ADVERTISEMENT

ಜಿಲ್ಲೆಯ ರೈತರ ಹಿತ ಕಾಯುತ್ತೇವೆ

ಸಭೆಯಲ್ಲಿ ರೈತ ಮುಖಂಡರಿಗೆ ಜಿಲ್ಲಾಧಿಕಾರಿ ಸತ್ಯಭಾಮ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 12:41 IST
Last Updated 1 ಏಪ್ರಿಲ್ 2020, 12:41 IST
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕೋಲಾರದಲ್ಲಿ ಬುಧವಾರ ರೈತ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕೋಲಾರದಲ್ಲಿ ಬುಧವಾರ ರೈತ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.   

ಕೋಲಾರ: ‘ರೈತರು ಜಮೀನುಗಳಲ್ಲಿ ಬೆಳೆದ ತರಕಾರಿ ಮಾರಾಟವಾಗಿ ಗ್ರಾಹಕರ ಕೈಸೇರುವವರೆಗೂ ಅದನ್ನು ಕಾಪಾಡುವುದು ಜಿಲ್ಲಾಡಳಿತದ ಜವಾಬ್ದಾರಿ. ತರಕಾರಿ ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ರೈತರ ಹಿತ ಕಾಯುತ್ತೇವೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭರವಸೆ ನೀಡಿದರು.

ಇಲ್ಲಿ ಬುಧವಾರ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು, ಎಪಿಎಂಸಿ ಆಡಳಿತ ಮಂಡಳಿ ಸದಸ್ಯರು ಹಾಗೂ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬೆಲೆ ಕುಸಿತವಾಗಿದೆ ಎಂದು ರೈತರು ತರಕಾರಿಯನ್ನು ರಸ್ತೆಗೆ ಸುರಿಯಬಾರದು. ಬೆಲೆ ಕುಸಿತದ ಕಾರಣಕ್ಕೆ ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದರು.

‘ಕೊರೊನಾ ಸೋಂಕು ತಡೆಗಾಗಿ ದೇಶದೆಲ್ಲೆಡೆ ದಿಗ್ಬಂಧನ ಜಾರಿಯಲ್ಲಿದ್ದರೂ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಂಡಿದ್ದೇವೆ. ಮಾರುಕಟ್ಟೆಗಳು ಹಾಗೂ ಅಂಗಡಿಗಳ ಬಳಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಬಗ್ಗೆ ಸಾಕಷ್ಟು ದೂರು ಬಂದಿವೆ. ಆದರೂ ಜಿಲ್ಲೆಯ ಮಾರುಕಟ್ಟೆಗಳು ಮತ್ತು ಅಂಗಡಿಗಳಲ್ಲಿ ವಹಿವಾಟಿಗೆ ಅವಕಾಶ ಕಲ್ಪಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಸಾಮಾಜಿಕ ಅಂತರ, ಸುರಕ್ಷತಾ ಮಾರ್ಗಸೂಚಿ ಪಾಲನೆ ಸಂಬಂಧ ಜಿಲ್ಲೆಯ ಜನರಿಗೆ ಅರಿವು ಮೂಡಿಸಿದ್ದೇವೆ. ತರಕಾರಿ ಸಾಗಣೆ ವಾಹನಗಳಿಗೆ ಪಾಸ್‌ ನೀಡಲಾಗಿದೆ. ರೈತರಿಗೆ, ಜನರಿಗೆ ಹಾಗೂ ವರ್ತಕರಿಗೆ ಯಾವುದೇ ಸಹಕಾರ ನೀಡಲು ಸಿದ್ಧವಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದ್ರಾಕ್ಷಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಬೆಲೆ ಕುಸಿತದ ಕಾರಣಕ್ಕೆ ರೈತರು ಟೊಮೆಟೊವನ್ನು ರಸ್ತೆಗೆ ಸುರಿದಿದ್ದಾರೆ. ಆ ಪರಿಸ್ಥಿತಿ ಜಿಲ್ಲೆಯ ರೈತರಿಗೆ ಬರದಂತೆ ಎಚ್ಚರ ವಹಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಅಧಿಕಾರಿಗಳು ರೈತರಿಗೆ ಆತ್ಮಸ್ಥೈರ್ಯ ತುಂಬಬೇಕು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಹಾಗೂ ಸಿಬ್ಬಂದಿಯು ಜಿಲ್ಲೆಯಲ್ಲಿ ತರಕಾರಿಗೆ ಬೇಡಿಕೆ ಎಷ್ಟಿದೆ ಮತ್ತು ವಹಿವಾಟು ಎಷ್ಟು ನಡೆಯುತ್ತಿದೆ ಎಂಬ ಮಾಹಿತಿ ಸಂಗ್ರಹಿಸಬೇಕು. ಎಪಿಎಂಸಿ ಆಡಳಿತ ಮಂಡಳಿ ಸದಸ್ಯರು ಹಾಗೂ ರೈತ ಮುಖಂಡರೊಂದಿಗೆ ಕೃಷಿ ಮತ್ತು ತೋಟಗಾರಿಕೆ ಸಚಿವರ ಬಳಿ ನಿಯೋಗ ತೆರಳಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಚರ್ಚಿಸುತ್ತೇವೆ: ‘ಕೃಷಿ ಉತ್ಪನ್ನಗಳ ಬೆಲೆ ಕುಸಿತದ ವಿಚಾರವಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ನಿರ್ದೇಶಕರೊಂದಿಗೆ ಚರ್ಚಿಸುತ್ತೇವೆ. ಏನೇ ಸಮಸ್ಯೆ ಬಂದರೂ ರೈತರೊಂದಿಗೆ ನಾವಿದ್ದೇವೆ. ರೈತರು ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಿ’ ಎಂದು ಮನವಿ ಮಾಡಿದರು.

‘ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳು ಹಾಗೂ ಪಟ್ಟಣ ಪ್ರದೇಶದಲ್ಲಿ ಹಣ್ಣು, ತರಕಾರಿ ವಹಿವಾಟಿಗೆ ಯಾವುದೇ ತೊಂದರೆ ಕೊಡುತ್ತಿಲ್ಲ. ವಹಿವಾಟಿನ ಸ್ಥಳದಲ್ಲಿ ಹೆಚ್ಚಿನ ಜನರು ಗುಂಪುಗೂಡಬಾರದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಸುರಕ್ಷತಾ ಮಾರ್ಗಸೂಚಿ ಪಾಲಿಸಿದರೆ ಯಾವ ತೊಂದರೆಯಿಲ್ಲ’ ಎಂದು ಸ್ಪಷ್ಟಪಡಿಸಿದರು.

ರೇಷ್ಮೆಗೂಡು ವಹಿವಾಟು: ‘ಕೊರೊನಾ ಸೋಂಕಿನ ಭೀತಿ ಕಾರಣಕ್ಕೆ ನಾಲ್ಕೈದು ದಿನಗಳಿಂದ ರೇಷ್ಮೆಗೂಡು ಮಾರುಕಟ್ಟೆ ಬಂದ್‌ ಮಾಡಲಾಗಿದೆ. ಇದರಿಂದ ರೇಷ್ಮೆಗೂಡಿನ ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ರೇಷ್ಮೆಗೂಡನ್ನು ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದಂತಾಗಿದೆ. ತರಕಾರಿ ಮಾರುಕಟ್ಟೆಯಂತೆಯೇ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಹಿವಾಟಿಗೆ ಅವಕಾಶ ನೀಡಬೇಕು’ ಎಂದು ರೇಷ್ಮೆ ಬೆಳೆಗಾರರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಹಿವಾಟಿನ ಪುನರಾರಂಭದ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು. ರೇಷ್ಮೆ ಬೆಳೆಗಾರರು ಗೂಡನ್ನು ನೇರವಾಗಿ ರೀಲರ್ಸ್‌ಗಳಿಗೆ ಮಾರಾಟ ಮಾಡಬಹುದು. ಗೂಡಿನ ದರ ಮತ್ತು ತೂಕದಲ್ಲಿ ಯಾವುದೇ ಮೋಸವಾಗದಂತೆ ಕ್ರಮ ಕೈಗೊಳ್ಳಲು ರೇಷ್ಮೆಗೂಡು ಮಾರುಕಟ್ಟೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ರೈತ ಮುಖಂಡರು, ರೇಷ್ಮೆ ಬೆಳೆಗಾರರು ಕೃಷಿ ಉತ್ಪನ್ನ ಸಾಗಣೆ ವೇಳೆ ಎದುರಾಗುತ್ತಿರುವ ತೊಂದರೆ, ಮಾರುಕಟ್ಟೆ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.