ADVERTISEMENT

ನಕಲಿ ಮತದಾರರು: ನೋಟಿಸ್ ಜಾರಿ

ಚುನಾವಣಾ ಪ್ರಚಾರದಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:10 IST
Last Updated 19 ಅಕ್ಟೋಬರ್ 2020, 16:10 IST
ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ.ಗೌಡ ಪರ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕೋಲಾರದ ವಿವಿಧೆಡೆ ಸೋಮವಾರ ಪ್ರಚಾರ ನಡೆಸಿದರು.
ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ.ಗೌಡ ಪರ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕೋಲಾರದ ವಿವಿಧೆಡೆ ಸೋಮವಾರ ಪ್ರಚಾರ ನಡೆಸಿದರು.   

ಕೋಲಾರ: ‘ಪದವೀಧರರಲ್ಲದವರನ್ನು ಮತದಾರರ ಪಟ್ಟಿಗೆ ಸೇರಿಸಿದ ಪ್ರಕರಣ ಸಂಬಂಧ ಶ್ರೀನಿವಾಸಪುರ ತಹಶೀಲ್ದಾರ್ ಹಾಗೂ ಇಬ್ಬರು ಉಪ ತಹಶೀಲ್ದಾರ್‌ಗಳಿಗೆ ಚುನಾವಣಾ ಆಯೋಗವು ಷೋಕಾಸ್ ನೋಟಿಸ್‌ ಜಾರಿ ಮಾಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ.ಗೌಡ ಪರ ನಗರದ ವಿವಿಧೆಡೆ ಸೋಮವಾರ ಪ್ರಚಾರ ನಡೆಸಿ ಮಾತನಾಡಿ, ‘30 ಮಂದಿ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದ್ದು, ಈ ಪೈಕಿ 14 ಮಂದಿ ಪದವೀಧರರೇ ಅಲ್ಲ ಎಂದು ಸಾಬೀತಾಗಿದೆ’ ಎಂದು ವಿವರಿಸಿದರು.

‘ಈ ಸಂಬಂಧ ಚುನಾವಣಾ ಆಯೋಗವು ಶ್ರೀನಿವಾಸಪುರ ತಹಶೀಲ್ದಾರ್ ಸುಜಾತಾ, ರೋಣೂರು ಉಪ ತಹಶೀಲ್ದಾರ್ ನರೇಶ್ ಮತ್ತು ನೆಲವಂಕಿ ಉಪ ತಹಶೀಲ್ದಾರ್ ಮಲ್ಲೇಶ್ ಅವರಿಗೆ ನೋಟಿಸ್‌ ನೀಡಿದೆ. ಈ ಹಿಂದೆ ಏ.27 ರಂದು ನೀಡಿದ್ದ ದೂರಿನ ಅನ್ವಯ ತನಿಖೆ ನಡೆಸಿ 124 ಮಂದಿಯನ್ನು ನಕಲಿ ಮತದಾರರೆಂದು ಪಟ್ಟಿಯಿಂದ ತೆಗೆದು ಹಾಕಲಾಗಿತ್ತು’ ಎಂದು ಹೇಳಿದರು.

ADVERTISEMENT

‘ಪದವೀಧರರಲ್ಲದವರು ನಕಲಿ ಮತದಾರರಾಗಿ ಮತ ಹಾಕಲು ಬಂದರೆ ಅವರನ್ನು ವಿಡಿಯೋ ಚಿತ್ರೀಕರಿಸಿ ಮತ್ತು ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಲು ಚುನಾವಣಾ ನಿಯಮದಲ್ಲಿ ಅವಕಾಶವಿದೆ. ಆರೋಪ ಸಾಬೀತಾದರೆ 1 ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಲು ಅವಕಾಶವಿದೆ’ ಎಂದು ಎಚ್ಚರಿಕೆ ನೀಡಿದರು.

ಗೆಲುವಿಗೆ ಅಡ್ಡಿಯಿಲ್ಲ: ‘ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಯ 34 ತಾಲ್ಲೂಕುಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಶಿಕ್ಷಕರು, ಪದವೀಧರರು ಮತ್ತು ನೌಕರರ ಹಿತ ಕಾಯುವ ಶಕ್ತಿ ಬಿಜೆಪಿಗೆ ಮಾತ್ರ ಇದೆ. ಪಕ್ಷದ ಅಭ್ಯರ್ಥಿ ಚಿದಾನಂದ ಅವರ ಗೆಲುವು ನಿಶ್ಚಿತ. ಯಾವುದೇ ತಾಲ್ಲೂಕಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪ್ರಾಬಲ್ಯವಿಲ್ಲ’ ಎಂದರು.

‘ಸರ್ಕಾರಿ ನೌಕರರಿಗೆ ಒಂದೇ ಅವಧಿಯಲ್ಲಿ ವೇತನ ಆಯೋಗ ಜಾರಿ, ಹೊಸ ಆಯೋಗ ರಚನೆ ಎರಡೂ ಕಾರ್ಯ ಮಾಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಅಧಿಕಾರದಲ್ಲಿರುವ ಪಕ್ಷದಿಂದ ಮಾತ್ರ ಶಿಕ್ಷಕರು, ನೌಕರರು ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದನೆ ಸಾಧ್ಯ’ ಎಂದು ಹೇಳಿದರು.

ಭದ್ರ ನೆಲೆಯಿದೆ: ‘ದಾವಣಗೆರೆ ಜಿಲ್ಲೆಯಲ್ಲಿ 19 ಸಾವಿರ, ಚಿತ್ರದುರ್ಗದಲ್ಲಿ 22 ಸಾವಿರ, ತುಮಕೂರಿನಲ್ಲಿ 32 ಸಾವಿರ, ಕೋಲಾರ ಜಿಲ್ಲೆಯಲ್ಲಿ 21,950 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 14 ಸಾವಿರ ಮಂದಿ ಪದವೀಧರ ಮತದಾರರಿದ್ದಾರೆ. ಬಿಜೆಪಿಗೆ ಕ್ಷೇತ್ರದೆಲ್ಲೆಡೆ ಭದ್ರ ನೆಲೆಯಿದೆ. ಆದರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ನೆಲೆ ಕಳೆದುಕೊಂಡಿವೆ’ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಸ್ವಾಮಿ, ನಗರಸಭೆ ಸದಸ್ಯ ಎಸ್.ಆರ್‌.ಮುರಳಿಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸುರೇಶ್‌ಬಾಬು, ನಿಕಟಪೂರ್ವ ಪದಾಧಿಕಾರಿಗಳಾದ ಕೆ.ಎನ್.ಮಂಜುನಾಥ್, ರವಿಚಂದ್ರ, ಎಸ್.ಚೌಡಪ್ಪ, ಬಿ.ಎ.ಕವಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.