ADVERTISEMENT

ಖಾಸಗಿ ಕಾಲೇಜು ಮಾನ್ಯತೆ ಖಚಿತಪಡಿಸಿಕೊಳ್ಳಿ: ಉಪ ನಿರ್ದೇಶಕ ರಾಮಚಂದ್ರಪ್ಪ

ಪೋಷಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 17 ಮೇ 2022, 12:23 IST
Last Updated 17 ಮೇ 2022, 12:23 IST
ರಾಮಚಂದ್ರಪ್ಪ
ರಾಮಚಂದ್ರಪ್ಪ   

ಕೋಲಾರ: ಜಿಲ್ಲೆಯಾದ್ಯಂತ ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸುವ ಮುನ್ನ ಆ ಕಾಲೇಜುಗಳು ಮಾನ್ಯತೆ ಪಡೆದಿವೆಯೇ ಮತ್ತು ಅಸ್ತಿತ್ವದಲ್ಲಿ ಇವೆಯೇ ಎಂಬುದನ್ನು ಪೋಷಕರು ಖಚಿತಪಡಿಸಿಕೊಳ್ಳಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರಪ್ಪ ಮನವಿ ಮಾಡಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿಗೆ ಯಾವುದೇ ಗೊಂದಲ, ಸಮಸ್ಯೆ ಇರುವುದಿಲ್ಲ. ಆದರೆ, ಖಾಸಗಿ ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸುವಾಗ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ಸಹ ಈ ಬಗ್ಗೆ ಗಮನ ಹರಿಸಬೇಕು. ಪೋಷಕರು ಖಾಸಗಿ ಕಾಲೇಜುಗಳ ಶುಲ್ಕ ಕುರಿತು ಸಂಪೂರ್ಣ ತಿಳಿದುಕೊಂಡು ಖಚಿತಪಡಿಸಿಕೊಂಡು ಪಾವತಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಲು ಇಚ್ಛಿಸುವ ಭಾಷೆ, ಸಂಯೋಜನೆಯನ್ನು ಕಾಲೇಜಿನಲ್ಲಿ ಬೋಧಿಸಲು ಇಲಾಖೆಯ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ದಾಖಲಾತಿ ಸಂದರ್ಭದಲ್ಲಿ ಖಚಿತಪಡಿಸಿಕೊಳ್ಳಬೇಕು. ಖಾಸಗಿ ಕಾಲೇಜುಗಳ ಮಾನ್ಯತೆ ಸಂಬಂಧ ಅನುಮಾನಗಳಿದ್ದರೆ ಪೋಷಕರು ಕೂಡಲೇ ಇಲಾಖೆಯಿಂದ ಮಾಹಿತಿ ಪಡೆದು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿರಬೇಕು. ಬೇರೊಂದು ಶೈಕ್ಷಣಿಕ ಸಂಸ್ಥೆಯೊಂದಿಗೆ, ಅಕಾಡೆಮಿಕ್ಸ್, ಟುಟೋರಿಯಲ್‌ಗಳ ಜತೆ ಹೊಂದಾಣಿಕೆ ಮಾಡಿಕೊಂಡಿರಬಾರದು. ಪೋಷಕರು ಈ ಎಲ್ಲಾ ಅಂಶಗಳನ್ನು ಗಮನಿಸಿದ ನಂತರವೇ ಮಕ್ಕಳನ್ನು ದಾಖಲಿಸಬೇಕು ಎಂದು ಕೋರಿದ್ದಾರೆ.

ಮಕ್ಕಳನ್ನು ದಾಖಲಿಸಿದ ನಂತರ ಪರೀಕ್ಷೆ ಸಂದರ್ಭದಲ್ಲಿ ಕಾಲೇಜುಗಳ ಮಾನ್ಯತ ಸಂಬಂಧ ಗೊಂದಲ, ಶುಲ್ಕ ಪಾವತಿ ಅಂಶವನ್ನು ಇಲಾಖೆ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಿಲ್ಲ. ಜತೆಗೆ ಅದಕ್ಕೆ ಇಲಾಖೆ ಜವಾಬ್ದಾರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.