ADVERTISEMENT

ಬೆಳೆ ಸಾಲ ಬೇಡಿಕೆ ಈಡೇರಿಕೆಗೆ ಶಕ್ತಿ ತುಂಬಿ- ಬ್ಯಾಲಹಳ್ಳಿ ಎಂ.ಗೋವಿಂದಗೌಡ

ಹೆಚ್ಚಿನ ಠೇವಣಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಮನವಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 13:41 IST
Last Updated 22 ಜನವರಿ 2022, 13:41 IST
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಶನಿವಾರ ಬ್ಯಾಂಕ್‌ ಠೇವಣಿ ಸಂಗ್ರಹ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಶನಿವಾರ ಬ್ಯಾಂಕ್‌ ಠೇವಣಿ ಸಂಗ್ರಹ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಕೋಲಾರ: ‘ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡುವ ಮೂಲಕ ಕಷ್ಟ ಕಾಲದಲ್ಲಿ ಅವಿಭಜಿತ ಜಿಲ್ಲೆಯ ರೈತರ ₹ 1,500 ಕೋಟಿ ಬೆಳೆ ಸಾಲದ ಬೇಡಿಕೆ ಈಡೇರಿಸುವ ಶಕ್ತಿ ತುಂಬಿ’ ಎಂದು ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸಾರ್ವಜನಿಕರಿಗೆ ಮನವಿ ಮಾಡಿದರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಠೇವಣಿ ಸಂಗ್ರಹದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಎರಡೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ, ಕೆರೆಗಳು ತುಂಬಿದ್ದು, ರೈತರು ಬೆಳೆ ಇಡುವ ತವಕದಲ್ಲಿದ್ದಾರೆ.ರೈತರಿಗೆ ಕಷ್ಟ ಕಾಲದಲ್ಲಿ ನೆರವಾಗುವ ಅಗತ್ಯವಿದೆ. ಕೆರೆಗಳ ಭರ್ತಿಯಿಂದ ಅಂತರ್ಜಲ ವೃದ್ಧಿಯಾಗಿ ಕೊಳವೆ ಮರುಪೂರಣಗೊಂಡಿವೆ. ಇಂತಹ ಸಂದರ್ಭದಲ್ಲಿ ರೈತರು ಬೆಳೆಯಿಡಲು ಖಾಸಗಿ ಲೇವಾದೇವಿದಾರರ ಶೋಷಣೆಗೆ ತುತ್ತಾಗುವ ಸಾಧ್ಯತೆ ಹೆಚ್ಚು’ ಎಂದು ಆತಂಕ ವ್ಯಕ್ತಪಡಿಸಿದರು.

‘ನಾವು ಉಳಿತಾಯ ಮಾಡುವ ಹಣಕ್ಕೆ ಬಡ್ಡಿ ಬರುವುದರ ಜತೆಗೆ ಮತ್ತಷ್ಟು ರೈತರ ಬದುಕು ಹಸನಾಗಲು ಕಾರಣವಾಗುತ್ತದೆ. ಇತರೆ ಎಲ್ಲಾ ಬ್ಯಾಂಕ್‌ಗಳಿಗಿಂತ ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ. ಠೇವಣಿ ಹಣಕ್ಕೆ ಸುರಕ್ಷತೆಯ ಖಾತರಿ ನೀಡಲಾಗುತ್ತದೆ. ಸಮಾಜದ ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕಿನಲ್ಲೇ ಠೇವಣಿ ಇಡುವ ಮೂಲಕ ರೈತರಿಗೆ ನೆರವಾಗಬೇಕು’ ಎಂದು ಕೋರಿದರು.

ADVERTISEMENT

‘ಸರ್ಕಾರದಿಂದ ಡಿಸಿಸಿ ಬ್ಯಾಂಕ್‌ಗೆ ಹಣ ಬರುತ್ತದೆ ಎಂಬ ಕಲ್ಪನೆ ತಲೆಯಲ್ಲಿದ್ದರೆ ತೆಗೆದು ಹಾಕಿ. ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಸಾಲ ವಿತರಿಸಲು ನಯಾ ಪೈಸೆ ಹಣ ಬರಲ್ಲ. ಠೇವಣಿ ಸಂಗ್ರಹದ ಆಧಾರದ ಮೇಲೆ ನಬಾರ್ಡ್, ಅಫೆಕ್ಸ್ ಬ್ಯಾಂಕ್ ಸಾಲ ನೀಡುತ್ತವೆ. ಕಾಲಮಿತಿಯೊಳಗೆ ಠೇವಣಿ ಸಂಗ್ರಹದ ಗುರಿ ಸಾಧನೆ ಮಾಡಿ. ಇದು ಜನರ ಬ್ಯಾಂಕ್ ಎಂಬ ಭಾವನೆ ಬಲಗೊಳಿಸಿ, ಜನರ ಮನವೊಲಿಸಿ ಠೇವಣಿ ಹೆಚ್ಚಿಸಿ’ ಎಂದು ಬ್ಯಾಂಕ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಾಕೀತು ಮಾಡಿದರು.

ಬ್ಯಾಂಕ್‌ನ ನಿರ್ದೇಶಕ ಸೋಮಣ್ಣ, ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಬೈರೇಗೌಡ, ಖಲೀಮ್‌ ಉಲ್ಲಾ, ನಾಗೇಶ್, ದೊಡ್ಡಮನಿ, ಯಲ್ಲಪ್ಪರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.