ADVERTISEMENT

ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 12:08 IST
Last Updated 2 ಆಗಸ್ಟ್ 2019, 12:08 IST

ಕೋಲಾರ: ‘ಅಂಬೇಡ್ಕರ್‌ ಸಂಸ್ಕೃತ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಮಾಡಬೇಕೆಂದು ಬಯಸಿದ್ದರು. ಆ ಮೂಲಕ ರಾಷ್ಟ್ರವನ್ನು ಬೆಸೆಯುವ ಭಾಷೆಯಾಗಿ ಸಂಸ್ಕೃತ ಕಾಣಬಯಸಿದ್ದರು’ ಎಂದು ದೇವರಾಜ ಅರಸು ವೈದ್ಯಕೀಯ ವಿದ್ಯಾಲಯದ ನಿವೃತ್ತ ಪ್ರೊಫೆಸರ್ ಡಾ.ಎಸ್.ಆರ್.ಪ್ರಸಾದ್ ಹೇಳಿದರು.

ನಗರದ ಹಾರೋಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶುಕ್ರವಾರ ನಡೆದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಸಂಸ್ಕೃತ ಭಾರತ ವತಿಯಿಂದ ಶಾಲಾ ಮಕ್ಕಳಿಗೆ ಸಂಸ್ಕೃತ ಸಂಭಾಷಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು’ ಎಂದರು.

‘ಶಿಬಿರದಲ್ಲಿ ಪಾಲ್ಗೊಂಡ ಶಾಲೆಯ 15 ವಿದ್ಯಾರ್ಥಿಗಳು ಸರಳವಾಗಿ ಸಂಸ್ಕೃತ ಭಾಷೆಯಲ್ಲಿ ಮಾತನಾಡುವುದನ್ನು ಕಲಿತರು. ಮಕ್ಕಳ ಕಲಿತ ಗೀತೆ, ನಾಟಕ, ಚಟುವಟಿಕೆ ಪ್ರದರ್ಶಿಸಲಾಯಿತು’ ಎಂದು ತಿಳಿಸಿದರು.

ADVERTISEMENT

‘ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳಲು ಶಾಲೆಗಳಿಗಿಂತ ಪರಿಸರದ ಒಡನಾಟದಲ್ಲಿ ಕಲಿಕೆ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಡಬೇಕು. ಶಾಲೆಗಳಲ್ಲಿ ಆಟ ಪಾಠ ಕಲಿತರೆ ಪರಿಸರದಲ್ಲಿ ಪ್ರಾಯೋಗಿಕವಾಗಿ ಸಾಕಷ್ಟು ವಿಚಾರ ಕಲಿಯುವ ಅವಕಾಶವಿದೆ. ಇದಕ್ಕೆ ಒತ್ತು ನೀಡಬೇಕು. ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳಿಸಬೇಕು’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಹೇಳಿದರು.

ವಿದ್ಯಾರ್ಥಿಗಳಾದ ನೀಹಾ, ಸುಹೇಲ್, ಶ್ರಾವಣಿ, ಮಾನಸ, ಮಧುಲತಾ, ಮೌನೀಶ್, ನಿತಿನ್, ಅಫ್ರಿನ್ ತಾಜ್, ಮತ್ತು ಎಂ.ಚರಣ್ ಸಂಸ್ಕೃತ ಗೀತಗಾಯನ, ಪ್ರವಾಸಕಥನ ಪಠಣ, ಕಥಾ ನಾಟಕ ನಡೆಸಿಕೊಟ್ಟರು. ಲೇಖಕ ರಾಘವೇಂದ್ರ, ಶಾಲೆಯ ಶಿಕ್ಷಕಿಯರಾದ ಶಾರದಾ, ವೀಣಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.