ADVERTISEMENT

ಗುಣಮಟ್ಟದ ಹಾಲು ಶೇಖರಣೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 16:15 IST
Last Updated 19 ಮಾರ್ಚ್ 2021, 16:15 IST
ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕೋಲಾರ ತಾಲ್ಲೂಕಿನ ಎನ್.ರಾಮಸಂದ್ರ ಗ್ರಾಮದಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದರು.
ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕೋಲಾರ ತಾಲ್ಲೂಕಿನ ಎನ್.ರಾಮಸಂದ್ರ ಗ್ರಾಮದಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದರು.   

ಕೋಲಾರ: ‘ತಾಲ್ಲೂಕಿನಲ್ಲಿ ಹೆಚ್ಚು ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಿ ಶುದ್ಧ ಮತ್ತು ಗುಣಮಟ್ಟದ ಹಾಲು ಶೇಖರಣೆಗೆ ಒತ್ತು ನೀಡಲಾಗುತ್ತದೆ’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಹೇಳಿದರು.

ತಾಲ್ಲೂಕಿನ ಎನ್.ರಾಮಸಂದ್ರ ಗ್ರಾಮದಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ಅಮೃತ ಮಹಲ್‌’ ಉದ್ಘಾಟಿಸಿ ಮಾತನಾಡಿ, ‘ಕೋಲಾರ ತಾಲ್ಲೂಕು ಅತಿ ಹೆಚ್ಚು ಹಾಲಿನ ಸಂಘಗಳನ್ನು ಹೊಂದಿದೆ. ತಾಲ್ಲೂಕಿನಾದ್ಯಾಂತ ಬಿಎಂಸಿ ಕೇಂದ್ರಗಳನ್ನು ಅಳವಡಿಸಿ ಕ್ಯಾನ್ ಮುಕ್ತ ಹಾಲು ಶೇಖರಣೆ ವ್ಯವಸ್ಥೆ ಜಾರಿಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

‘ರಾಮಸಂದ್ರ ಗ್ರಾಮದ ಹಾಲಿನ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕೋಚಿಮುಲ್‌ನಿಂದ ₹ 3 ಲಕ್ಷ ಅನುದಾನ ನೀಡಲಾಗಿದೆ. ಹೈನೋದ್ಯಮದಲ್ಲಿ ತೊಡಗಿಸಿಕೊಂಡಿರುವ ಸಂಘದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಜೋಳ, ಪಶು ವೈದ್ಯಕೀಯ ಸೌಲಭ್ಯ, ರಾಸುಗಳ ಗುಂಪು ವಿಮೆ, ಕೋಮುಲ್ ವಿಮಾ ಯೋಜನೆ ನೀಡಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಆದ ಕಾರಣ ರಾಸುಗಳ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ರೈತರು ಒಕ್ಕೂಟದಿಂದ ಸಿಗುವ ತಾಂತ್ರಿಕ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಹೈನೋದ್ಯಮ ಕ್ಷೇತ್ರದಿಂದ ದೂರ ಸರಿಯಬಾರದು. ಗ್ರಾಮೀಣ ಭಾಗದಲ್ಲಿ ಹಾಲು ಸಂಘಗಳನ್ನು ಅಭಿವೃದ್ಧಿಪಡಿಸಬೇಕು’ ಎಂದರು.

ಜೈವಿಕ ಗುಣಮಟ್ಟ: ‘ಬಿಎಂಸಿ ಘಟಕ ಸ್ಥಾಪನೆಯಿಂದ ಹಾಲಿನ ಗುಣಮಟ್ಟದ ಜತೆಗೆ ಜೈವಿಕ ಗುಣಮಟ್ಟ ಕಾಪಾಡಲು ಸಹಾಯವಾಗುತ್ತದೆ. ಒಕ್ಕೂಟದ ತುರ್ತು ಕರೆ, ಗುಂಪು ವಿಮೆ ಯೋಜನೆ, ವಿಮಾ ಯೋಜನೆ, ಲಸಿಕೆ ಕಾರ್ಯಕ್ರಮ, ಪಶು ಆಹಾರ ಖನಿಜ ಮಿಶ್ರಣ ಪಡೆಯಬೇಕು’ ಎಂದು ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಸಲಹೆ ನೀಡಿದರು.

ಎನ್.ರಾಮಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಂಸ್ಥಾಪಕ ಜ್ಞಾನಮೂರ್ತಿ, ಅಧ್ಯಕ್ಷ ವೇಣುಗೋಪಾಲ್, ಕಾರ್ಯಕಾರಿ ಮಂಡಳಿ ಸದಸ್ಯರು, ಗ್ರಾ.ಪಂ ಸದಸ್ಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.