ADVERTISEMENT

ಕಾಲೇಜು ಎಡವಟ್ಟು: ಪರೀಕ್ಷೆ ವಂಚಿತ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 16:58 IST
Last Updated 24 ಸೆಪ್ಟೆಂಬರ್ 2021, 16:58 IST

ಕೋಲಾರ: ನಗರದ ಮದರ್ ಥೆರೆಸಾ ಪದವಿ ಕಾಲೇಜು ಆಡಳಿತ ಮಂಡಳಿ ಬೇಜವಾಬ್ದಾರಿಗೆ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕಾ ಅವರು ಶುಕ್ರವಾರ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾದರು.

ಕಾಲೇಜಿನ ಇತರೆ ವಿದ್ಯಾರ್ಥಿಗಳಂತೆ ₹ 950 ಪರೀಕ್ಷಾ ಶುಲ್ಕ ಪಾವತಿಸಿದ್ದ ಪ್ರಿಯಾಂಕಾ ಅವರು ಬೆಳಿಗ್ಗೆ ಮದರ್‌ ಥೆರೆಸಾ ಕಾಲೇಜಿಗೆ ಹೋಗಿ ಪ್ರವೇಶಪತ್ರ ಪಡೆದು ಸರ್ಕಾರಿ ಬಾಲಕರ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ತೆರಳಲು ಯೋಜಿಸಿದ್ದರು.

ಆದರೆ, ಕಾಲೇಜು ಆಡಳಿತ ಮಂಡಳಿಯ ಎಡವಟ್ಟಿನಿಂದ ಅವರ ಪರೀಕ್ಷಾ ಶುಲ್ಕ ಪಾವತಿಯಾಗದೆ 6ನೇ ಸೆಮಿಸ್ಟರ್ ಪರೀಕ್ಷೆಯ ಪ್ರವೇಶಪತ್ರದ ಬದಲು 4ನೇ ಸೆಮಿಸ್ಟರ್ ಪ್ರವೇಶಪತ್ರ ಕೊಟ್ಟು ಕಳುಹಿಸಿದ್ದರು. ಆ ಪ್ರವೇಶಪತ್ರ ಹಿಡಿದು ಪರೀಕ್ಷಾ ಕೇಂದ್ರಕ್ಕೆ ಬಂದ ಪ್ರಿಯಾಂಕಾ ಅವರಿಗೆ ಕೇಂದ್ರದ ಸಿಬ್ಬಂದಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದರು.

ADVERTISEMENT

ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯು ತನ್ನ ಪೋಷಕರಿಗೆ ಮತ್ತು ಮದರ್ ಥೆರೆಸಾ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಅವರಿಗೆ ಕರೆಮಾಡಿ ಸಮಸ್ಯೆಯನ್ನು ಗಮನಕ್ಕೆ ತಂದರು. ಸ್ವಲ್ಪ ಸಮಯದಲ್ಲೇ ಪರೀಕ್ಷಾ ಕೇಂದ್ರಕ್ಕೆ ಬಂದ ಪೋಷಕರಿಗೆ ಸಿಬ್ಬಂದಿಯು, ‘ನಿಮ್ಮ ಮಗಳ ಬಳಿ 4ನೇ ಸೆಮಿಸ್ಟರ್‌ ಪರೀಕ್ಷೆಯ ಪ್ರವೇಶಪತ್ರವಿದೆ. ಹೀಗಾಗಿ ನಾವು ಏನು ಮಾಡಲು ಸಾಧ್ಯವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಾಂಶುಪಾಲ ಕೃಷ್ಣಮೂರ್ತಿ ಅವರು ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ವಿದ್ಯಾರ್ಥಿನಿಗೆ ಅನುಕೂಲ ಮಾಡಿಕೊಡಲು ನಡೆಸಿದ ಪ್ರಯತ್ನವೂ ಸಫಲವಾಗಲಿಲ್ಲ. ಆ ವೇಳೆಗಾಗಲೇ ಸಮಯ ಮೀರಿ ಹೋಗಿದ್ದರಿಂದ ಪ್ರಿಯಾಂಕಾ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾದರು.

ಭವಿಷ್ಯ ಹಾಳು: ಪೋಷಕರು ಮದರ್ ಥೆರೆಸಾ ಪದವಿ ಕಾಲೇಜು ಬಳಿ ಬಂದು, ‘ಕಾಲೇಜು ಆಡಳಿತ ಮಂಡಳಿಯ ಎಡವಟ್ಟಿನಿಂದ ಮಗಳ ಭವಿಷ್ಯ ಹಾಳಾಯಿತು. ಮಗಳಿಗೆ ಆಗಿರುವ ತೊಂದರೆ ಪರಿಹರಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶುಕ್ರವಾರದ ನಡೆದ ಒಂದು ವಿಷಯದ ಪರೀಕ್ಷೆಯನ್ನು ಮುಂದಿನ ಬಾರಿ ಬರೆಯಬೇಕು. ಉಳಿದ ವಿಷಯಗಳ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತೇವೆ’ ಎಂದು ಆಡಳಿತ ಮಂಡಳಿಯವರು ಪೋಷಕರಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.