ADVERTISEMENT

ಭ್ರಷ್ಟಾಚಾರದ ಬೇರು ನಿರ್ಮೂಲನೆ ಆಗಲಿ: ಶಾಸಕ ಶ್ರೀನಿವಾಸಗೌಡ ಖಡಕ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 15:54 IST
Last Updated 30 ಜನವರಿ 2021, 15:54 IST
ಶಾಸಕ ಕೆ.ಶ್ರೀನಿವಾಸಗೌಡ ಕೋಲಾರದಲ್ಲಿ ಶನಿವಾರ ಇಫ್ಕೋ ಟೋಕಿಯೊ ಸಂಸ್ಥೆ ವತಿಯಿಂದ ಬಡ ರೋಗಿಗಳ ಚಿಕಿತ್ಸೆಗೆ ಹಣಕಾಸು ನೆರವಿನ ಚೆಕ್‌ ವಿತರಿಸಿದರು.
ಶಾಸಕ ಕೆ.ಶ್ರೀನಿವಾಸಗೌಡ ಕೋಲಾರದಲ್ಲಿ ಶನಿವಾರ ಇಫ್ಕೋ ಟೋಕಿಯೊ ಸಂಸ್ಥೆ ವತಿಯಿಂದ ಬಡ ರೋಗಿಗಳ ಚಿಕಿತ್ಸೆಗೆ ಹಣಕಾಸು ನೆರವಿನ ಚೆಕ್‌ ವಿತರಿಸಿದರು.   

ಕೋಲಾರ: ‘ಕ್ಷೇತ್ರದಲ್ಲಿ ಗಟ್ಟಿಗೊಂಡಿರುವ ಭ್ರಷ್ಟಾಚಾರದ ಬೇರುಗಳು ನಿರ್ಮೂಲನೆ ಆಗಬೇಕು. ಇಲ್ಲವಾದರೆ ನಾನು ವ್ಯಾಘ್ರನಾಗುತ್ತೇನೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಶನಿವಾರ ಇಫ್ಕೋ ಟೋಕಿಯೊ ಸಂಸ್ಥೆ ವತಿಯಿಂದ ಬಡ ರೋಗಿಗಳ ಚಿಕಿತ್ಸೆಗೆ ಹಣಕಾಸು ನೆರವಿನ ಚೆಕ್‌ ವಿತರಿಸಿ ಮಾತನಾಡಿ, ‘ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಶಾಸಕರಾಗಿದ್ದವರ ದುರಾಡಳಿತದಿಂದ ವ್ಯವಸ್ಥೆ ಹಾಳಾಗಿದೆ. ಇದನ್ನು ಸರಿಪಡಿಸಲು ಕಾಲಾವಕಾಶ ಬೇಕು’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ಹರಿಹಾಯ್ದರು.

ನಾನು ಪಿ.ವೆಂಕಟಗಿರಿಯಪ್ಪ, ಸಿ.ಬೈರೇಗೌಡರ ಅವರಂತಹ ರಾಜಕೀಯ ಮುತ್ಸದಿಗಳ ಮಾರ್ಗದರ್ಶನದಲ್ಲಿ ಬೆಳೆದು ಬಂದವನು. ಈಗಲೂ ಅವರ ಆದರ್ಶದ ಹಾದಿಯಲ್ಲೇ ಮುಂದುವರಿಯುತ್ತಿದ್ದೇನೆ. ಈಗಿನ ಕಲುಷಿತ ರಾಜಕೀಯದಲ್ಲಿ ಪ್ರಾಮಾಣಿಕತೆ, ನಿಷ್ಠೆ ಮಾಯವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ರಾಜಕೀಯದಲ್ಲಿ ಯಾರು ಶತ್ರುಗಳೂ ಆಲ್ಲ, ಮಿತ್ರರೂ ಅಲ್ಲ. ಈ ಹಿಂದೆ ಕಾಂಗ್ರೆಸ್‌ ಪಕ್ಷವೇ ನಮ್ಮ ಪಕ್ಷದ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗಲು ಬೆಂಬಲ ಸೂಚಿಸಿತ್ತು. ಅದೇ ಕಾಂಗ್ರೆಸ್‌ ಮುಖಂಡರು ಕುಮಾರಸ್ವಾಮಿಯನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಬೆಂಬಲಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿರುವುದು ನಿದರ್ಶನವಾಗಿದೆ’ ಎಂದರು.

‘ಹೊಂದಾಣಿಕೆ ರಾಜಕೀಯ ಎಲ್ಲಾ ಪಕ್ಷಗಳಲ್ಲೂ ಸಾಮಾನ್ಯ. ನಾನು 4 ಬಾರಿ ವಿವಿಧ ಪಕ್ಷಗಳಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಒಂದು ಬಾರಿ ಸಚಿವನೂ ಅಗಿದ್ದು, ಆಯಾ ಸಂದರ್ಭ ಹಾಗೂ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವುದು ಅನಿವಾರ್ಯ’ ಎಂದು ಹೇಳಿದರು.

ಆತ್ಮವಿಮರ್ಶೆ: ‘ರಾಜಕಾರಣದಲ್ಲಿ ಗೌರವಯುತವಾಗಿ ಬದುಕಲು ಸಾಧ್ಯವೇ ಎಂಬ ಬಗ್ಗೆ ನಾವೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ರಾಜಕೀಯದಲ್ಲಿ ಹಣದ ಹೊಳೆ ಹರಿಸಿದರೆ ಏನು ಬೇಕಾದರೂ ಆಗಬಹುದೆಂಬ ನಂಬಿಕೆ ಬಂದಿದೆ. ನಾನು 2 ಬಾರಿ ಚುನಾವಣೆಯಲ್ಲಿ ಸೋತಿರುವುದೇ ಇದಕ್ಕೆ ನಿದರ್ಶನ’ ಎಂದು ಮಾರ್ಮಿಕವಾಗಿ ನುಡಿದರು.

‘ಯಾರದೋ ಹಿತಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ರಸ್ತೆಗಳ ಅಗಲೀಕರಣ ಮಾಡುತ್ತಿಲ್ಲ. ಈ ರಸ್ತೆಗಳಲ್ಲಿ ನಮ್ಮ ಆಸ್ತಿಗಳಿಲ್ಲ. ನಗರವಾಸಿಗಳ ಹಿತಕ್ಕಾಗಿ ರಸ್ತೆಗಳ ಅಗಲೀಕರಣ ಅತ್ಯಗತ್ಯ. ಭವಿಷ್ಯದ 20 ವರ್ಷಗಳ ಸಂಚಾರ ವ್ಯವಸ್ಥೆ ಗುರಿಯಿಟ್ಟುಕೊಂಡು ರಸ್ತೆಗಳನ್ನು ಅಭಿವೃದ್ಧಪಡಿಸುತ್ತಿದ್ದೇವೆ’ ಎಂದು ವಿವರಿಸಿದರು.

‘ಈಗಾಗಲೇ 2 ರಸ್ತೆಗಳ ಅಗಲೀಕರಣ ಕಾಮಗಾರಿ ಆರಂಭವಾಗಿದೆ. ಉಳಿದ 2 ರಸ್ತೆಗಳ ಅಗಲೀಕರಣ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದರಿಂದ ಕಾಮಗಾರಿ ವಿಳಂಬವಾಗಿದೆ. ಕೆ.ಸಿ ವ್ಯಾಲಿ ಯೋಜನೆ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಕೆರೆಗಳು ಬೇಗನೆ ತುಂಬುತ್ತಿಲ್ಲ. ಬೆಂಗಳೂರಿನಲ್ಲಿ ಸಂಸ್ಕರಣಾ ಘಟಕಕ್ಕೆ ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸುತ್ತೇವೆ’ ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ, ನಗರಸಭೆ ಮಾಜಿ ಸದಸ್ಯ ಶಂಷುದ್ದೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.