ADVERTISEMENT

ಪ್ರಶ್ನೆಪತ್ರಿಕೆ ದೋಷಪೂರಿತ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 12:34 IST
Last Updated 22 ಸೆಪ್ಟೆಂಬರ್ 2020, 12:34 IST

ಕೋಲಾರ: ‘ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ದೋಷಪೂರಿತವಾಗಿದೆ’ ಎಂದು ವಿವೇಕ್‌ ಇನ್ಫೋಟೆಕ್‌ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಪ್ರತಿನಿಧಿ ಸಿ.ಜಿ.ಮುರಳಿ ಆರೋಪಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಶ್ನೆಪತ್ರಿಕೆಯಲ್ಲಿನ ಕನ್ನಡ ಪದಗಳಲ್ಲಿ ಸಾಕಷ್ಟು ತಪ್ಪುಗಳಿದ್ದು, ಪರೀಕ್ಷಾರ್ಥಿಗಳಿಗೆ ಗೊಂದಲವಾಗಿದೆ. ಪರೀಕ್ಷೆ ಬರೆದಿರುವ ಲಕ್ಷಾಂತರ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಯಲ್ಲಿ ಆಗಿರುವ ಪ್ರಮಾದಕ್ಕೆ ಆತಂಕದಲ್ಲಿದ್ದಾರೆ’ ಎಂದು ಹೇಳಿದರು.

‘ಪ್ರಶ್ನೆಪತ್ರಿಕೆಯಲ್ಲಿನ ತಪ್ಪುಗಳ ಸಂಬಂಧ ತನಿಖೆ ನಡೆಸಬೇಕು. ದೋಷಪೂರಿತ ಪ್ರಶ್ನೆಗಳಿಗೆ ಗ್ರೇಸ್‌ ಮಾರ್ಕ್ಸ್‌ ಕೊಡಬೇಕು. ಮುಂದೆ ಯಾವುದೇ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಈ ರೀತಿಯ ತಪ್ಪುಗಳು ಆಗದಂತೆ ನೇಮಕಾತಿ ಪ್ರಾಧಿಕಾರ ಎಚ್ಚರ ವಹಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯಾ ಭಾಷಾ ಪ್ರೌಢಿಮೆಯ ಅಭ್ಯರ್ಥಿಗಳು ತಮಗೆ ಅರ್ಥವಾಗುವ ಭಾಷೆಯಲ್ಲಿ ಪ್ರಶ್ನೆಗಳನ್ನು ಓದಿ ಉತ್ತರಿಸುತ್ತಾರೆ. ಇದರಿಂದ ಗೊಂದಲ ಆಗುವುದಿಲ್ಲ. ಆದರೆ, ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯಲ್ಲಿ ಭಾಷಾ ಗೊಂದಲ ಮುಂದುವರಿದಿದೆ. ರಾಜ್ಯದಲ್ಲಿ ಕನ್ನಡ ಭಾಷೆಯನ್ನೇ ಸರಿಯಾಗಿ ಬಳಸದಿರುವುದು ಖಂಡನೀಯ’ ಎಂದು ಸಂಸ್ಥೆ ಉಪನ್ಯಾಸಕ ಎಸ್.ಆರ್.ರಾಕೇಶ್ ಕಿಡಿಕಾರಿದರು.

‘ಪ್ರಶ್ನೆಪತ್ರಿಕೆಯ 15ಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ಭಾಷಾ ಲೋಪವಿದೆ. ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) ಮತ್ತು ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲೂ ಕನ್ನಡ ಪದಗಳ ಅಭಾಸ ಮತ್ತು ಗೊಂದಲದ ಪದ ಬಳಕೆಯ ಪ್ರಶ್ನೆಗಳು ಹೆಚ್ಚುತ್ತಿವೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್‌ಕುಮಾರ್‌ ಕೋರಿದರು.

ಪರೀಕ್ಷಾರ್ಥಿಗಳಾದ ಜಿ.ಎಸ್.ಗೋಪಾಲಕೃಷ್ಣ, ವಿ.ರಾಜ್‌ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.