ADVERTISEMENT

ಬೀದಿ ಬದಿ ವ್ಯಾಪಾರಿಗಳಿಗೆ ಸೌಕರ್ಯ ಕಲ್ಪಿಸಿ- ವಿಧಾನ ಪರಿಷತ್ ಸದಸ್ಯ ಗೋವಿಂದರಾಜು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 14:37 IST
Last Updated 21 ಡಿಸೆಂಬರ್ 2021, 14:37 IST

ಕೋಲಾರ: ‘ಬೀದಿ ಬದಿಯ ಮತ್ತು ತಳ್ಳು ಗಾಡಿ ವ್ಯಾಪಾರಿಗಳ ಸರ್ವೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಈ ಬಗ್ಗೆ ಸರ್ಕಾರ ಪರಿಶೀಲನೆ ಮಾಡಿಲ್ಲ. ಇನ್ನಾದರೂ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಸರಿಯಾಗಿ ಸರ್ವೆ ಮಾಡಿ ಅರ್ಹರನ್ನು ಗುರುತಿಸಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಸೌಕರ್ಯ ಕಲ್ಪಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಒತ್ತಾಯಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿ, ‘ಬೀದಿ ಬದಿಯ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೇಳಲಾಗಿತ್ತು. ಆದರೆ, ಸರ್ಕಾರ ಸಮರ್ಪಕ ಮಾಹಿತಿ ಕೊಟ್ಟಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಬಡವರ ಬಂಧು ಕಾರ್ಯಕ್ರಮ ಜಾರಿಗೊಳಿಸಲಾಯಿತು. ನಂತರ ಈ ಯೋಜನೆ ಸ್ಥಗಿತಗೊಂಡಿದೆ’ ಎಂದು ದೂರಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ಸಣ್ಣ ವ್ಯಾಪಾರಿಗಳಿಗೆ ಜೀವನ ರೂಪಿಸಿಕೊಳ್ಳಲು ಅಗತ್ಯ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಬೀದಿ ವ್ಯಾಪಾರಿಗಳಿಗಾಗಿ 43 ಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಈ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಕೌಶಲ ತರಬೇತಿ ನೀಡಲಾಗಿದೆ. ಸ್ಥಳೀಯ ಮತ್ತು ನಗರ ಮಟ್ಟದಲ್ಲಿ ವ್ಯವಸ್ಥಿತವಾಗಿ ಮಾರುಕಟ್ಟೆ ನಡೆಯುತ್ತಿದ್ದು, ಬೀದಿ ಬದಿ ವ್ಯಾಪಾರಿಗಳ ಸಬಲೀಕರಣ ಆಗುತ್ತಿದೆ’ ಎಂದರು.

‘ಪ್ರತಿ ವ್ಯಾಪಾರಿಗೂ ಸೌಕರ್ಯ ಕಲ್ಪಿಸಲಾಗುತ್ತಿದೆ.  ಬ್ಯಾಂಕ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತಿದೆ. ಈ ಹಿಂದೆ ವ್ಯಾಪಾರಿಗಳು ಖಾಸಗಿ ಬಡ್ಡಿ ಲೇವಾದೇವಿದಾರರಿಂದ ಸಾಲ ಪಡೆಯುತ್ತಿದ್ದರು. ಅವರು ವ್ಯಾಪಾರ ಮಾಡಿದ ಹಣದಲ್ಲಿ ಸಂಜೆ ಬಡ್ಡಿ ಕಟ್ಟಬೇಕಿತ್ತು. ಆದರೆ, ಈಗ ಉತ್ತಮವಾಗಿ ಬಾಳಿ ಬದುಕಲು ಅವಕಾಶ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

ಬಡ್ಡಿ ಸಾಲ: ‘ಬೀದಿ ಬದಿ ವ್ಯಾಪಾರಿಗಳಿಗೆ ಶೇ 7ರ ಬಡ್ಡಿ ದರದಲ್ಲಿ ₹ 10 ಸಾವಿರ ಸಾಲ ಕೊಡಲಾಗುತ್ತಿದೆ. ಆದರೆ, ಇತರೆ ಚಟುವಟಿಕೆ ನಡೆಸುತ್ತಿರುವವರಿಗೆ ಶೂನ್ಯ ಬಡ್ಡಿ ಸಾಲ ನೀಡಲಾಗುತ್ತಿದೆ. ಅದೇ ರೀತಿ ವ್ಯಾಪಾರಿಗಳಿಗೂ ಬಡ್ಡಿರಹಿತ ಸಾಲ ಕೊಡಬೇಕು’ ಎಂದು ಗೋವಿಂದರಾಜು ಆಗ್ರಹಿಸಿದರು.

‘ಬೀದಿ ಬದಿ ವ್ಯಾಪಾರಿಗಳ ಹಿತ ರಕ್ಷಣೆಗಾಗಿ ಸರ್ಕಾರ ಕೈಗೊಂಡಿರುವ ಯೋಜನೆಗಳ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಡವರ ಬಂಧು ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿತ್ತು. ಅದನ್ನು ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

‘ಎಂತಹವರಿಗೂ ಬಡ್ಡಿ ಸಾಲ ದೊರೆಯುತ್ತದೆ. ಆದರೆ, ಬೀದಿ ಬದಿ ವ್ಯಾಪಾರಿಗಳಿಗೆ ಸುಲಭವಾಗಿ ಸಾಲ ದೊರೆಯುವುದಿಲ್ಲ. ಈ ವ್ಯಾಪಾರಿಗಳು ಯಾರ ಹಂಗಿಲ್ಲದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರ ಇವರ ಹಿತ ಕಾಯಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ, ‘ರಾಜ್ಯ ಸರ್ಕಾರದಿಂದ 1.60 ಲಕ್ಷ ಮಂದಿಗೆ ತಲಾ ₹ 2 ಸಾವಿರ ಸಾಲ ನೀಡಲಾಗಿದೆ. ಜತೆಗೆ ಗುರುತಿನ ಚೀಟಿ, ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಇನ್ನು 8 ಕಾರ್ಯಕ್ರಮಗಳನ್ನು ವ್ಯಾಪಾರಿಗಳಿಗೆ ವಿಸ್ತರಿಸಲಾಗುತ್ತಿದೆ. ಆತ್ಮ ನಿರ್ಭರ ನಿಧಿಯಿಂದ ₹ 20 ಸಾವಿರದವರೆಗೆ ಸಾಲ ನೀಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.