
ಕೋಲಾರ: ಜಿಲ್ಲೆಯ ಎಲ್ಲಾ ಕೆರೆಗಳನ್ನು ಒತ್ತುವರಿ ಮುಕ್ತಗೊಳಿಸಿ ಆಯಾ ಇಲಾಖೆಗಳ ಸುಪರ್ದಿಗೆ ಒಪ್ಪಿಸಲು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ್ದೇನೆ. ಫೆನ್ಸಿಂಗ್ ಅಥವಾ ಟ್ರೆಂಚ್ ಹಾಕಿಕೊಂಡು ಮತ್ತೆಂದೂ ಕೆರೆಗಳ ಒತ್ತುವರಿ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.
ಜಿಲ್ಲಾಧಿಕಾರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆರೆಗಳು ಜನರ ಜೀವನಾಡಿ. ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಬದುಕು ರೂಪಿಸಲು ಕಾರಣವಾಗಿವೆ. ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿರುವುದು ಸೇರಿದಂತೆ ಜಿಲ್ಲೆಯಲ್ಲಿ 3,232 ಕೆರೆಗಳಿದ್ದು, ಕೇವಲ 300 ಕೆರೆಗಳ ಸರ್ವೆ ಬಾಕಿ ಇದೆ. 1,389 ಕೆರೆಗಳು ಒತ್ತುವರಿ ತೆರವುಗೊಳಿಸಲಾಗಿದೆ. ಅದರಲ್ಲಿ 51 ಕೆರೆ ಒತ್ತುವರಿ ಮುಕ್ತ ಆಗಿಲ್ಲ. ಕೆಲವರು ಬೆಳೆ ಬೆಳೆದಿದ್ದರೆ, ಇನ್ನು ಕೆಲವೆಡೆ ನೀರು ನಿಂತಿದೆ. ಸದ್ಯದಲ್ಲೇ ಎಲ್ಲಾ ಕೆರೆಗಳ ಒತ್ತುವರಿ ಮುಕ್ತ ಮಾಡಲಾಗುವುದು ಎಂದರು.
ನಗರದ ಸ್ವಚ್ಛತೆ ಕೇವಲ ನಗರಸಭೆಯ ಕೆಲಸವಲ್ಲ; ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮನೆಯನ್ನು ಹೇಗೆ ಶುದ್ಧವಾಗಿ ಇಟ್ಟುಕೊಳ್ಳಬೇಕೋ ಅದೇ ರೀತಿ ನಗರವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಕಸಮುಕ್ತ ಮಾಡಲು ಕಷ್ಟ. ಆದರೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಗರವು ಲಿವೆಬಲ್, ಲವೆಬಲ್ ಆಗಿರಬೇಕು. ಸ್ವಚ್ಛತಾ ಕಾರ್ಯಪಡೆ ರಚಿಸಿ ಕೆಲಸ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಮೂಲದಲ್ಲಿಯೇ ಕ್ರಮ ವಹಿಸಲಾಗುತ್ತಿದೆ ಎಂದು ವಿವರಿಸಿದರು.
ಅಮೃತ ಯೋಜನೆಯಡಿ ನಗರದ ಉದ್ಯಾನ ಹಾಗೂ ದಾನಿಗಳ ಮೂಲಕ ಸರ್ಕಲ್ ಅಭಿವೃದ್ಧಿಪಡಿಸಲಾಗುತ್ತಿದೆ. ಕೋಲಾರಮ್ಮ ದೇವಸ್ಥಾನದ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ಜಾಗವನ್ನು ಖರೀದಿಸಿ ದೇಗುಲಕ್ಕೆ ಕೊಡಿಸಲಾಗಿದೆ. ಭಕ್ತಾದಿಗಳಿಗೆ ಲಡ್ಡು ಕೊಡಲಾಗುತ್ತಿದ್ದು, ಅದರಿಂದ ದೇವಾಲಯಗಳಿಗೆ ಆದಾಯವೂ ಬರುತ್ತಿದೆ. ಅಂತರಗಂಗೆ ದೇಗುಲಕ್ಕೆ ಪಲ್ಲವಿ ಸರ್ಕಲ್‌ನಲ್ಲಿ ಪ್ರವೇಶದ್ವಾರ ನಿರ್ಮಿಸಲಾಗುತ್ತಿದೆ. ಬಂಗಾರು ತಿರುಪತಿಗೆ ಲಿಫ್ಟ್ ಮಾಡಿಸಲಾಗುತ್ತಿದೆ. ಜಿಲ್ಲೆಯ 1,392 ದೇಗುಲಗಳಲ್ಲಿ ಮುಕ್ತ ಪ್ರವೇಶ ಫಲಕ ಅಳವಡಿಸಲಾಗಿದೆ. ನರೇಗಾದಿಂದ 1ಸಾವಿರ ಶಾಲೆಗಳ ಆವರಣದಲ್ಲಿ ಧನ್ವಂತರಿ ಬನ ನಿರ್ಮಿಸಲಾಗುತ್ತಿದೆ. ಅಂಬೇಡ್ಕರ್ ಡಿಜಿಟಲ್ ಲೈಬ್ರರಿ ಸ್ಥಾಪಿಸಲಾಗುತ್ತಿದೆ ಎಂದು ಅಭಿವೃದ್ಧಿ ಕೆಲಸಗಳತ್ತ ಬೆಳಕು ಚೆಲ್ಲಿದರು.
ನಿರ್ಮಿತಿ ಕೇಂದ್ರದಿಂದ 1 ಎಕರೆ ಜಾಗದಲ್ಲಿ ಸಿಮೆಂಟ್ ಬ್ಲಾಕ್ ಮಾಡಲಾಗುತ್ತಿದೆ. ನಿರ್ಮಾಣ ಕ್ಷೇತ್ರದ ಕಾರ್ಮಿಕರಿಗೆ ಕೌಶಲ ಕಲಿಸಿಕೊಡಲು ಕೆಜಿಎಫ್‌ನಲ್ಲಿ ಐದು ಎಕರೆ ಜಾಗದಲ್ಲಿ ತರಬೇತಿ ಕೇಂದ್ರ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಎಪಿಎಂಸಿ ಜಾಗ ಸಂಬಂಧ 60 ಎಕರೆ ಜಮೀನು ಇದ್ದು, ಸರ್ಕಾರಕ್ಕೆ ಪ್ರಸ್ತಾವ ಕಳಿಸಿಕೊಡಲಾಗಿದೆ. ಇನ್ನು 20 ಎಕರೆ ಜಾಗವಿದ್ದು, ಅದನ್ನು ಪಡೆಯಲು ಪ್ರಯತ್ನಿಸಲಾಗುವುದು. ಈಗಿರುವ ಎಪಿಎಂಸಿ ಜಾಗವನ್ನು ಹೂವು, ಹಣ್ಣು ಮಾರಾಟ ಕೇಂದ್ರ ಮಾಡಲಾಗುವುದು ಎಂದು ಹೇಳಿದರು.
ಕೋಲಾರ ನಗರದೊಳಗಿನ ರಸ್ತೆ ವಿಸ್ತರಣೆಯನ್ನು ₹ 10 ಕೋಟಿ ವೆಚ್ಚದಲ್ಲಿ ಮಾಡಲಾಗುವುದು. ವೆಂಡಿಂಗ್ ಕಮಿಟಿ ಮಾಡಿದ್ದು, ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ನಾಲ್ಕು ಚಕ್ರ ಹಾಗೂ ದ್ವಿ ಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ನಗರದೊಳಗಿನ ರಸ್ತೆ ಗುಂಡಿ ಮುಚ್ಚಲಾಗುವುದು. ಇದಕ್ಕೆ ಟೆಂಡರ್ ಕರೆಯಲಾಗುವುದು ಎಂದರು.
‘ನಾನು ಮಾಡುವ ಕೆಲಸಕ್ಕೆ ಮೊದಲು ನನ್ನ ಆತ್ಮಸಾಕ್ಷಿಗೆ ಉತ್ತರಿಸಬೇಕಿದೆ. ಮಾಡಿದ ಕೆಲಸಗಳ ಬಗ್ಗೆ ಇತಿಹಾಸವೇ ಮಾತನಾಡಲಿ ಎಂಬುದು ನನ್ನ ಆಶಯ’ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್, ಖಜಾಂಚಿ ರಾಜೇಂದ್ರಸಿಂಹ, ಉಪಾಧ್ಯಕ್ಷ ರವಿಕುಮಾರ್ ಎಸ್., ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್, ಹಿರಿಯ ಪತ್ರಕರ್ತರಾದ ಪಾ.ಶ್ರೀ.ಅನಂತರಾಮು, ಬಿ.ಸುರೇಶ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಕೆ.ಎನ್.ಕವನಾ, ಮಂಜೇಶ್ ಹಾಗೂ ಪತ್ರಕರ್ತರು ಇದ್ದರು.
‘ಮಿಸ್ಸಿಂಗ್ ಫೈಲ್ಸ್’ ಬಗೆಹರಿಸಲು ಪ್ರಯತ್ನ
ಜಿಲ್ಲೆಯಲ್ಲಿ 43 ಸಾವಿರ ರೈತರಿಗೆ ಭೂಮಿ ಮಂಜೂರಾತಿಯಾಗಿದೆ. ಸುಮಾರು 27 ಸಾವಿರ ಮಂಜೂರಾತಿದಾರರಿಗೆ ಸಂಬಂಧಿಸಿದ ದಾಖಲೆಗಳು ಸಿಗುತ್ತಿಲ್ಲ (ಮಿಸ್ಸಿಂಗ್ ಫೈಲ್). ದುರಸ್ತಿ ಮಾಡಲು ಮೂಲ ಕಡತ ಇಲ್ಲವಾಗಿದೆ. ಸರ್ಕಾರ ಸರಳೀಕರಣ ಮಾಡಿದ್ದು ಮಿಸ್ಸಿಂಗ್ ಫೈಲ್ ಸಮಿತಿಯಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಕಂದಾಯ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆ ತರಲಾಗಿದೆ. ‘ಪಿ’ ನಂಬರ್ ದುರಸ್ತಿಗೆ ತ್ವರಿತಗತಿಯಲ್ಲಿ ಕ್ರಮ ವಹಿಸಲಾಗಿದೆ. ಈವರೆಗೆ ಸುಮಾರು 8923 ದರ್ಖಾಸ್ತು ಜಮೀನುಗಳ ಪ್ರಕರಣಗಳ 'ಪಿ' ಸಂಖ್ಯೆ ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲಾ ಪ್ರಕ್ರಿಯೆ ಮುಗಿದು ರೈತರಿಗೆ 1727 ಆರ್‌ಟಿಸಿಗಳನ್ನು ಈಗಾಗಲೇ ವಿತರಿಸಲಾಗಿದೆ. ಜನವರಿಯಲ್ಲಿ 3 ಸಾವಿರ ಆರ್‌ಟಿಸಿ ವಿತರಿಸಲಾಗುವುದು ಎಂದರು. ವಾರಸುದಾರರ ಹೆಸರಿಗೆ ಖಾತೆ ಬದಲಾಯಿಸುವ 'ಇ-ಪೌತಿ' ಅಭಿಯಾನದಡಿ 37 ಸಾವಿರ ಅರ್ಹ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 2.87 ಲಕ್ಷ ಪೌತಿ ಖಾತೆ ಪ್ರಕರಣ ಇವೆ. ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದ ಸಮಿತಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕಂದಾಯ ದಾಖಲೆ ಡಿಜಿಟಲೀಕರಣ
ಭೂಸುರಕ್ಷಾ ಯೋಜನೆಯಡಿ ಎಲ್ಲಾ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ನಕಲಿ ದಾಖಲೆ ಸೃಷ್ಟಿ ತಿದ್ದುಪಡಿ ತಪ್ಪಿಸಲು ಕ್ರಮ ವಹಿಸಲಾಗಿದೆ. ಈಗಾಗಲೇ ಕೋಲಾರ ತಾಲ್ಲೂಕು ಮುಗಿದಿದೆ. ಮಾಲೂರು ಕೆಜಿಎಫ್ ದಾಖಲೆಯನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ದಾಖಲೆಗಳನ್ನು ಕುಳಿತಲ್ಲಿಯೇ ಆನ್‌ಲೈನ್‌ನಲ್ಲಿ ಪಡೆದುಕೊಳ್ಳಬಹುದು. ಹಾಗೆಯೇ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕಡತಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ಎಂ.ಆರ್.ರವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.