ADVERTISEMENT

ಅಂಗವಿಕಲರ ಬದುಕಿಗೆ ಸೌಕರ್ಯ ಕಲ್ಪಿಸಿ

ಅಧಿಕಾರಿಗಳಿಗೆ ಸಂಸದ ಮುನಿಸ್ವಾಮಿ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 12:20 IST
Last Updated 13 ಸೆಪ್ಟೆಂಬರ್ 2019, 12:20 IST
ಕೋಲಾರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಹಿರಿಯ ನಾಗರಿಕರಿಗೆ ರಾಷ್ಟ್ರೀಯ ವಯೋಶ್ರೀ ಸನ್ಮಾನ ಯೋಜನೆಯ ಸಲಕರಣೆ ವಿತರಿಸಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಹಿರಿಯ ನಾಗರಿಕರಿಗೆ ರಾಷ್ಟ್ರೀಯ ವಯೋಶ್ರೀ ಸನ್ಮಾನ ಯೋಜನೆಯ ಸಲಕರಣೆ ವಿತರಿಸಿದರು.   

ಕೋಲಾರ: ‘ಅಂಗವಿಕಲರು ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳಲು ಅಧಿಕಾರಿಗಳು ಸೌಕರ್ಯ ಕಲ್ಪಿಸಿಕೊಡಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಸನ್ಮಾನ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತ ಸಲಕರಣೆ ವಿತರಿಸಿ ಮಾತನಾಡಿ, ‘ಜಿಲ್ಲೆಯ 6 ತಾಲ್ಲೂಕುಗಳಲ್ಲಿನ ಪ್ರತಿ ಅಂಗವಿಕಲನಿಗೂ ಉಚಿತ ಸಲಕರಣೆ ತಲುಪಿಸಬೇಕು’ ಎಂದು ತಿಳಿಸಿದರು.

‘ಪ್ರತಿ ವರ್ಗದವರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅನೇಕ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಗಳ ಸೌಕರ್ಯವನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು’ ಎಂದು ಹೇಳಿದರು.

ADVERTISEMENT

‘ಹಿರಿಯ ನಾಗರಿಕರು ದೇವರ ಸಮಾನರು. ಮಕ್ಕಳು ತಂದೆ ತಾಯಿಯನ್ನು ನೋಡಿಕೊಳ್ಳಬೇಕು. ಅವರ ಅನುಕೂಲಕ್ಕೆ ಸರ್ಕಾರ ಅನೇಕ ಸೌಲಭ್ಯ ನೀಡುತ್ತಿದೆ. ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.

‘ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಡವರಿಗೆ ಅನೂಕೂಲ ಕಲ್ಪಿಸಿವುದು ರಾಷ್ಟ್ರೀಯ ವಯೋಶ್ರೀ ಯೋಜನೆಯು ಪ್ರಮುಖ ಉದ್ದೇಶ. ಈ ಯೋಜನೆ ಬಗ್ಗೆ ಅಧಿಕಾರಿಗಳು ವ್ಯಾಪಕ ಪ್ರಚಾರ ನಡೆಸಿದರೆ ಫಲಾನುಭವಿಗಳು ಪ್ರಯೋಜನ ಪಡೆಯಲು ಮುಂದಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ಕೇಂದ್ರವು ಆದ್ಯತೆ ಮೇಲೆ ಹಿರಿಯ ನಾಗರಿಕರಿಗೆ ಸಮಾಜದಲ್ಲಿ ಸದೃಢ ಜೀವನ ಕಟ್ಟಿಕೊಡಲು ಮುಂದೆ ಬಂದಿದೆ. ವಯೋಶ್ರೀ ಯೋಜನೆ ಮೂಲಕ ಬಡವರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ವಾತಾವರಣ ಸೃಷ್ಟಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ಪಿಂಚಣಿ ಪಡೆಯಬೇಕು: ‘ವೃದ್ಧಾಪ್ಯ ವೇತನ ಬಾರದಿದ್ದರೆ ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್‌ನಲ್ಲಿ ಅರ್ಜಿ ಕೊಟ್ಟು ಪ್ರತಿಯೊಬ್ಬರು ಪಿಂಚಣಿ ಪಡೆಯಬೇಕು. ಜಿಲ್ಲೆಯಲ್ಲಿ ಹಿಂದಿನ ಲೋಕಸಭಾ ಚುನಾವಣೆಯಲ್ಲಿ 14,723 ಮಂದಿ ಅಂಗವಿಕಲರು ಮತದಾನ ಮಾಡಿದ್ದು, ಹೆಮ್ಮೆಯ ವಿಷಯ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

507 ಮಂದಿ ಅಂಗವಿಕಲ ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಜಿಲ್ಲಾ ಅಂಗವಿಕಲರ ಸಬಲೀಕರಣಾಧಿಕಾರಿ ವೆಂಕಟರಮಣಪ್ಪ, ಶ್ರೀ ನರಸಿಂಹರಾಜ (ಎಸ್ಎನ್ಆರ್) ಜಿಲ್ಲಾ ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.