ADVERTISEMENT

ಸ್ವಂತ ಖರ್ಚಿನಲ್ಲಿ ಶುದ್ಧ ನೀರಿನ ಘಟಕ ಸ್ಥಾ‍ಪನೆ: ಎಸ್.ಎನ್. ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 3:46 IST
Last Updated 25 ಜನವರಿ 2022, 3:46 IST
ಬಂಗಾರಪೇಟೆಯ ಕೆರೆ ಕೋಡಿ ಬಡಾವಣೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮುಖಂಡರಾದ ಸುಹೇಲ್, ಆರೋಗ್ಯ ರಾಜನ್, ಶೆಫಿ ಇದ್ದರು
ಬಂಗಾರಪೇಟೆಯ ಕೆರೆ ಕೋಡಿ ಬಡಾವಣೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮುಖಂಡರಾದ ಸುಹೇಲ್, ಆರೋಗ್ಯ ರಾಜನ್, ಶೆಫಿ ಇದ್ದರು   

ಬಂಗಾರಪೇಟೆ: ‘ಕೆರೆಕೋಡಿ ಬಡಾವಣೆಗೆ ಸ್ವಂತ ಖರ್ಚಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗುವುದು’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಭರವಸೆ ನೀಡಿದರು.

ಪಟ್ಟಣದ ಕೆರೆಕೋಡಿ ಬಡಾವಣೆಯಲ್ಲಿ ಭಾನುವಾರ ₹ 12 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ನೀರು ಶುದ್ಧೀಕರಣ ಘಟಕಕ್ಕೆ ಜಾಗ ಇಲ್ಲದ ಕಾರಣ ಇಲ್ಲಿಯತನಕ ಘಟಕ ಅಳವಡಿಸಲಾಗಿಲ್ಲ. ಈಗ ಮುಖಂಡ ಜಯರಾಮಣ್ಣ ಅವರು ತಮ್ಮ ಸ್ವಂತ ಜಾಗ ನೀಡಲು ಒಪ್ಪಿದ್ದಾರೆ. ತಿಂಗಳ ಒಳಗೆ ಘಟಕ ಅಳವಡಿಸಲಾಗುವುದು ಎಂದರು.

ADVERTISEMENT

ಘಟಕ ಅಳವಡಿಸುವ ತನಕ ಎ ಎನ್‌ ಟ್ರಸ್ಟ್‌ನಿಂದ 20 ಲೀಟರ್ ನೀರಿನ ಕ್ಯಾನ್ ಮತ್ತು ಬಿಸ್ಲೆರಿ ನೀರು ಪೂರೈಕೆ ಮಾಡಲಾಗುವುದು. ಬಡಾವಣೆಯಲ್ಲಿ ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆಯಿತ್ತು. ಹಾಗಾಗಿಯೇ 7 ಕೊಳವೆಬಾವಿ ಕೊರೆಯಿಸಲಾಗಿದೆ. ಜತೆಗೆ ಮುಖಂಡರ ಕೋರಿಕೆ ಮೇರೆಗೆ ಬಡಾವಣೆಗೆ ಹೈಮಾಸ್ಟ್ ದ್ವೀಪ ಅಳವಡಿಸಲಾಗುವುದು ಎಂದರು.

ಇದುವರೆಗೂ ಪುರಸಭೆ ಮತ್ತು ಶಾಸಕರ ಅನುದಾನದಿಂದ ಇಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆಯೇ ಹೊರತು ಇಲ್ಲಿನ ಪುರಸಭೆ ಸದಸ್ಯರ ಕೊಡುಗೆ ಶೂನ್ಯ. ಮಾಡಿರುವ ಕಾಮಗಾರಿ ಮುಂದೆ ಪೋಸ್ ಕೊಟ್ಟು ಫೇಸ್‌ಬುಕ್‌ನಲ್ಲಿ ಹಾಕಿಕೊಳ್ಳುವುದಕ್ಕೆ ಸೀಮಿತವಾಗಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಬಡವರ ಪರ ಕೆಲಸ ಮಾಡುತ್ತಿದೆ. ಎಸ್‌.ಸಿ, ಎಸ್.ಟಿ ಸಮುದಾಯದವರಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಲು ಪುರಸಭೆ ₹2.75 ಲಕ್ಷ ನೀಡಲಿದೆ. ಸೂರು ಇಲ್ಲದಿರುವ ಇತರೇ ಸಮುದಾಯದವರು ಕೂಡ ಪುರಸಭೆಗೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮನೆ ಕೊಡಿಸುವುದಾಗಿ ಹಣ ತೆಗೆದುಕೊಳ್ಳುವವರನ್ನು ನಂಬಿ ಮೋಸ ಹೋಗಬೇಡಿ ಎಂದು ಕಿವಿಮಾತು ಹೇಳಿದರು.

ಪುರಸಭೆ ಅಧ್ಯಕ್ಷ ಫರ್ಜಾನಾ ಸುಹೇಲ್, ಸ್ಥಾಯಿಸಮಿತಿ ಅಧ್ಯಕ್ಷ ಪ್ರಭಾಕರ್, ಸದಸ್ಯರಾದ ಆರೋಗ್ಯರಾಜನ್, ಶೆಫಿ, ಗೋವಿಂದ, ವೆಂಕಟೇಶ್, ಮುಖಂಡರಾದ ಮುನಿಯಪ್ಪ, ಕೃಷ್ಣಮೂರ್ತಿ, ಬ್ಯಾಂಕ್ ನಾರಾಯಣಪ್ಪ, ಶ್ರೀನಿವಾಸ್, ಕಣ್ಣಾ ಜಯರಾಮಪ್ಪ, ಮೋಹನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.