ಬಂಗಾರಪೇಟೆ: ಬೆಲೆ ಕುಸಿತದ ಸಂಕಷ್ಟಕ್ಕೆ ಸಿಲುಕಿದ ತಾಲ್ಲೂಕಿನ ಎಲೆಕೋಸು (ಕ್ಯಾಬೇಜ್) ಬೆಳೆಗಾರರು ತಮ್ಮ ಕೈಯಿಂದ ಬೆಳೆದ ಬೆಳೆಯನ್ನು ತಾವೇ ನಾಶ ಮಾಡಿ ಆಕ್ರೋಶ ಹಾಗೂ ಅಸಹಾಯಕತೆಯನ್ನು ಹೊರಹಾಕಿದ್ದಾರೆ.
ಗುಲ್ಲಹಳ್ಳಿ, ಚಿಕ್ಕಅಂಕಂಡಹಳ್ಳಿ, ಮಿಟ್ಟಹಳ್ಳಿ, ಅನಿಗಾನಹಳ್ಳಿ ಸೇರಿದಂತೆ ತಾಲ್ಲೂಕಿನ ಅನೇಕ ಗ್ರಾಮಗಳ ರೈತರು ಹೆಚ್ಚು ರೈತರು, ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಕಾಣಬಹುದು ಎಂದು ಅಲ್ಪಾವಧಿಯ ಎಲೆಕೋಸು ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಎಲೆಕೋಸು ಬೆಲೆ ದಿಢೀರ್ ಕುಸಿತ ಕಂಡಿದ್ದರಿಂದ ಬಹುತೇಕ ರೈತರು ಬೆಳೆಯನ್ನು ನಾಶಮಾಡಿ, ಗದ್ದೆಯನ್ನು ಖಾಲಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಕಟಾವಿನ ವೆಚ್ಛ ಭರಿಸಲೂ ಹಣವಿಲ್ಲದೇ ಬೆಳೆಯನ್ನು ಗದ್ದೆಯಲ್ಲಿಯೇ ಒಣಗಲು ಬಿಟ್ಟಿದ್ದಾರೆ. ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ಕೆಲವು ರೈತರು, ಕಡಿಮೆ ಬೆಲೆಗೆ ಕೋಸು ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.
ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಎಲೆಕೋಸು ಬೆಲೆ ₹1ಗೆ ಇಳಿದಿದೆ. ರೈತರು ಬೆಳೆಯನ್ನು ಕಟಾವು ಮಾಡಿ, ಮಾರುಕಟ್ಟೆಗೆ ಸಾಗಿಸಿದರೆ ತಗುಲುವ ವೆಚ್ಛವೂ ಮರಳಿ ಬರುವುದಿಲ್ಲ. ಹೀಗಾಗಿ, ಬೆಳೆ ಕಟಾವು ಮಾಡುವ ಬದಲು ಇಡೀ ಹೊಲವನ್ನು ಟಿಲ್ಲರ್ ಬಳಸಿ ಗೊಬ್ಬರವಾಗಿ ಪರಿವರ್ತಿಸುತ್ತಿದ್ದಾರೆ. ಇನ್ನೂ ಕೆಲವರು ಖರ್ಚು ವೆಚ್ಛ ಮೈಮೇಲೆ ಬಂದರೂ, ಹೊಲ ಖಾಲಿ ಮಾಡುವುದಕ್ಕಾಗಿ ಎಲೆಕೋಸು ಕಟಾವು ಮಾಡುತ್ತಿದ್ದಾರೆ. ಕೆಲವರು ಹೊಲದಲ್ಲಿಯೇ ಒಣಗಲು ಬಿಟ್ಟಿದ್ದಾರೆ. ಕೆಲವು ಕಡೆ ಎಲೆಕೋಸು ಬೆಳೆದ ಹೊಲದಲ್ಲಿ ಆಡು, ಕುರಿ, ಜಾನುವಾರು ಮೇಯುತ್ತಿವೆ.
ಮಳೆಯ ಕಣ್ಣುಮುಚ್ಚಾಲೆಯಲ್ಲಿ ಬೆಳೆಗಳು ಮೊದಲೇ ನಿತ್ರಾಣಗೊಂಡಿದ್ದವು. ವಿದ್ಯುತ್ ಕೊರತೆಯ ನಡುವೆಯೂ ಹಗಲು ರಾತ್ರಿಯೆನ್ನದೇ ಬೆಳೆಗೆ ನೀರುಣಿಸಿದ ರೈತರು ಹೇಗೊ ಬೆಳೆ ಉಳಿಸಿಕೊಂಡಿದ್ದರು. ಬೆಳೆ ಒಣಗದಂತೆ, ಆರೋಗ್ಯಕರ ಗೆಡ್ಡೆ ಕಟ್ಟುವಂತೆ ಮಾಡಲು ಸಾಕಷ್ಟು ಶ್ರಮ ವಹಿಸಿದ್ದರು. ಆದರೆ, ಬೆಲೆ ಕುಸಿತದಿಂದ ರೈತರು ಕೈಗೊಂಡ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಗುಲ್ಲಹಳ್ಳಿ ಗ್ರಾಮದ ರೈತ ಕೊಂಡಪ್ಪ ನಾಯಕ ಸಂಕಷ್ಟ ತೋಡಿಕೊಂಡರು.
ರೈತರು ಎಕರೆಗಟ್ಟಲೆ ಗದ್ದೆಯಲ್ಲಿ ಕ್ಯಾಬೇಜ್ ಬೆಳೆದಿದ್ದರು. ಇದರಿಂದ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ರೈತರ ಹಿತಾಸಕ್ತಿಗಳನ್ನು ಕಾಪಾಡಲು, ರಾಜ್ಯದಲ್ಲಿಯೂ ಕೇರಳದ ರೀತಿಯಲ್ಲಿ ಕೃಷಿ ನೀತಿಗಳನ್ನು ಅಳವಡಿಸಬೇಕು ಎಂದು ಚಿಕ್ಕಅಂಕಂಡಹಳ್ಳಿ ಗ್ರಾಮದ ರೈತ ಗಿರೀಶ್ ಗೌಡ ಒತ್ತಾಯಿಸಿದರು.
ಸಗಟು ಮಾರುಕಟ್ಟೆಯಲ್ಲಿ ಕ್ಯಾಬೇಜ್ ಬೆಲೆ ತೀವ್ರವಾಗಿ ಕುಸಿತ ಕಂಡಿದೆ. ಅನೇಕ ರೈತರು ಎಲೆಕೋಸುಗಳನ್ನು ಸಗಟು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಬದಲು ತಮ್ಮ ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ ಎಂದು ರೈತ ಚಂದ್ರಪ್ಪ ಹೇಳಿಕೊಂಡರು.
ಎಲೆಕೋಸು ಬೆಳೆಯುವುದು ಸುಲಭ ಸಾಧ್ಯವಾಗಿಲ್ಲ. ಕೀಟ ಹಾಗೂ ರೋಗಬಾಧೆ ಬೇಗ ತಗುಲುತ್ತದೆ. ಜಮೀನಿನಲ್ಲಿ ಸಸಿಗಳನ್ನು ನಾಟಿ ಮಾಡಿದಾಗಿನಿಂದ, ಬೆಳೆ ಕಟಾವಿಗೆ ಬರುವುದರೊಳಗೆ ವಾರಕ್ಕೊಮ್ಮೆ ಔಷಧ ಸಿಂಪಡಣೆ ಮಾಡಬೇಕು. ಕಡಿಮೆ ಬೆಲೆಯ ಔಷಧಿಯಿಂದ ಕೀಟ ಹಾಗೂ ರೋಗ ಹತೋಟಿಗೆ ಬರುವುದಿಲ್ಲ. ಇಷ್ಟೆಲ್ಲಾ ಖರ್ಚು ಮಾಡಿ ಬೆಳೆದ ಬೆಳೆ ಹೀಗೆ ಬೆಲೆ ಕುಸಿತ ಕಂಡರೆ ರೈತರ ಗತಿ ಏನು? ಯಾರಲ್ಲಿ ಪರಿಹಾರ ಕೇಳುವುದು ಎಂದು ಅನಿಗಾನಹಳ್ಳಿ ಗೋವಿಂದ ಗೌಡ ಅವಲತ್ತುಕೊಂಡರು.
ಅಧಿಕ ಉಷ್ಣಾಂಶದಿಂದ ಸಾಗಾಣಿಕೆಯ ವೇಳೆ ಕ್ಯಾಬೇಜ್ ಕೊಳೆತು ನಾಶವಾಗುವ ಕಾರಣ, ಇತರೆ ರಾಜ್ಯಗಳಿಗೆ ಸಾಗಾಣಿಕೆಯನ್ನು ನಿಲ್ಲಿಸಲಾಗಿದೆ. ಇದರಿಂದ ಬೇಡಿಕೆಗಿಂತ ಪೂರೈಕೆ ಅಧಿಕವಾಗಿ ರಾಜ್ಯದಲ್ಲಿ ಕ್ಯಾಬೇಜ್ ಬೆಲೆಯ ತೀವ್ರ ಕುಸಿತ ಕಂಡಿದೆ. ಮೇಲಿನ ಅಧಿಕಾರಿಗಳಿಗೆ ವರದಿ ನೀಡಿ, ರೈತರಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು.-ಶಿವಾರೆಡ್ಡಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಔಷಧಿ, ಬೀಜ, ಗೊಬ್ಬರದ ವೆಚ್ಚ ಸೇರಿ ಎಕರೆಗೆ ₹30ರಿಂದ ₹40 ಸಾವಿರ ಖರ್ಚು ಬರುತ್ತದೆ. ಎಲೆಕೋಸು ಬೆಲೆ ಕೆ.ಜಿಗೆ ₹1 ಕನಿಷ್ಠ ಬೆಲೆಗೆ ತಲುಪಿದೆ. ಕಟಾವು ಮಾಡುವ ಕೂಲಿಗೂ ಸಾಲುತ್ತಿಲ್ಲ. ಆದ್ದರಿಂದ ರೈತರು ಟ್ರ್ಯಾಕ್ಟರ್‌ಗಳನ್ನು ಬಳಸಿ ಕ್ಯಾಬೇಜ್‌ಗಳನ್ನು ಹೊಲದಲ್ಲಿಯೇ ನಾಶಪಡಿಸುತ್ತಿದ್ದಾರೆ.-ಸುಬ್ರಮಣಿ, ಮಿಟ್ಟಹಳ್ಳಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.