ಕೋಲಾರ: ‘ಜಿಲ್ಲೆಯ ಕೈಗಾರಿಕೆಗಳ ಅವಶ್ಯಕತೆಗೆ ಅನುಗುಣವಾಗಿ ಕೌಶಲ ತರಬೇತಿ ನೀಡಿದರೆ ಹೆಚ್ಚು ಅನುಕೂಲ’ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ರವಿಚಂದ್ರ ಅಭಿಪ್ರಾಯಪಟ್ಟರು.
ರಾಜ್ಯ ಕೌಶಲಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ (ಎಚ್‌ಆರ್‌ಡಿಸಿ) ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
‘ಜಿಲ್ಲೆಯ ಮಾಲೂರು, ನರಸಾಪುರ ಮತ್ತು ವೇಮಗಲ್ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಆಟೊಮೊಬೈಲ್‌ಗೆ ಸಂಬಂಧಿಸಿದ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಕೈಗಾರಿಕೆಗಳಿಗೆ ಪೂರಕವಾಗಿ ಐಟಿಐ, ಕೌಶಲಾಭಿವೃದ್ಧಿ ಕೇಂದ್ರಗಳು ಅಗತ್ಯ ಕೌಶಲ ಕಲಿಸಲು ಹೆಚ್ಚು ಒತ್ತು ಕೊಡಬೇಕು. ಈ ನಿಟ್ಟಿನಲ್ಲಿ ಕೈಗಾರಿಕೆಗಳೊಂದಿಗೆ ಸಂಯೋಜನೆ ಮಾಡಿಕೊಂಡರೆ ಸಹಕಾರಿ’ ಎಂದು ಸಲಹೆ ನೀಡಿದರು.
‘ಜಿಲ್ಲೆಯ ಆಟೊಮೊಬೈಲ್ ಕೈಗಾರಿಕೆಗಳಲ್ಲಿ ಪೇಂಟಿಂಗ್, ವೆಲ್ಡಿಂಗ್ ಕೆಲಸಕ್ಕೆ ಹೆಚ್ಚು ಬೇಡಿಕೆಯಿದೆ. ಸ್ಥಳೀಯರು ಕೆಲಸಕ್ಕೆ ಸೇರಿದರೂ 8 ತಾಸು ನಿಂತು ಕೆಲಸ ಮಾಡಬೇಕೆಂಬ ಕಾರಣಕ್ಕೆ ಅರ್ಧಕ್ಕೆ ಕೆಲಸ ಬಿಟ್ಟು ಬರುತ್ತಾರೆ. ಉತ್ತರ ಕರ್ನಾಟಕ ಭಾಗದ ಯುವಕರು ದೀರ್ಘಾವಧಿವರೆಗೆ ಕೆಲಸ ಮಾಡುತ್ತಾರೆ. ಉದ್ಯೋಗದ ಅನಿವಾರ್ಯತೆ ಇದ್ದರೆ 8 ತಾಸು ಕೆಲಸ ಕಷ್ಟವಲ್ಲ’ ಎಂದರು.
‘ಸಣ್ಣ ಪುಟ್ಟ ಕೆಲಸವಾದರೂ ಕೌಶಲ ಅತ್ಯಗತ್ಯ. ರೈತರು ಸಮಯದ ಹಂಗಿಲ್ಲದೆ ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಪ್ರತಿ ಯಶಸ್ವಿ ಸಾಧಕರ ಹಿಂದೆ ಪರಿಶ್ರಮವಿದೆ. ಉದ್ಯೋಗಿಗಳು ವಿನಯತೆ ಕಲಿಯಬೇಕು. ಅಭ್ಯಾಸ, ಕುಶಲತೆ, ಕ್ಷಮತೆ ಕಲಿಯಬೇಕು. ಕೆಲಸಕ್ಕೆ ಸೇರಿದಾಗಲೇ ಹೆಚ್ಚು ಸಂಬಳ ನಿರೀಕ್ಷೆ ಬೇಡ. ವೃತ್ತಿ ನೈಪುಣ್ಯ ಸಾಧಿಸಿದರೆ ಹಣ ಹಿಂಬಾಲಿಸಿಕೊಂಡು ಬರುತ್ತದೆ’ ಎಂದು ಶ್ರೀನಿವಾಸಪುರ ಸರ್ಕಾರಿ ಐಟಿಐ ಕಾಲೇಜು ಪ್ರಾಂಶುಪಾಲ ವೀರಣ್ಣ ಹಳಿಕಟ್ಟಿ ಕಿವಿಮಾತು ಹೇಳಿದರು.
ಜಾಸ್ತಿ ಸಂಬಳ: ‘ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕನಿಷ್ಠ ವೇತನಕ್ಕಿಂತ ಜಾಸ್ತಿ ಸಂಬಳ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆಗಳಿವೆ. ಮತ್ತಷ್ಟು ಕೈಗಾರಿಕೆಗಳು ಜಿಲ್ಲೆಗೆ ಬರಲಿದ್ದು, ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ’ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕ ಶೇಷಾದ್ರಿಗೌಡ ಅಭಿಪ್ರಾಯಪಟ್ಟರು.
‘ವೃತ್ತಿ ಕೌಶಲ ಪಡೆದುಕೊಂಡರೆ ಉತ್ತಮ ಭವಿಷ್ಯವಿದೆ. ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಕಹಿ ಘಟನಾವಳಿ ಭವಿಷ್ಯದಲ್ಲಿ ಮರುಕಳಿಸಬಾರದು. ಕಾರ್ಮಿಕರಿಗೆ ಕಷ್ಟ, ಸಮಸ್ಯೆಯಿದ್ದರೆ ಕಂಪನಿ ಆಡಳಿತ ಮಂಡಳಿ ಪ್ರತಿನಿಧಿಗಳ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ವೃತ್ತಿ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಕಾರಾತ್ಮಕವಾಗಿ ಯೋಚಿಸಿ. ಪೋಷಕರು ಹಾಗೂ ಗುರುಗಳಿಂದ ಮಾರ್ಗರ್ಶನ ಪಡೆಯಿರಿ. ಹಣ ಗಳಿಸಿದವರೆಲ್ಲಾ ಯಶಸ್ವಿ ವ್ಯಕ್ತಿಯಾಗಲ್ಲ. ಹಣ ಹುಡುಕಿಕೊಂಡು ಬರಬೇಕು, ಹಣದ ಹಿಂದೆ ಹೋದರೆ ಕೌಶಲ ಸಿಗಲ್ಲ’ ಎಂದರು.
ಕೊರತೆ ನಿವಾರಣೆ: ‘ಕೌಶಲಾಭಿವೃದ್ಧಿ ನಿಗಮವು ವಿದ್ಯಾವಂತ ನಿರುದ್ಯೋಗಿಗಳಿಗೆ ಕೌಶಲ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೌಶಲ ತರಬೇತಿ ಕೇಂದ್ರಗಳ ಮೂಲಕ ಪದವಿ ಸ್ನಾತಕೋತ್ತರ ಶಿಕ್ಷಣ, ತಾಂತ್ರಿಕ ಶಿಕ್ಷಣ ನೀಡಿ ಉದ್ಯೋಗಾಕಾಂಕ್ಷಿಗಳಲ್ಲಿನ ಕೌಶಲ ಕೊರತೆ ನಿವಾರಿಸಲಾಗುತ್ತಿದೆ’ ಎಂದು ಎಚ್‌ಆರ್‌ಡಿಸಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ನಾರಾಯಣಸ್ವಾಮಿ ಎಂದು ತಿಳಿಸಿದರು.
ಮೆಡಿಟ್ಯೂಡ್ ಸ್ಕಿಲ್ ಡೆವಲಪ್‌ಮೆಂಟ್ ಸಿಇಒ ಫಯಾಜ್ ಅಹಮ್ಮದ್, ವಿಶ್ವೇಶ್ವರಯ್ಯ ಜಿಲ್ಲಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಹಮ್ಮದ್ ಷಫೀವುಲ್ಲಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.