ADVERTISEMENT

ವೇತನ ಆಯೋಗ ಜಾರಿ ಶತಸಿದ್ಧ- ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 16:43 IST
Last Updated 7 ಜನವರಿ 2022, 16:43 IST
ಕೋಲಾರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರ ಸಭೆಯಲ್ಲಿ ರಾಜ್ಯ ಮಟ್ಟದ ಸಾಧಕ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು
ಕೋಲಾರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರ ಸಭೆಯಲ್ಲಿ ರಾಜ್ಯ ಮಟ್ಟದ ಸಾಧಕ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು   

ಕೋಲಾರ: ‘ಕೇಂದ್ರ ಸಮಾನ ವೇತನ, ವೇತನ ಆಯೋಗ ಶೀಘ್ರ ರಚನೆ ಈ ವರ್ಷ ಶತಸಿದ್ಧ. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಜಾರಿಯು ಸಂಘದ ಮುಖ್ಯ ಗುರಿಯಾಗಿದ್ದು, ರಾಜ್ಯದ 6 ಲಕ್ಷ ನೌಕರರ ನಂಬಿಕೆಗೆ ದ್ರೋಹ ಬಗೆಯದೆ ಬದ್ಧತೆಯಿಂದ ಕೆಲಸ ಮಾಡುತ್ತೇವೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಘೋಷಿಸಿದರು.

ಇಲ್ಲಿ ಶುಕ್ರವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರ ಸಭೆ, ರಾಜ್ಯ ಮಟ್ಟದ ಸಾಧಕ ಕ್ರೀಡಾಪಟುಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಕೇಂದ್ರ ಸಮಾನ ವೇತನ ಹಾಗೂ ವೇತನ ಆಯೋಗ ರಚನೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಶಾಸಕರು, ಸಂಸದರು ಶಿಫಾರಸು ಪತ್ರ ನೀಡಿದ್ದಾರೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ 2.70 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಕೆಲಸ ಮಾಡಿದ್ದೇವೆ. ಈ ಉಳಿತಾಯದ ಹಣವನ್ನು ವೇತನ ಆಯೋಗದಲ್ಲಿ ಭರಿಸಿ ಎಂದು ಆಗ್ರಹಿಸಿದ್ದೇವೆ. ನೌಕರರ ಸಂಘದ ಪ್ರತಿ ಸದಸ್ಯರಿಗೂ ಲೆಕ್ಕ ನೀಡಬೇಕು ಮತ್ತು ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು. ಸಂಘಟನೆಯಲ್ಲಿ ಶಿಸ್ತು ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕುಗಳಿಗೂ ಭೇಟಿ ಕೊಟ್ಟು ಲೆಕ್ಕಪರಿಶೋಧನೆ ನೋಡುತ್ತೇನೆ’ ಎಂದರು.

ADVERTISEMENT

‘ಸರ್ಕಾರ ನೀಡುವ ಸಂಬಳಕ್ಕೆ ಆತ್ಮವಂಚನೆಯಿಲ್ಲದೆ ಕೆಲಸ ಮಾಡೋಣ. ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡೋಣ. ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ, ಶತಮಾನೋತ್ಸವ ಭವನ ಮೇಲ್ಪಂಕ್ತಿಯಲ್ಲಿದೆ. ಶಿಕ್ಷಕರ ಸಮಸ್ಯೆಗಳಿಗೂ ಪರಿಹಾರ ಕಾಣುತ್ತಿದ್ದೇವೆ’ ಎಂದು ವಿವರಿಸಿದರು.

‘ರಾಜ್ಯದಲ್ಲಿ ಪ್ರಸಕ್ತ ತಿಂಗಳಿಂದಲೇ ನಗದುರಹಿತ ಆರೋಗ್ಯ ಸೇವೆ ಜಾರಿಯಾಗುತ್ತದೆ. ನೌಕರರ ಕುಟುಂಬಗಳ ಸುಮಾರು 28 ಲಕ್ಷ ಮಂದಿಗೆ ಉಚಿತ ಆರೋಗ್ಯ ಸೇವೆ ಲಭಿಸಲಿದೆ. ಇಂತಹ ಸಾಧನೆ ಹಿಂದಿನ ಸಂಘಟನೆಯಿಂದ ಏಕೆ ಆಗಲಿಲ್ಲ?’ ಎಂದು ಪ್ರಶ್ನಿಸಿದರು.

ವಿಕಾಸಶೀಲ ಹೆಜ್ಜೆ: ‘ಹೊಸ ಮನ್ವಂತರದತ್ತ ವಿಕಾಸಶೀಲ ಹೆಜ್ಜೆ ಹಾಕುತ್ತಿದ್ದೇವೆ. ಹಿಂದೆ ಬೇಡಿಕೆಗಳ ಈಡೇರಿಕೆಗೆ ಸಂಘರ್ಷವಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಕೇವಲ ಎರಡೂವರೆ ವರ್ಷದಲ್ಲಿ 46 ಆದೇಶ ಮಾಡಿಸಿದ್ದೇನೆ. ಜಿಲ್ಲಾ ಸರ್ಕಾರಿ ನೌಕರರ ಭವನ ನವೀಕರಣಕ್ಕೆ ಅನುದಾನ ನೀಡುತ್ತೇವೆ. ಈ ಹಿಂದೆ ರಾಜ್ಯ ಸಂಘದ ಉಳಿತಾಯ ಖಾತೆ ಖಾಲಿಯಾಗಿತ್ತು. ನಾನು ಅಧ್ಯಕ್ಷನಾದ ನಂತರ ₹ 16 ಕೋಟಿ ಇದೆ. ನೌಕರರ ಹಣದಲ್ಲಿ ವಿಮಾನ ಹತ್ತಲ್ಲ’ ಎಂದರು.

‘ಜಿಲ್ಲೆಯಲ್ಲಿ ನೌಕರರ ಭವನ ನವೀಕರಣಕ್ಕೆ ಶೀಘ್ರವೇ ₹ 1 ಕೋಟಿ ಬಿಡುಗಡೆ ಮಾಡಬೇಕು. 3 ಅಂತಸ್ತಿನ ಸುಂದರ ಕಟ್ಟಡ ನಿರ್ಮಿಸುವ ಉದ್ದೇಶವಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ಕೆ.ವಿಜಯ್, ಕಾರ್ಯದರ್ಶಿ ಶಿವಕುಮಾರ್, ಗೌರವಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಮಾಲತೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.