ಕೋಲಾರ: ‘ಮುಂದೊಂದು ದಿನ ರೈತರ ಕಾಲು ಹಿಡಿಯುವ ಪರಿಸ್ಥಿತಿ ಜನರಿಗೆ ಮತ್ತು ಸರ್ಕಾರಕ್ಕೆ ಬರಲಿದೆ. ಹೀಗಾಗಿ, ರೈತರಿಂದಲೇ ನಮ್ಮೆಲ್ಲರ ಜೀವನ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು’ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ವೇಮಗಲ್ ಗ್ರಾಮದಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ಸಹಕಾರಿ ಸಂಸ್ಥೆಯನ್ನು ನ್ಯಾಯ ನೀತಿ ಧರ್ಮದಿಂದ ಅಭಿವೃದ್ಧಿಪಡಿಸಬೇಕು. ದೇಶಕ್ಕೆ ಜನರಿಗೆ ಉತ್ತಮ ಆರೋಗ್ಯ, ಶಿಕ್ಷಣದ ಜೊತೆಗೆ ಕೃಷಿಯಲ್ಲಿ ತೊಡಗಲು ಪೋತ್ಸಾಹ ನೀಡಬೇಕು. ಹಾಲು ಉತ್ಪಾದಕರು ಸಹ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು
ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿ, ‘ದೇಶದಲ್ಲಿ ಮೊದಲ ಬಾರಿ ಕೋಮುಲ್ ನೇತೃತ್ವದಲ್ಲಿ 12 ಮೆಗಾ ವ್ಯಾಟ್ ಸೌರ ವಿದ್ಯುತ್ ಘಟಕ ಪ್ರಾರಂಭಿಸಲಾಗುತ್ತಿದೆ. ಇದರಿಂದಾಗಿ ತಿಂಗಳಿಗೆ ₹ 2 ಕೋಟಿ ವಿದ್ಯುತ್ ಶುಲ್ಕ ಉಳಿಯಲಿದೆ. ಈ ಹಣವನ್ನು ಜಿಲ್ಲೆಯಲ್ಲಿರುವ ಬಿಎಂಸಿ ಕೇಂದ್ರಗಳಿಗೆ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಶೇ 50 ವಿದ್ಯುತ್ ಶುಲ್ಕ ಭರಿಸಲು ಮುಂದಿನ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗುತ್ತದೆ’ ಎಂದರು.
‘ಕೋಚಿಮುಲ್ ವಿಭಜನೆಯ ನಂತರ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸುಮಾರು ₹ 220 ಕೋಟಿ ವೆಚ್ಚದಲ್ಲಿ ಎಂವಿಕೆ ಡೇರಿ, ಹಾಲು ಉತ್ಪಾದಕರ ಮಕ್ಕಳಿಗೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿದೆ. ರಾಸುಗಳಿಗೆ ವಿಮೆ ಸೌಲಭ್ಯ ಮಾಡಿಸಲು ವರ್ಷದಲ್ಲಿ ಮೂರು ಬಾರಿ ಅವಕಾಶ ಮಾಡಿಕೊಡಲಾಗಿದೆ’ ಎಂದು ಹೇಳಿದರು.
ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್ ಮಾತನಾಡಿ, ‘ಸಹಕಾರಿ ಸಂಘಗಳಲ್ಲಿ ರಾಜಕೀಯ ಮಾಡಿದರೆ ಯಾರೂ ಉದ್ಧಾರ ಆಗಲ್ಲ. ರೈತರನ್ನು ಪೋತ್ಸಾಹಿಸಬೇಕು, ಗುಣಮಟ್ಟದ ಹಾಲು ನೀಡುವ ಮೂಲಕ ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು’ ಎಂದರು
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಕೋಮುಲ್ ನಿರ್ದೇಶಕ ಷಂಷೀರ್, ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಉಪ ವ್ಯವಸ್ಥಾಪಕ ಡಾ.ಮಹೇಶ್, ವೇಮಗಲ್ ಡೇರಿ ಅಧ್ಯಕ್ಷ ವಿ.ಎಂ ಶ್ರೀನಿವಾಸ್, ಗ್ಯಾರಂಟಿ ಯೋಜನೆ ಜಾರಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ವಿಸ್ತರಣಾಧಿಕಾರಿಗಳಾದ ಸಮೀರ್ ಪಾಷ, ಅಶ್ವಕ್ ಅಹಮದ್, ಡೇರಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಸಂಜಯ್ ಕುಮಾರ್ ಇದ್ದರು.
ಪ್ರತಿಯೊಂದು ಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಮಾಡಿ ಮುಂದಿನ ವರ್ಷದೊಳಗೆ ಕನಿಷ್ಠ 10 ಲಕ್ಷ ಲೀಟರ್ ಹಾಲು ಉತ್ಪಾದನೆಯ ಗುರಿಯಿದೆ– ಕೆ.ವೈ.ನಂಜೇಗೌಡ, ಕೋಮುಲ್ ಅಧ್ಯಕ್ಷ
ಇವತ್ತು ರೈತನ ಮಗ ರೈತನಾಗುತ್ತಿಲ್ಲ. ರೈತರು ಎಂದರೆ ಸಮಾಜದಲ್ಲಿ ತಾರತಮ್ಯ ನಡೆಯುತ್ತಿದೆ. ಅವರ ಮಹತ್ವ ಅರಿತು ರೈತರ ಕಷ್ಟವನ್ನು ಯುವ ಪೀಳಿಗೆಗೆ ತಿಳಿಸಿ ಕೊಡಬೇಕು– ಕೊತ್ತೂರು ಮಂಜುನಾಥ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.