ವಾರದಲ್ಲಿ ರೈತರಿಗೆ ಪರಿಹಾರ ಕಲ್ಪಿಸಬೇಕು’ ಎಂದು ತಾಕೀತು ಮಾಡಿದರು.

ಸಭೆಗೆ ಬರುವುದಿಲ್ಲ: ‘ನೀವು ಯಾವುದೇ ಸಭೆಗೆ ಬರುವುದಿಲ್ಲ. ಇನ್ನು ನಿಮಗೆ ರೈತರ ಸಮಸ್ಯೆಗಳು ಹೇಗೆ ಗೊತ್ತಾಗುತ್ತವೆ. ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಎಷ್ಟಿದೆ ಎಂಬುದು ಗೊತ್ತಿದೆಯೇ?’ ಎಂದು ಅಧ್ಯಕ್ಷರು ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ವಿರುದ್ಧ ಹರಿಹಾಯ್ದರು.

ಯರಗೋಳ್ ಯೋಜನೆ: ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷರು, ‘ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಯರಗೋಳ್ ಯೋಜನೆ ಜಾರಿಗೊಳಿಸಲಾಗಿದ್ದು, ಡ್ಯಾಂ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪಂಪ್ ಹೌಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಯೋಜನೆ ಉದ್ಘಾಟನೆಯಾಗಲಿದೆ’ ಎಂದು ಹೇಳಿದರು.

ಜಿ.ಪಂ ಸದಸ್ಯರು ತಂಡವು ಮಾಲೂರು ತಾಲ್ಲೂಕಿನ ದಿನ್ನಹಳ್ಳಿ, ಬಂಗಾರಪೇಟೆ ತಾಲ್ಲೂಕಿನ ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ, ಮೂತನೂರು, ಯರಗೋಳ್ ಗ್ರಾಮಗಳ ರೈತರ ತೋಟಗಳಿಗೆ ಹಾಗೂ ಡ್ಯಾಂ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸದಸ್ಯರಾದ ಎಚ್.ವಿ.ಶ್ರೀನಿವಾಸ್, ರೂಪಶ್ರೀ, ಉಷಾ, ವೆಂಕಟಲಕ್ಷ್ಮಮ್ಮ. ಅರುಣ್‌ಪ್ರಸಾದ್, ಮಹೇಶ್, ಶಾಹಿದ್, ಪಾರ್ವತಮ್ಮ, ಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.