ADVERTISEMENT

ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ: ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತ

​ಪ್ರಜಾವಾಣಿ ವಾರ್ತೆ
Published 24 ಮೇ 2020, 13:52 IST
Last Updated 24 ಮೇ 2020, 13:52 IST
ಸ್ಕೌಟ್ಸ್–ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಸಂಸ್ಥೆಯ ಪದಾಧಿಕಾರಿಗಳಿಗೆ ಕೋಲಾರದಲ್ಲಿ ಶನಿವಾರ ಮಾಸ್ಕ್‌ ವಿತರಿಸಿದರು.
ಸ್ಕೌಟ್ಸ್–ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಸಂಸ್ಥೆಯ ಪದಾಧಿಕಾರಿಗಳಿಗೆ ಕೋಲಾರದಲ್ಲಿ ಶನಿವಾರ ಮಾಸ್ಕ್‌ ವಿತರಿಸಿದರು.   

ಕೋಲಾರ: ‘ಕೊರೊನಾ ಸೋಂಕಿನ ತಡೆಗೆ ಜನರು ಸರ್ಕಾರದೊಂದಿಗೆ ಕೈಜೋಡಿಸಬೇಕು ಮತ್ತು ಸರ್ಕಾರದ ಸುರಕ್ಷತಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸ್ಕೌಟ್ಸ್–ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಸಲಹೆ ನೀಡಿದರು.

ಇಲ್ಲಿ ಶನಿವಾರ ನಡೆದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಸ್ಥಳೀಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಮನುಷ್ಯನ ಜೀವನದಲ್ಲಿ ಆರೋಗ್ಯ ಅತ್ಯಮೂಲ್ಯ. ಹಣ ಸಂಪಾದನೆ, ಆಸ್ತಿ ಗಳಿಕೆಗಿಂತ ಆರೋಗ್ಯ ಮುಖ್ಯ. ಕೋಟಿಗಟ್ಟಲೇ ಹಣ, ಆಸ್ತಿ ಸಂಪಾದಿಸಿ ಆರೋಗ್ಯವೇ ಸರಿ ಇಲ್ಲದಿದ್ದರೆ ಪ್ರಯೋಜನವಿಲ್ಲ’ ಎಂದು ಹೇಳಿದರು.

‘ಕೊರೊನಾ ಸೋಂಕು ಇಡೀ ವಿಶ್ವಕ್ಕೆ ಮಾರಕವಾಗಿ ಕಾಡುತ್ತಿದೆ. ಸೋಂಕು ತಡೆಗೆ ಔಷಧ ಕಂಡು ಹಿಡಿದಿಲ್ಲ. ಹೀಗಾಗಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಮತ್ತು ಸ್ಯಾನಿಟೈಸರ್‌ ಬಳಕೆ ಮಾಡುವುದು ಬಹಳ ಮುಖ್ಯ. ಜನರು ಅನಗತ್ಯವಾಗಿ ಮನೆಯಿಂದ ಹೊರಬಂದು ರಸ್ತೆಯಲ್ಲಿ ಸುತ್ತಾಡಬಾರದು’ ಎಂದು ಸಲಹೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಸಂಸ್ಥೆಯಿಂದ 1 ಲಕ್ಷ ಮಾಸ್ಕ್ ತಯಾರಿಸಿ ಹಂಚುವ ಗುರಿಯಿದೆ. ಸಂಸ್ಥೆಯ ತಾಲ್ಲೂಕು ಸಮಿತಿಗಳು 10 ಸಾವಿರ ಮಾಸ್ಕ್ ತಯಾರಿಸಿ ಕೊಡಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ 25 ಸಾವಿರ ಮಾಸ್ಕ್‌ ನೀಡಲಾಗುತ್ತದೆ’ ಎಂದು ವಿವರಿಸಿದರು.

‘ಪರೀಕ್ಷಾ ಸಮಯದಲ್ಲಿ ಸ್ಕೌಟ್ಸ್ ಗೈಡ್ಸ್ ಶಿಕ್ಷಕರು ಮತ್ತು ಸ್ವಯಂ ಸೇವಕರು ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಹಂಚುವ ಸೇವೆಗೆ ಜಿಲ್ಲಾ ಮಟ್ಟದಲ್ಲಿ ತಂಡ ರೂಪಿಸಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಪಟ್ಟಿ ಸಲ್ಲಿಸುತ್ತೇವೆ’ ಎಂದರು.

ಸಮಾಜಮುಖಿ ಕೆಲಸ: ‘ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಾಮಾಜಿಕ ಸೇವಾ ಚಟುವಟಿಕೆ ನಡೆಸುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದೆ. ಸಂಸ್ಥೆಯ ಸೇವಾ ಕಾರ್ಯ ನಿರಂತರವಾಗಿ ಸಾಗಲಿ. ಸಂಸ್ಥೆಗೆ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.

ಸ್ಕೌಟ್ಸ್‌ ಮತ್ತು ಗೌಡ್ಸ್‌ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಜನಾರ್ದನ್‌, ಸಂಘಟನಾ ಆಯುಕ್ತ ವಿ.ಬಾಬು, ಪದಾಧಿಕಾರಿಗಳಾದ ಸುರೇಶ್, ಜಯಶ್ರೀ, ನಾರಾಯಣಸ್ವಾಮಿ, ಶಶಿಕುಮಾರ್, ಮಾಲತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.